ವಿವಿಧೆಡೆ ಮಳೆ: ಸಿಡಿಲಿಗೆ ಐವರು ಯುವಕರು ಬಲಿ

7

ವಿವಿಧೆಡೆ ಮಳೆ: ಸಿಡಿಲಿಗೆ ಐವರು ಯುವಕರು ಬಲಿ

Published:
Updated:
ವಿವಿಧೆಡೆ ಮಳೆ: ಸಿಡಿಲಿಗೆ ಐವರು ಯುವಕರು ಬಲಿ

ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರ ರಾತ್ರಿ ಮತ್ತು ಶುಕ್ರವಾರ ಮಳೆಯಾಗಿದ್ದು ಸಿಡಿಲಿಗೆ ಹಾವೇರಿ, ಗುಲ್ಬರ್ಗ, ಉತ್ತರ ಕನ್ನಡ, ಗದಗ  ಮತ್ತು ವಿಜಾಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸೇರಿ ಒಟ್ಟು ಐವರು ಬಲಿಯಾಗಿದ್ದಾರೆ.ಹುಬ್ಬಳ್ಳಿ ವರದಿ: ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಶುಕ್ರವಾರ ರಭಸದ ಮಳೆಯಾಗಿದೆ. ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕು ಚಿನ್ನಮುಳಗುಂದ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದಿದೆ.ಗ್ರಾಮದ ದುರ್ಗೋಜಿ ಪರಸಪ್ಪನವರ (17) ಎಂಬಾತನೇ ಮೃತಪಟ್ಟ ಯುವಕ. ಹೊಲಕ್ಕೆ ತೆರಳಿದ್ದ ದುರ್ಗೋಜಿ ಸಂಜೆ ಮೋಡ ಕವಿಯುತ್ತಿದ್ದಂತೆಯೇ ಮನೆಗೆ ವಾಪಸ್ಸಾಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಮಳೆ ಶುರುವಾಗಿದೆ. ಅದರಿಂದ ರಕ್ಷಣೆ ಪಡೆಯುವುದಕ್ಕಾಗಿ ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಾಣೆಬೆನ್ನೂರು ತಾಲ್ಲೂಕಿನ ಗುಡ್ಡದಹೊಸಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಸಾವನ್ನಪ್ಪಿದೆ. ಇನ್ನೊಂದು ಎತ್ತು ಗಾಯಗೊಂಡಿದೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸತೀಶ ಸುಂಕಾಪುರ ಎಂಬ ಯುವಕನಿಗೂ ಗಾಯಗಳಾಗಿವೆ.ಹಿರೇಕೆರೂರ ತಾಲ್ಲೂಕಿನ ಕಡೂರ ಗ್ರಾಮದಲ್ಲಿ ಸಿಡಿಲಿಗೆ ಆಕಳೊಂದು ಬಲಿಯಾಗಿದೆ. ಅದೇ ತಾಲ್ಲೂಕಿನ ತಾವರಗಿ ಗ್ರಾಮದ ನೀರಿನ ಟ್ಯಾಂಕ್ ಹಾಗೂ ಹಾವೇರಿ ನಗರದ ಒಳ ಕ್ರೀಡಾಂಗಣ ಕಟ್ಟಡಕ್ಕೆ ಸಿಡಿಲು ಬಡಿದು ಹಾನಿಯಾಗಿದೆ. ಶುಕ್ರವಾರ ಬೆಳಿಗ್ಗೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಒಟ್ಟು 54.9 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಧಾರವಾಡದಲ್ಲಿ ಶುಕ್ರವಾರ ಸಂಜೆ ಭಾರಿ ಗುಡುಗು ಸಹಿತ ಮಳೆಯಾಗಿದ್ದರಿಂದ ಚರಂಡಿಗಳು ತುಂಬಿಕೊಂಡು ನೀರೆಲ್ಲ ರಸ್ತೆ ಮೇಲೆ ಹರಿಯಿತು. ಮಳೆಯಿಂದ ಹಲವೆಡೆ ಸಂಪರ್ಕ ಕಡಿತಗೊಂಡ ಕಾರಣ ರಾತ್ರಿ ಬಹುಹೊತ್ತಿನವರೆಗೆ ವಿದ್ಯುತ್ ಇಲ್ಲದೆ ಜನ ಕತ್ತಲಲ್ಲೇ ಕಾಲ ಕಳೆಯುವಂತಾಯಿತು.ಗದಗ-ಬೆಟಗೇರಿ ಅವಳಿನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸುರಿದ ಮಳೆ ಬಿಸಿಲಿನಿಂದ ಬಸವಳಿದ ಜನತೆಗೆ ತಂಪಿನ ವಾತಾವರಣ ನೀಡಿತು. ಕೆಲವಡೆ ನೀರು ಮನೆಗಳಿಗೆ ನುಗ್ಗಿ ಹಾನಿ ಉಂಟುಮಾಡಿತು. ನಗರದಲ್ಲಿ ನಡೆಯುತ್ತಿದ್ದ ರಾಷ್ಟ್ರಮಟ್ಟದ ಹಾಕಿ ಟೂರ್ನಿಗೂ ಇದರಿಂದ ಅಡಚಣೆಯಾಯಿತು.ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ 2.30ಕ್ಕೆ ಆರಂಭವಾದ ಮಳೆ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಮಳೆಯಿಂದಾಗಿ ಬಸ್ ನಿಲ್ದಾಣ ರಸ್ತೆ, ಮಾರುಕಟ್ಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ಪಾದಚಾರಿಗಳು ಓಡಾಡಲು ಪರದಾಡಿದರು.ಗುಲ್ಬರ್ಗ ವರದಿ: ಸಿಡಿಲು ಬಡಿದು ಒಬ್ಬ ವ್ಯಕ್ತಿ ಹಾಗೂ ಎರಡು ಎತ್ತುಗಳು ಮೃತಪಟ್ಟ ಘಟನೆ ತಾಲ್ಲೂಕಿನ ಪಾಣೆಗಾಂವದಲ್ಲಿ ನಡೆದಿದೆ.ಸುರೇಶ ಪೂಜಾರಿ ಮೃತಪಟ್ಟವರು. ತಿಂಗಳ ಹಿಂದೆಯಷ್ಟೇ ಅವರ ವಿವಾಹವಾಗಿತ್ತು. ಹೊಲಕ್ಕೆ ಎತ್ತುಗಳನ್ನು ಕೊಂಡೊಯ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಉದನೂರ ಬಳಿ ಸಿಡಿಲು ಹೊಡೆದು ಮೂರು ಎತ್ತುಗಳು ಸತ್ತ ಬಗ್ಗೆ ವರದಿಯಾಗಿದೆ.ಹಳಿಯಾಳ ವರದಿ: ತಾಲ್ಲೂಕಿನ ಗೌಳಿವಾಡಾ ಗ್ರಾಮದ ಕಿಚ್ಚುಯಾನೆ ವಿಠ್ಠು ಬೀರು ಎಡಗೈ (27) ಎಂಬುವವರು ಶುಕ್ರವಾರ ಸಂಜೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ವಿಜಾಪುರ ವರದಿ: ತಾಲ್ಲೂಕಿನ ಹಂಚನಾಳ ಗ್ರಾಮದಲ್ಲಿ ಸಿಡಿಲು ಬಡಿದು ತೀವ್ರ ಗಾಯಗೊಂಡಿದ್ದ ಸದಾಶಿವ ಹಾದಿಮನಿ (18) ಎಂಬ ಯುವಕ ಮಮದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ತಡರಾತ್ರಿ ಮೃತಪಟ್ಟಿದ್ದಾನೆ.ಹಂಚಿನಾಳ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುವಾಗ ಗುರುವಾರ ಸಂಜೆ ಸಿಡಿಲು ಬಡಿದು ಸದಾಶಿವ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ. ಇನ್ನಿಬ್ಬರ ಕಾಲುಗಳಿಗೆ ಗಾಯವಾಗಿತ್ತು.ಗದಗ ವರದಿ: ಗದಗ ಜಿಲ್ಲೆಯ ಶಿರಹಟ್ಟಿ ಸಮೀಪದ ಕುಸಲಾಪುರ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ಸಿಡಿಲು ಬಡಿದು ಬಸಪ್ಪ ಸುಗ್ನಳ್ಳಿ (36) ಮೃತಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry