ಬುಧವಾರ, ನವೆಂಬರ್ 13, 2019
28 °C

ವಿವಿಧೆಡೆ ಶ್ರೀರಾಮನವಮಿ ಸಂಭ್ರಮ

Published:
Updated:

ತುಮಕೂರು: ನಗರದ ಎಲ್ಲೆಡೆ ಶುಕ್ರವಾರ ಶ್ರೀರಾಮನವಮಿ ಸಂಭ್ರಮ ಕಂಡುಬಂತು. ದೇವಾಲಯಗಳಲ್ಲಿ ರಾಮನವಮಿ ಅಂಗವಾಗಿ ವಿಶೇಷ ಅಲಂಕಾರ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ನಗರದ ಎಲ್ಲ ದೇವಾಲಯಗಳು ಮತ್ತು ಎಲ್ಲ ಬಡಾವಣೆಗಳ ಪ್ರಮುಖ ಸ್ಥಳಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಪ್ರಮುಖರು ರಾಮನವಮಿ ಅಂಗವಾಗಿ ಪ್ರಸಾದ ವ್ಯವಸ್ಥೆ ಮಾಡಿದ್ದರು. ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಜ್ಜಿಗೆ, ಪಾನಕ, ಕೋಸಂಬರಿ ಹಂಚಿಕೆ ಮಾಡಲಾಯಿತು. ದೇವಾಲಯಗಳಲ್ಲಿ ಭಕ್ತರು ಸಾಲಾಗಿ ನಿಂತು ಕೋಸಂಬರಿ, ಪಾನಕ ಸ್ವೀಕರಿಸಿದರು.ನಗರದ ಮಹಾಲಕ್ಷ್ಮೀ ನಗರ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೆಂಕಟೇಶ್ವರಸ್ವಾಮಿಗೆ ಸಾಮೂಹಿಕ ಅಭಿಷೇಕ, ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಲಕ್ಷ್ಮೀಗೆ ಸಹಸ್ರನಾಮಾರ್ಚನೆ ಏರ್ಪಡಿಸಲಾಗಿತ್ತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಹಾಮಂಗಳಾರತಿ, ಪಾನಕ ಸೇವೆ ನಡೆಯಿತು. ಸಂಜೆ ಡಾ.ಮೈಸೂರು ನಾಗಮಣಿ ಶ್ರೀನಾಥ್ ಅವರಿಂದ ಸಂಗೀತ ಸೌರಭ ಕಾರ್ಯಕ್ರಮ ನಡೆಯಿತು.ಕೆ.ಆರ್.ಬಡಾವಣೆ ಶ್ರೀರಾಮ ದೇವಾಲಯದಲ್ಲಿ ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. ಜಿ.ಶೀಲಾನಾಯ್ಡು ಮತ್ತು ಸಂಗಡಿಗರಿಂದ ಕಥಾ ಕಾಲಕ್ಷೇಪ ಏರ್ಪಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)