ವಿವಿಧೆಡೆ ರಬ್ಬರ್‌ ಖರೀದಿ ಕೇಂದ್ರ ಆರಂಭ

7

ವಿವಿಧೆಡೆ ರಬ್ಬರ್‌ ಖರೀದಿ ಕೇಂದ್ರ ಆರಂಭ

Published:
Updated:

ಉಪ್ಪಿನಂಗಡಿ: ಪ್ರಸಕ್ತ ಸಾಲಿನಲ್ಲಿ ಸಂಸ್ಥೆ 22,79,74,051­ರೂಪಾಯಿ ವ್ಯವಹಾರ ನಡೆಸಿದ್ದು, ರಬ್ಬರ್ ಖರೀದಿ ವ್ಯವಹಾರದಲ್ಲಿ 11,57,999 ರೂಪಾಯಿ ನಿವ್ವಳ ಲಾಭ ಗಳಿಸಿದೆ. ರೈತರು ಸಂಘಕ್ಕೆ ಮಾರಾಟ ಮಾಡಿದ ರಬ್ಬರ್‌ಗೆೆ ಕಿ.ಲೋ. ಒಂದಕ್ಕೆ 50 ಪೈಸೆಯಂತೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಪುತ್ತೂರು ತಾಲ್ಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.ಶನಿವಾರ ನೆಲ್ಯಾಡಿ ಕೇಂದ್ರ ಕಚೇರಿಯಲ್ಲಿ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದ ವತಿಯಿಂದ ನೆಲ್ಯಾಡಿ, ಕಡಬ, ಪುತ್ತೂರು, ಇಚಿಲಂಪಾಡಿ, ಕೆಯ್ಯೂರು, ಈಶ್ವರಮಂಗಲ, ಸವಣೂರುನಲ್ಲಿ ಈಗಾಗಲೇ ರಬ್ಬರ್ ಖರೀದಿ ಕೇಂದ್ರ ಕಾರ್ಯಾಚರಿಸುತ್ತಿದೆ. ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ, ಅಡ್ಯನಡ್ಕ, ಶಿರಾಡಿಯಲ್ಲಿ ಖರೀದಿ ಕೇಂದ್ರ ಆರಂಭಿಸಲಾಗುವುದು ಎಂದರು. ಸಂಘದ ಆಡಿಟ್ ವರದಿಯಲ್ಲಿ ಪ್ರಥಮ ಬಾರಿಗೆ “ಎ” ವರ್ಗ ದೊರೆತಿದೆ ಎಂದು ಅವರು ತಿಳಿಸಿದರು.ಸಂಘದ ನೂತನ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಿದ್ದು ಕಂಪ್ಯೂಟರಿಕೃತ ಕಚೇರಿ ಮತ್ತು ರಬ್ಬರ್ ಬೆಳೆಗಾರರಿಗೆ ಕಚ್ಚಾ ರಬ್ಬರ್ ದಾಸ್ತಾನು ಇಡಲು ಅನುಕೂಲವಾಗುವ ನಿಟ್ಟಿನಲ್ಲಿ ಅದರಲ್ಲಿ ಗೋದಾಮು ವ್ಯವಸ್ಥೆಯೂ ಇರುವುದಾಗಿ ಹೇಳಿದ ಅವರು ಪ್ರತೀ ಸದಸ್ಯರು ಸಾಧ್ಯವಾದಷ್ಟು ಮಟ್ಟಿಗೆ ಸಂಘದಲ್ಲೇ ಠೇವಣಿಯನ್ನು ಇಡುವುದರ ಜೊತೆಗೆ ತಾವು ಬೆಳೆದ ರಬ್ಬರನ್ನು ಪೂರ್ಣ ಪ್ರಮಾಣದಲ್ಲಿ ಸಂಘಕ್ಕೆ ಮಾರಾಟ ಮಾಡಿ  ಸಂಘದ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದರು.ಸಂಘಕ್ಕೆ ಅತಿ ಹೆಚ್ಚು ರಬ್ಬರ್ ಮಾರಾಟ ಮಾಡಿದ ಸದಸ್ಯ ಬಡಗನ್ನೂರಿನ ಸಿ.ಎಚ್. ಶ್ರೀನಿವಾಸ ಭಟ್, ಬಾಲಕೃಷ್ಣ, ಗಿರೀಶ್ ಕೃಷ್ಣ ಪಾಣಾಜೆ ಇವರನ್ನು ಸಂಘದ ವತಿಯಿಂದ ಗೌರವಿಸ­ಲಾಯಿತು.ಉಪಾಧ್ಯಕ್ಷ ರಾಯ್ ಅಬ್ರಹಾಂ, ನಿರ್ದೇಶಕರಾದ ಎನ್.ವಿ. ವ್ಯಾಸ, ಜಾರ್ಜ್ ಕುಟ್ಟಿ ಉಪದೇಶಿ, ಸತ್ಯಾನಂದ ನೂಜಿಬಾಳ್ತಿಲ, ರಮೇಶ ಕಲ್ಪುರೆ, ಅರುಣಾಕ್ಷಿ ನೆಲ್ಯಾಡಿ, ಭೈರ ಮುಗೇರ, ಸಹಕಾರಿ ಸಂಘಗಳ ಪ್ರತಿನಿಧಿ ಸುಭಾಸ್ ನಾಯಕ್ ಇದ್ದರು. ಸಂಘದ ಕಾರ್ಯದರ್ಶಿ ಈಶ್ವರ ಭಟ್ ವರದಿ ಮಂಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry