ವಿ.ವಿಗಳಿಂದಲೇ ಜಾತಿ ವಿನಾಶ ಆರಂಭವಾಗಲಿ

7
ಡಾ.ಅಂಬೇಡ್ಕರ್ ಜನ್ಮದಿನಾಚರಣೆಯಲ್ಲಿ ಹಿರಿಯ ರಂಗಕರ್ಮಿ ಬಸವಲಿಂಗಯ್ಯ ಅಭಿಮತ

ವಿ.ವಿಗಳಿಂದಲೇ ಜಾತಿ ವಿನಾಶ ಆರಂಭವಾಗಲಿ

Published:
Updated:
ವಿ.ವಿಗಳಿಂದಲೇ ಜಾತಿ ವಿನಾಶ ಆರಂಭವಾಗಲಿ

ಬೆಂಗಳೂರು: `ಜಾತಿಗಳ ವಿನಾಶವೇ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಮ ಗುರಿಯಾಗಿತ್ತು. ಆದರೆ, ವಿಶ್ವವಿದ್ಯಾಲಯ ಸೇರಿದಂತೆ ಎಲ್ಲೆಡೆ ರೋಗಗ್ರಸ್ತ ಜಾತಿಗಳು ತಾಂಡವವಾಡುತ್ತಿವೆ' ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಅಭಿಪ್ರಾಯಪಟ್ಟರು.ಬೆಂಗಳೂರು ವಿ.ವಿ ಭಾನುವಾರ ಏರ್ಪಡಿಸಿದ್ದ ಡಾ. ಅಂಬೇಡ್ಕರ್ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. `ಜಾತಿ ಸಂಘಟನೆಗಳ ಅಬ್ಬರ ಜೋರಾಗಿರುವ ವಿ.ವಿಗಳಿಂದಲೇ ಜಾತಿ ವಿನಾಶ ಆರಂಭವಾಗಬೇಕಿದೆ' ಎಂದು ಆಶಿಸಿದರು. `ಮಹಾತ್ಮ ಗಾಂಧಿ ಮತ್ತು ಮಾನವತಾವಾದಿ ಅಂಬೇಡ್ಕರ್ ಇಬ್ಬರೂ ಜಾತಿ ವಿನಾಶಕ್ಕಾಗಿಯೇ ಹೋರಾಡಿದವರು. ಆದರೆ, ಇಬ್ಬರನ್ನೂ ವಿರೋಧಿಗಳಂತೆ ಬಿಂಬಿಸುವ ಪ್ರಯತ್ನಗಳು ನಡೆದಿವೆ. ಮೇಲ್ವರ್ಗದಿಂದ ಬಂದ ಗಾಂಧಿ ಬಡವರಂತೆ ತುಂಡು ಬಟ್ಟೆ ತೊಟ್ಟು ಕಳಕಳಿ ಮೆರೆದರೆ, ತಳ ಸಮುದಾಯದಿಂದ ಬಂದ ಅಂಬೇಡ್ಕರ್ ಸೂಟುಧಾರಿಯಾಗುವ ಮೂಲಕ ಸ್ವಾಭಿಮಾನ ಮೆರೆದರು' ಎಂದು ಹೇಳಿದರು.`ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದೇ ಮಹಾತ್ಮ ಗಾಂಧಿ. ಬಹುತೇಕರು ಇತಿಹಾಸದ ಇಂತಹ ಘಟನೆಗಳ ಅರಿವಿಲ್ಲದೆ ಮಾತನಾಡುತ್ತಾರೆ' ಎಂದು ವಿಷಾದಿಸಿದರು. `ನಮ್ಮ ಜನ ಜಾತಿಗಳ ಸಂಶೋಧನೆಗೆ ಕೊಟ್ಟಷ್ಟು ಒತ್ತನ್ನು ಬೇರೆ ಯಾವ ಸಂಗತಿಗಳಿಗೂ ನೀಡುವುದಿಲ್ಲ. ಒಬ್ಬ ವ್ಯಕ್ತಿಯ ಹೆಸರಿನಿಂದಲೇ ಆತನ ಜಾತಿ ಹುಡುಕಾಟ ಆರಂಭವಾಗುತ್ತದೆ' ಎಂದು ಆಕ್ರೋಶ ಹೊರಹಾಕಿದರು.

`ರಾಮಾಯಣ ರಚಿಸಿದ ವಾಲ್ಮೀಕಿ, ಮಹಾಭಾರತ ಬರೆದ ವ್ಯಾಸ, ಅಭಿಜ್ಞಾನ ಶಾಕುಂತಲ ರಚಿಸಿದ ಕಾಳಿದಾಸ ಯಾರೂ ಮೇಲ್ವರ್ಗದವರಲ್ಲ. ಆದ್ದರಿಂದಲೇ ಪುರೋಹಿತಶಾಹಿಗಳು ತಮ್ಮ ಬಂಡವಾಳ ಗೊತ್ತಾಗಬಾರದು ಎಂಬ ಎಚ್ಚರಿಕೆಯಲ್ಲಿ ನದಿಮೂಲ ಮತ್ತು ಋಷಿಮೂಲ ಎರಡನ್ನೂ ಹುಡುಕಬಾರದು ಎನ್ನುವ ಗಾದೆ ರಚಿಸಿದ್ದಾರೆ' ಎಂದು ಗೇಲಿ ಮಾಡಿದರು.`ಸಂವಿಧಾನ ರಚಿಸಿದ ಅಂಬೇಡ್ಕರ್ ಸಹ ತಳ ಸಮುದಾಯದಿಂದಲೇ ಬಂದವರು. ಶ್ರೇಷ್ಠತೆ ವ್ಯಸನದಲ್ಲಿ ಇದ್ದವರಿಂದ ಯಾವ ಸಾಧನೆಯನ್ನೂ ಮಾಡಲು ಆಗಿಲ್ಲ' ಎಂದು ಹೇಳಿದರು. `ನಮ್ಮ ನೀಲಗಾರರು ಮಂಟೆಸ್ವಾಮಿ ಕಾವ್ಯ ಹಾಡಿದರೆ ಅವರನ್ನು ಭಿಕ್ಷುಕರಂತೆ ನೋಡಲಾಗುತ್ತದೆ. ಅದೇ ರಘು ದೀಕ್ಷಿತ್ ಅವರಂತಹ ಕಲಾವಿದರು ಹಾಡಿದರೆ ಅವರನ್ನು ಅಂತರರಾಷ್ಟ್ರೀಯ ಕಲಾವಿದರಂತೆ ಬಿಂಬಿಸಲಾಗುತ್ತದೆ. ಪ್ರತಿಭೆಗೆ ಏನು ಮಾನದಂಡ ಎನ್ನುವುದೇ ಗೊತ್ತಾಗುವುದಿಲ್ಲ' ಎಂದು ತಿಳಿಸಿದರು.`ಜಾಗತಿಕರಣದ ಸನ್ನಿವೇಶದಲ್ಲಿ ರೈತ ತನ್ನ ಹೊಲ-ಮನೆ ಕಳೆದುಕೊಂಡು ಬೀದಿಪಾಲು ಆಗುತ್ತಿದ್ದಾನೆ. ಆತನಿಗೆ ಸ್ಥಳ ಎಲ್ಲಿ ಎಂಬ ಕುರಿತು ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ವಿ.ವಿಗಳು ಈಗಲೂ ವಸಾಹತುಶಾಹಿ ಚಿಂತನೆ ಬಿತ್ತುತ್ತಿವೆ. ಸಂವಿಧಾನವನ್ನು ಸರಿಯಾಗಿ ಅರ್ಥೈಸಿ, ಅದರ ಸಮರ್ಪಕ ಅನುಷ್ಠಾನಕ್ಕೆ ಮಾರ್ಗಗಳು ಅಲ್ಲಿಯೇ ತೆರೆದುಕೊಳ್ಳಬೇಕಿದೆ' ಎಂದು ಆಶಿಸಿದರು.ಮುಖ್ಯ ಅತಿಥಿಯಾಗಿದ್ದ ವಿಶ್ರಾಂತ ಕುಲಪತಿ ಡಾ.ಎನ್.ಆರ್. ಶೆಟ್ಟಿ, `ಡಾ. ಅಂಬೇಡ್ಕರ್ ಅವರ ವಿಚಾರಧಾರೆಯಿಂದ ನಾನು ಪ್ರಭಾವಿತನಾದ ಕಾರಣ, ಬೆಂಗಳೂರು ವಿ.ವಿ ಕುಲಪತಿಯಾಗಿದ್ದಾಗ ಬಳಹಷ್ಟು ಜನ ದಲಿತರನ್ನು ನೇಮಕ ಮಾಡಿಕೊಂಡೆ' ಎಂದು ಹೇಳಿದರು. `ಜಗತ್ತಿನ ಮೊದಲ ನೂರು ಶ್ರೇಷ್ಠ ವಿ.ವಿಗಳಲ್ಲಿ ಭಾರತದ ಒಂದೂ ವಿ.ವಿ ಇಲ್ಲ. ಓಬಿರಾಯನ ಕಾಲದ ಪಠ್ಯ ಇಟ್ಟುಕೊಂಡು ಈಗಲೂ ವಿದ್ಯಾರ್ಥಿಗಳಿಗೆ ಅದನ್ನೇ ಕಂಠಪಾಠ ಮಾಡಿಸುವಲ್ಲಿ ಯಾವುದೇ ಅರ್ಥ ಇಲ್ಲ. ನಮ್ಮ ಶೈಕ್ಷಣಿಕ ವ್ಯವಸ್ಥೆ ಆಮೂಲಾಗ್ರ ಬದಲಾವಣೆ ಹೊಂದಬೇಕಿದೆ. ಅಂತರಶಿಸ್ತೀಯ ವಿಭಾಗಗಳ ನಡುವಿನ ಗೋಡೆಗಳನ್ನೆಲ್ಲ ಒಡೆದುಹಾಕಬೇಕಿದೆ' ಎಂದು ಅಭಿಪ್ರಾಯಪಟ್ಟರು.`ಗುಣಮಟ್ಟ, ಸಮಾನತೆ ಮತ್ತು ಗಮ್ಯತೆ ಶಿಕ್ಷಣದ ಮೂಲ ಮಂತ್ರಗಳಾಗಬೇಕು. ವಿದ್ಯಾರ್ಥಿಗಳಲ್ಲಿ ವಿಷಯಗಳನ್ನು ನೆನಪಿಡುವ ಸರ್ಕಸ್ ಮಾಡಿಸುವುದಕ್ಕಿಂತ ಅರ್ಥ ಮಾಡಿಕೊಳ್ಳುವ ಗುಣ ಬೆಳೆಸಬೇಕು' ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ, `ನಾನು ಅಧಿಕಾರದಲ್ಲಿ ಇರುವಷ್ಟು ಕಾಲ ಯಾವ ಸಮುದಾಯಕ್ಕೂ ಅನ್ಯಾಯ ಮಾಡುವುದಿಲ್ಲ. ಯಾರಿಗೆ ಯಾವ ಅರ್ಹ ಸೌಲಭ್ಯ ಸಿಗಬೇಕೋ, ಅವರಿಗೆ ಅಂತಹ ಸೌಲಭ್ಯ ಸಿಗುವಂತೆ ನೋಡಿಕೊಳ್ಳುತ್ತೇನೆ' ಎಂದು ಘೋಷಿಸಿದರು.`ನೀತಿ ಸಂಹಿತೆ ಜಾರಿಗೆ ಬಂದಿರುವ ಕಾರಣ ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಕೊಡುವ ಯೋಜನೆ ಮುಂದೂಡಲಾಗಿದೆ' ಎಂದು ಹೇಳಿದರು.

ಹಿಂದುಳಿದ ವರ್ಗಗಳ ವಿದ್ಯಾರ್ಥಿ ಸಂಘಟನೆ ಮುಖಂಡ ಜಿ. ಗೋವಿಂದಯ್ಯ, `ವಿ.ವಿ ಆಡಳಿತ ಕಚೇರಿ ಮುಂದೆ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಬೇಕು ಮತ್ತು ವಿ.ವಿಗೆ ಅಂಬೇಡ್ಕರ್ ಅವರ ಹೆಸರನ್ನೇ ನಾಮಕರಣ ಮಾಡಬೇಕು' ಎಂದು ಆಗ್ರಹಿಸಿದರು. ಕುಲಸಚಿವರಾದ ಪ್ರೊ.ಕೆ.ಕೆ.ಸೀತಮ್ಮ, ಪ್ರೊ.ಆರ್.ಕೆ. ಸೋಮಶೇಖರ್, ಹಣಕಾಸು ಅಧಿಕಾರಿ ಆರ್.ರಾಮಣ್ಣ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry