ವಿವಿಧೆಡೆ ಬಂದ್: ಮಿಶ್ರ ಪ್ರತಿಕ್ರಿಯೆ,ಪ್ರತಿಭಟನೆ

7

ವಿವಿಧೆಡೆ ಬಂದ್: ಮಿಶ್ರ ಪ್ರತಿಕ್ರಿಯೆ,ಪ್ರತಿಭಟನೆ

Published:
Updated:

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮೊಕದ್ದಮೆ ದಾಖಲಿಸಲು ರಾಜ್ಯಪಾಲರು ಅನುಮತಿ ನೀಡಿರುವ ಕ್ರಮ ವಿರೋಧಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶನಿವಾರ ಕರೆ ನೀಡಿದ್ದ ಬಂದ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ನಗರದಲ್ಲಿ ಖಾಸಗಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ  ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪ್ರಯಾಣಿಕರಿಲ್ಲದ್ದರಿಂದ ಎರಡು ಬಸ್ ನಿಲ್ದಾಣಗಳು ಬಣಗುಡುತ್ತಿದ್ದವು. ರಾಷ್ಟ್ರೀಯ ಹೆದ್ದಾರಿ ಮೂಲಕ ಬಸ್‌ಗಳು ಸಂಚರಿಸಿದವು.ಬಿ.ಡಿ. ರಸ್ತೆ, ಹೊಳಲ್ಕೆರೆ ರಸ್ತೆ, ಮೇದೆಹಳ್ಳಿ ರಸ್ತೆ, ಲಕ್ಷ್ಮೀಬಜಾರ್ ಸುತ್ತಮುತ್ತ ವ್ಯಾಪ್ತಿಯಲ್ಲಿ ಎಲ್ಲ ಅಂಗಡಿಗಳು ಹಾಗೂ ಚಲನಚಿತ್ರ ಮಂದಿರ, ಹೋಟೆಲ್‌ಗಳು, ಬ್ಯಾಂಕ್‌ಗಳು, ತರಕಾರಿ ಮಾರುಕಟ್ಟೆಗಳನ್ನು ಕಾರ್ಯಕರ್ತರು ಬೆಳಿಗ್ಗೆಯೇ ಬಲವಂತವಾಗಿ ಮುಚ್ಚಿಸಿದರು. ಔಷಧ ಅಂಗಡಿಗಳು ಹಾಗೂ ಕೆಲವು ಪೆಟ್ರೋಲ್ ಬಂಕ್‌ಗಳು ತೆರೆದಿದ್ದವು. ಎಂದಿನಂತೆ ಆಟೋರಿಕ್ಷಾ ಸಂಚಾರವಿತ್ತು.ನ್ಯಾಯಾಲಯದ ಕಲಾಪ ಎಂದಿನಂತೆ ನಡೆಯಿತು. ಆದರೆ, ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದರಿಂದ ಗ್ರಾಮೀಣ ಪ್ರದೇಶದ ಕಕ್ಷಿದಾರರು ಆಗಮಿಸಲಿಲ್ಲ. ಇದರಿಂದ ಹಲವು ಪ್ರಕರಣಗಳ ವಿಚಾರಣೆ ಮುಂದೂಡಲಾಯಿತು.ಪ್ರತಿಭಟನಾ ಮೆರವಣಿಗೆ: ಬಂದ್ ಅಂಗವಾಗಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು. ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜನಾರ್ದನಸ್ವಾಮಿ, ರಾಜ್ಯಪಾಲರು ಕೇಂದ್ರದ ಅಣತಿಯಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.ಪ್ರಧಾನಿ ಅವರ ಮೇಲೆಯೂ ಸಾಕಷ್ಟು ಆಪಾದನೆಗಳು ಕೇಳಿ ಬಂದಿವೆ. ಆದರೆ, ರಾಷ್ಟ್ರಪತಿಯವರು ಯಾವುದೇ ಕ್ರಮಕೈಗೊಂಡಿಲ್ಲ. ಇದು ಕೇಂದ್ರ ಸರ್ಕಾರದ ದ್ವಿಮುಖ ನೀತಿಯನ್ನು ಪ್ರದರ್ಶಿಸುತ್ತದೆ ಎಂದರು.ವಿಧಾನಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಬಂದ್‌ನಿಂದ ಜನರಿಗೆ ತೊಂದರೆ ಆಗಿರುವುದಕ್ಕೆ ಕ್ಷಮೆಯಾಚಿಸುತ್ತೇವೆ. ಆದರೆ, ರಾಜ್ಯಪಾಲರು ಕಾಂಗ್ರೆಸ್‌ನ ಏಜಂಟರಂತೆ ವರ್ತಿಸುತ್ತಿರುವುದರಿಂದ ಈ ರೀತಿಯ ಪ್ರತಿಭಟನೆ ಅನಿವಾರ್ಯ. ಬಿಜೆಪಿ ಸರ್ಕಾರ ಆಡಳಿತ ನಡೆಸಲು ರಾಜ್ಯಪಾಲರು ಅಡ್ಡಗಾಲು ಹಾಕುತ್ತಿದ್ದಾರೆ. ಇದಕ್ಕೆಲ್ಲ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತ ಬಂದಿದೆ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿ ಆಡಳಿತಕ್ಕೆ ಬಂದಿರುವ ಬಿಜೆಪಿಯನ್ನು ಉರುಳಿಸಲು ರಾಜ್ಯಪಾಲರು ಪಣ ತೊಟ್ಟಂತಿದೆ ಎಂದು ದೂರಿದರು.ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ಮುಕ್ಕಾಲು ವರ್ಷಗಳಿಂದ ಆಡಳಿತ ನಡೆಸುತ್ತಿದ್ದು, ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಎಲ್ಲ ಜಾತಿ ವರ್ಗದ ಜನರಿಗೆ ಸಾಕಷ್ಟು ಸ್ಪಂದಿಸಿದ್ದಾರೆ. ಇದನ್ನು ಸಹಿಸಲಾಗದ ವಿರೋಧ ಪಕ್ಷದ ಮುಖಂಡರು ರಾಜ್ಯಪಾಲರ ಮೂಲಕ ಈ ರೀತಿಯ ಪಿತೂರಿ ನಡೆಸುತ್ತಿದ್ದಾರೆ ಎಂದು ತಿಪ್ಪಾರೆಡ್ಡಿ ಆರೋಪಿಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದೇಶ್‌ಯಾದವ್ ಮಾತನಾಡಿ,  ರಾಜ್ಯಪಾಲರೇ ಖುದ್ದಾಗಿ ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಎಚ್.ಆರ್. ಭಾರದ್ವಾಜ್ ಅವರೇ ವಹಿಸಿಕೊಳ್ಳಲಿ ಎಂದು ಲೇವಡಿ ಮಾಡಿದರು.ನ್ಯಾಯಾಲಯದ ವಿಚಾರಣೆಗೆ ಮುನ್ನವೇ ಮುಖ್ಯಮಂತ್ರಿ ವಿರುದ್ಧ ಈ ರೀತಿ ಕ್ರಮಕೈಗೊಂಡಿರುವುದರ ಜತೆಗೆ ಅಸಭ್ಯ, ಅಸಹನೀಯ ಪದಗಳನ್ನು ಬಳಸಿರುವುದು ನಾಡಿನ ಜನತೆಗೆ ಮಾಡಿರುವ ಅವಮಾನವಾಗಿದೆ. ಇಂತಹ ಕೆಟ್ಟ ಪರಂಪರೆಗೆ ನಾಂದಿ ಹಾಡಿದ ಮೊದಲ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರನ್ನು ಕೇಂದ್ರ ಸರ್ಕಾರ ತಕ್ಷಣ ವಾಪಸ್ ಕರೆಯಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.ಮುಖಂಡರಾದ ಬದರಿನಾಥ್, ರಂಗಸ್ವಾಮಿ, ಎಚ್. ಮಂಜುನಾಥ್, ನಾಗರಾಜ ಬೇದ್ರೆ, ವಿಜಯಲಕ್ಷ್ಮಿ, ಮುರುಳಿ, ಮಂಜುಳಮ್ಮ, ಬಸಮ್ಮ, ಶಂಕರ್, ರಾಜಕುಮಾರ್, ಉಷಾಬಾಯಿ, ಕೆ. ತಿಪ್ಪೇಸ್ವಾಮಿ, ರಾಮದಾಸ್, ಮೊಹನ್, ಜಿ.ಎಂ. ಜಯಪ್ರಕಾಶ್, ಶಿವಣ್ಣಾಚಾರ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ಪ್ರಜಾಪ್ರಭುತ್ವಕ್ಕೆ ಅಪಚಾರ

ಚಳ್ಳಕೆರೆ ವರದಿ:  ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ವಿರುದ್ಧ ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದ ಬಿಜೆಪಿ ಪಟ್ಟಣದಲ್ಲಿ ಮುಂಜಾನೆಯಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಂಡಿರುವುದು ಎಲ್ಲೆಡೆ ಕಂಡುಬಂದಿತು. ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಸೋಮಶೇಖರ್ ಮಂಡಿಮಠ್  ಮಾತನಾಡಿ,  ಅಭಿವೃದ್ಧಿಪರ ಸರ್ಕಾರಕ್ಕೆ ಜನಾದೇಶ ನೀಡಿರುವುದನ್ನು ಸಹಿಸಲಾರದೇ ಪ್ರತಿಪಕ್ಷಗಳು ಹಿಂಬಾಗಿಲ ರಾಜಕೀಯ ಕುತಂತ್ರದಲ್ಲಿ ತೊಡಗಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿರುವ ಅಪಚಾರ ಎಂದು ಹರಿಹಾಯ್ದರು.ಬಿಜೆಪಿ ಮುಖಂಡ ಕೆ.ಟಿ. ಕುಮಾರಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಪಿ. ಬೋರನಾಯಕ, ಜಿಲ್ಲಾ ಪಂಚಾಯ್ತಿ ಸದಸ್ಯ ಜೆ.ಪಿ. ಜಯಪಾಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗರಾಜ್, ತಾ.ಪಂ. ಸದಸ್ಯ ಸಿ.ಟಿ. ಶ್ರೀನಿವಾಸ್, ಪಾಲಣ್ಣ, ಕಾಟಯ್ಯ, ಬಾಸ್ಕರ ಶೆಟ್ಟಿ, ಪುರಸಭೆ ಸದಸ್ಯರಾದ ನಾಗರಾಜ್, ಟಿ.ಜೆ. ತಿಪ್ಪೇಸ್ವಾಮಿ, ಶೇಖರಪ್ಪ, ರವಿಕುಮಾರ್ ಇತರರು ಉಪಸ್ಥಿತರಿದ್ದರು.ಪ್ರತಿಕೃತಿ ದಹನ:  ಶಾಸಕ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಪಾವಗಡ ರಸ್ತೆಯಿಂದ ಗುಂಪಾಗಿ ಬಂದ ಬಿಜೆಪಿ ಕಾರ್ಯಕರ್ತರು ನೆಹರು ವೃತ್ತದಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry