`ವಿ.ವಿಗಳು ಬೌದ್ಧಿಕ ಉನ್ನತಿ ಕೇಂದ್ರವಾಗಲಿ'

7

`ವಿ.ವಿಗಳು ಬೌದ್ಧಿಕ ಉನ್ನತಿ ಕೇಂದ್ರವಾಗಲಿ'

Published:
Updated:
`ವಿ.ವಿಗಳು ಬೌದ್ಧಿಕ ಉನ್ನತಿ ಕೇಂದ್ರವಾಗಲಿ'

ಬೆಳಗಾವಿ: `ಸಂಶೋಧನೆ, ಅಭಿವೃದ್ಧಿ ಹಾಗೂ ವಿಜ್ಞಾನ ಅಧ್ಯಯನಕ್ಕೆ ಉತ್ತೇಜನ ನೀಡಲು ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇ 1ರಷ್ಟನ್ನು ಪ್ರತಿ ವರ್ಷ ವಿನಿಯೋಗಿಸುವ ಮೂಲಕ ವಿಶ್ವವಿದ್ಯಾಲಯಗಳನ್ನು ಬೌದ್ಧಿಕ ಉನ್ನತಿ ಕೇಂದ್ರಗಳನ್ನಾಗಿ ಮಾಡಬೇಕು' ಎಂದು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಸಲಹೆ ಮಾಡಿದರು.ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಶನಿವಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದ ಭಾಷಣ ಮಾಡಿದ ಅವರು, `ವಿಶ್ವವಿದ್ಯಾಲಯಗಳು ರಾಷ್ಟ್ರದ ಔದ್ಯಮಿಕ ಹಾಗೂ ಆರ್ಥಿಕ ಪ್ರಗತಿಗೆ ಅಗತ್ಯವಾದ ವೈಜ್ಞಾನಿಕ, ಬೌದ್ಧಿಕ ಹಾಗೂ ತಾಂತ್ರಿಕ ಬೆಂಬಲವನ್ನು ಒದಗಿಸಬೇಕು' ಎಂದರು. `ದೇಶದ 18ರಿಂದ 24 ವಯೋಮಾನದ ಉನ್ನತ ಶಿಕ್ಷಣಕ್ಕೆ ಅರ್ಹರಾದವರ ಪೈಕಿ ಶೇ 15ರಿಂದ 20ರಷ್ಟು ಮಂದಿ  ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯಲು ನಮಗೆ ಇನ್ನೂ 750 ಹೊಸ ವಿಶ್ವವಿದ್ಯಾಲಯಗಳ ಅಗತ್ಯವಿದೆ. ಇಷ್ಟೊಂದು ಸಂಖ್ಯೆಯ ಶ್ರೇಷ್ಠ ಕುಲಪತಿಗಳು, ವಿಜ್ಞಾನಿಗಳು ಹಾಗೂ ಸಮರ್ಥ ಅಧ್ಯಾಪಕರು ನಮ್ಮಲ್ಲಿದ್ದಾರೆಯೇ' ಎಂದು ಪ್ರಶ್ನಿಸಿದ ಅವರು, `ಇಂದಿನ ಲೆಕ್ಕದಲ್ಲಿ ಸರ್ಕಾರವು ಪ್ರತಿ ವರ್ಷರೂ8,000 ಕೋಟಿ  ವಿನಿಯೋಗಿಸಬೇಕು. ಜತೆಗೆ ಖಾಸಗಿ ವಲಯದಿಂದಲೂ ಇಷ್ಟೇ ಪ್ರಮಾಣದ ಹಣ ವಿನಿಯೋಗವಾಗಬೇಕು' ಎಂದು  ಅಭಿಪ್ರಾಯಪಟ್ಟರು.

`ವಿಜ್ಞಾನ, ಅದರಲ್ಲೂ ಗಣಿತಶಾಸ್ತ್ರವು ಯುವಕರ ಆಟವಾಗಿದೆ. ವಿಜ್ಞಾನದ ಅತ್ಯದ್ಭುತ ಶೋಧಗಳೆಲ್ಲವೂ ಯುವ ವಿಜ್ಞಾನಿಗಳಿಂದಾಗಿವೆ. ಆದರೆ, ಇಂದು ಪ್ರತಿಭಾವಂತ ಯುವಕರು ಶಿಕ್ಷಣ ಹಾಗೂ ಮೂಲ ವಿಜ್ಞಾನಗಳತ್ತ ಆಕರ್ಷಿತರಾಗುತ್ತಿಲ್ಲ. ಬದಲಾಗಿ ಉದ್ಯಮ ಹಾಗೂ ಔದ್ಯೋಗಿಕ ಕ್ಷೇತ್ರಗಳತ್ತ ವಾಲುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಸುಮಾರು 168 ರಾಯಲ್ ಸೊಸೈಟಿ ಫೆಲೊಗಳಿದ್ದಾರೆ.

ಭಾರತದ ಜನಸಂಖ್ಯೆ ಆಸ್ಟ್ರೇಲಿಯಾಕ್ಕಿಂತ 250 ಪಟ್ಟು ಹೆಚ್ಚಾಗಿದೆ. ಆದರೆ ಇಲ್ಲಿ ಕೇವಲ 10 ಜನ ರಾಯಲ್ ಸೊಸೈಟಿ ಫೆಲೊಗಳಿದ್ದಾರೆ. ನಮ್ಮ ವಿಶ್ವವಿದ್ಯಾಲಯಗಳು ಶೈಕ್ಷಣಿಕ ಔನ್ನತ್ಯವನ್ನು ಸಲುಹಬೇಕು' ಎಂದು ಅವರು ಹೇಳಿದರು.ಗೌರವ ಡಾಕ್ಟರೇಟ್ ಪ್ರದಾನ: ಘಟಿಕೋತ್ಸವದಲ್ಲಿ ವೆಂಕಟಾಚಲಯ್ಯ, ಕೃಷಿ ಅರ್ಥಶಾಸ್ತ್ರಜ್ಞ ಪ್ರೊ. ಎಸ್. ಬಿಸಲಯ್ಯ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ, ನಾಗನೂರು ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ, ಶಿಕ್ಷಣ ತಜ್ಞ ಪ್ರೊ. ಎಂ.ಐ. ಸವದತ್ತಿ, ವಿಧಾನಪರಿಷತ್ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಮೇಯರ್ ಸಿದ್ಧನಗೌಡ ಪಾಟೀಲ, ಹಿರಿಯ ಪತ್ರಕರ್ತ ಡಾ. ಸರಜೂ ಕಾಟ್ಕರ್ ಹಾಗೂ ವಿಜಾಪುರದ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಬಿ.ಎಂ. ಪಾಟೀಲ (ಮರಣೋತ್ತರ) ಪರವಾಗಿ ಅವರ ಪತ್ನಿ ಕಮಲಾಬಾಯಿ ಅವರಿಗೆ ಕುಲಪತಿ ಪ್ರೊ. ಬಿ.ಆರ್. ಅನಂತನ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಅರ್ಥಶಾಸ್ತ್ರಜ್ಞೆ ಪ್ರೊ. ಐಶರ್ ಜಡ್ಜ್ ಅಹ್ಲುವಾಲಿಯಾ ಮತ್ತು ವಿಜ್ಞಾನಿ ಡಾ. ಕೃಷ್ಣಸ್ವಾಮಿ ಕಸ್ತೂರಿರಂಗನ್ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ನೀಡಲಾಯಿತು.ರಾಜ್ಯಪಾಲರ ಗೈರು: ಪ್ರಥಮ ಘಟಿಕೋತ್ಸವ ಸಮಾರಂಭಕ್ಕೆ ವಿಶ್ವವಿದ್ಯಾಲಯದ ಕುಲಾಧಿಪತಿ, ರಾಜ್ಯಪಾಲ ಹಂಸರಾಜ ಭಾರದ್ವಾಜ್, ಉನ್ನತ ಶಿಕ್ಷಣ ಸಚಿವ, ಸಹ ಕುಲಾಧಿಪತಿಯಾದ ಸಿ.ಟಿ. ರವಿ  ಗೈರುಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry