ಶುಕ್ರವಾರ, ಮೇ 14, 2021
29 °C

ವಿವಿಧೆಡೆ ಭಾರಿ ಮಳೆ: ಜನರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ನಗರದಲ್ಲಿ ಗುರುವಾರ ರಾತ್ರಿ  69 ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ 127.8ರಷ್ಟು ಮಳೆ ದಾಖಲಾಗಿದೆ. ಹೂವಿನಹಡಗಲಿ 9.6, ಹಗರಿಬೊಮ್ಮನಹಳ್ಳಿ 6.2, ಹೊಸಪೇಟೆ 9, ಕೂಡ್ಲಿಗಿ 2.6, ಸಂಡೂರು 31.0 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಗುರುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ವಿವಿಧ ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನಸಾಮಾನ್ಯರು ಪರದಾಡುವಂತಾಗಿದೆ.ನಗರದ ಬೆಂಗಳೂರು ರಸ್ತೆ, ಹಳೇ ಬಸ್ ನಿಲ್ದಾಣ, ಬೆಂಕಿಮಾರೆಮ್ಮ ದೇವಸ್ಥಾನದ ಬೀದಿ, ಗ್ರಾಹಂ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿದಿದ್ದು, ಹಲವು ಪ್ರದೇಶಗಳಲ್ಲಿನ ಕೆಳ ಸೇತುವೆ ತುಂಬಿ ಸಂಚಾರಕ್ಕೆ ತೊಂದರೆಯುಂಟಾಗಿದೆ. ನಗರದ ಹಲವಾರು ಪ್ರದೇಶಗಳಲ್ಲಿರುವ ಚರಂಡಿಗಳು ತ್ಯಾಜ್ಯ ವಸ್ತುಗಳಿಂದ ಸಂಪೂರ್ಣ ಮುಚ್ಚಿಹೋಗಿದ್ದು, ಮಳೆ ನೀರು ಹರಿದು ಹೋಗಲು ಯಾವುದೇ ವ್ಯವಸ್ಥೆ ಇಲ್ಲದ್ದರಿಂದ ನಗರದ ಕುರುಬರ ಓಣಿ, ಬೀರಪ್ಪ ದೇವಸ್ಥಾನದ ಬೀದಿ, , ಬಳ್ಳಾರಪ್ಪ ಕಾಲೊನಿ, ಕೊರಚ ಬೀದಿ, ಬಂಡಿಮೋಟ್, ಪಟೇಲ್ ನಗರ ಕೆಳಭಾಗ, ಮಿಲ್ಲರ್‌ಪೇಟೆ, ಕೌಲ್‌ಬಜಾರ್ ಸೇರಿದಂತೆ ಹಲವು ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿ, ಇಡೀ ರಾತ್ರಿ ಜನರು ತೊಂದರೆ ಅನುಭವಿಸುವಂತಾಯಿತು.ಮನೆಗಳು ಜಲಾವೃತ

ಹೂವಿನಹಡಗಲಿ: ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಡಿಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹುಗಲೂರು ಮತ್ತು ನಾಗತಿಬಸಾಪುರ ಗ್ರಾಮಗಳಲ್ಲಿ ಮನೆಗಳು ಜಲಾವೃತಗೊಂಡಿವೆ. ಗುರುವಾರ ರಾತ್ರಿ ತಾಲ್ಲೂಕಿನ ಕೆಲವು ಭಾಗದಲ್ಲಿ ಮಾತ್ರ ರಭಸದ ಮಳೆ ಸುರಿದಿದ್ದು, ಶುಕ್ರವಾರ ಮಧ್ಯಾಹ್ನದಿಂದ ತಾಲ್ಲೂಕಿನಾದ್ಯಂತ ಜಡಿಮಳೆ ಸುರಿಯುತ್ತಿರುವುದರಿಂದ ಕೆರೆ ಕುಂಟೆಗಳು ತುಂಬಿ ಹರಿಯುತ್ತಿವೆ. ಕೆಲವು ಕಡೆ ಮಳೆಯ ನೀರು ಜನವಸತಿಗಳಿಗೆ ನುಗ್ಗಿದ್ದರಿಂದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ತಾಲ್ಲೂಕಿನಲ್ಲಿ ಸರಾಸರಿ 9.2 ಸೆಂ.ಮೀ. ಮಳೆ ಬಿದ್ದಿರುವ ಬಗ್ಗೆ ಮಳೆಮಾಪನ ಕೇಂದ್ರದಲ್ಲಿ ದಾಖಲಾಗಿದೆ.ನಾಗತಿಬಸಾಪುರ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆ ಕಾಮಗಾರಿಯ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಇಡೀ ಊರಿನಿಂದ ಸಂಗ್ರಹವಾಗಿ ಬರುವ ನೀರು ಬೆಂಚಿಕಟ್ಟಿಯ ಮೂಲಕ ದೇವಿ ನಗರ ನುಗ್ಗಿದೆ. ಈ ನಗರದ ಸುಮಾರು 80 ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿನ ದವಸ ಧಾನ್ಯಗಳು ಹಾಳಾಗಿದ್ದು, ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ಹೊಟ್ಟು, ಮೇವು ಕೊಚ್ಚಿಕೊಂಡು ಹೋಗಿದೆ.ಶುಕ್ರವಾರ ಕಂದಾಯ ಮತ್ತು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಂಚಿಕಟ್ಟೆಯ ತಗ್ಗು ಪ್ರದೇಶವನ್ನು ಸಮತಟ್ಟುಗೊಳಿಸಿಕೊಡುವಂತೆ ಸಂತ್ರಸ್ತರು ಮನವಿ ಮಾಡಿದರು. ರಭಸದ ಮಳೆಯಿಂದ ಹಾನಿಗೀಡಾದ ಮನೆ, ಆಸ್ತಿಪಾಸ್ತಿಗಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.ಹೊಲ ಗದ್ದೆಯ ನೀರು ಹುಗಲೂರು ಗ್ರಾಮದ ತಗ್ಗಾದ ಪ್ರದೇಶಕ್ಕೆ ನುಗ್ಗಿದ್ದರಿಂದ ಅಲ್ಲಿನ ಐದಾರು ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ರಾತ್ರಿಯ ಸಂದರ್ಭದಲ್ಲಿ ಗ್ರಾಮಸ್ಥರು ಅಲ್ಲಿನ ನಿವಾಸಿಗಳನ್ನು ರಕ್ಷಿಸಿದ್ದಾರೆ. ಮನೆಯಲ್ಲಿದ್ದ ದವಸ ಧಾನ್ಯಗಳು ನೀರುಪಾಲಾಗಿವೆ. ಗ್ರಾಮ ಪಂಚಾಯ್ತಿ ಸಿಬ್ಬಂದಿ ಆಯಿಲ್ ಎಂಜಿನ್ ಮೂಲಕ ನೀರನ್ನು ಹೊರಕ್ಕೆ ಸಾಗಿಸಲು ಕ್ರಮ ಕೈಗೊಂಡಿದ್ದರು.

ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ತಾಲ್ಲೂಕಿನ ಪ್ರಮುಖ ಹಿರೇಹಡಗಲಿ, ಹಗರನೂರು, ದೇವಗೊಂಡನಹಳ್ಳಿ, ನಾಗತಿಬಸಾಪುರ ಕೆರೆಗಳಿಗೆ ನೀರು ಬರುತ್ತಿದೆ. ಗೋಕಟ್ಟೆ, ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ತಾಲ್ಲೂಕಿನ ಕೆಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.ತಹಶೀಲ್ದಾರ್ ಭೇಟಿ: ಮಳೆಯಿಂದ ಹಾನಿಯಾಗಿರುವ ನಾಗತಿಬಸಾಪುರ ಮತ್ತು ಹುಗಲೂರು ಗ್ರಾಮಕ್ಕೆ ತಹಶೀಲ್ದಾರ್ ಎ.ಬಿ. ವಿಜಯಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಅತೀವೃಷ್ಟಿಯಿಂದ ಆಗಿರುವ ಹಾನಿಯ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ದೊರಕಿಸಿಕೊಡುವಂತೆ ಕ್ರಮ ಕೈಗೊಳ್ಳುವುದಾಗಿ ಪ್ರಜಾವಾಣಿಗೆ ತಿಳಿಸಿದರು.ಸಹಾಯವಾಣಿ: ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಹಾನಿಗೊಳಗಾಗುವರ ತುರ್ತು ರಕ್ಷಣೆಗಾಗಿ ತಾಲ್ಲೂಕು ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ದಿನದ 24 ಗಂಟೆಯೂ ಕಂದಾಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ದೂರವಾಣಿ ಸಂಖ್ಯೆ (08399) 240238 ಸಂಪರ್ಕಿಸಿ ಸಹಾಯ ಪಡೆಯಬಹುದು ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.