ಗುರುವಾರ , ಜೂನ್ 17, 2021
26 °C

ವಿವಿಧೆಡೆ ಸಂಭ್ರಮದ ರಥೋತ್ಸವ; ಭಕ್ತರ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲುಕೋಟೆ: ರಾಜಮುಡಿ ಕಿರೀಟ ಧರಿಸಿ ಶ್ರೀದೇವಿ, ಭೂದೇವಿ, ಕಲ್ಯಾಣ ನಾಯಕಿಯೊಂದಿಗೆ ಅಲಂಕೃತನಾಗಿ ಆಚಾರ್ಯ ರಾಮಾನುಜರೊಂದಿಗೆ ರಥಾರೋಹಣ ಮಾಡಿದ ಚಲುವರಾಯಸ್ವಾಮಿಯ ರಥೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.

ಈ ಸಂದರ್ಭದಲ್ಲಿ ಭಕ್ತರು ಹಣ್ಣು, ಜವನ, ಮೆಣಸು, ಉಪ್ಪು, ಎಸೆದು ಹರಕೆ ತೀರಿಸಿದರು. ರಥೋತ್ಸವದ ಉದ್ದಕ್ಕೂ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ ಮಾಡಲಾಯಿತು.ರಥೋತ್ಸವದ ಅಂಗವಾಗಿ ಮಹಾರಥವನ್ನು ಸಾರಥಿ,  ದ್ವಾರಪಾಲಕರು ಮತ್ತು ವಿವಿಧ ಹೂವುಗಳು, ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಅಮ್ಮನವರ ಸನ್ನಿಧಿಯಲ್ಲಿ ಬೆಳಿಗ್ಗೆ 12 ಗಂಟೆಗೆ ಯಾತ್ರಾದಾನ ನೆರೆವೇರಿತು. ನಂತರ ಮಹಾರಥಕ್ಕೆ ಅನ್ನ ಪ್ರಸಾದದ ರಥಬಲಿ ನೀಡಲಾಯಿತು.ಮಧ್ಯಾಹ್ನ 1 ಗಂಟೆಗೆ ಮಹಾರಥದ ಬಳಿಗೆ ವೇದಘೋಷ ಮಂಗಳ ವಾದ್ಯಗಳೊಂದಿಗೆ ಹೊರಟ ಸ್ವಾಮಿಯ ಭವ್ಯ ಉತ್ಸವವು ರಥ ಮಂಟಪಕ್ಕೆ ತಲುಪಿ ಮೂರು ಪ್ರದಕ್ಷಿಣೆ ಮಾಡಿದ ತರುವಾಯ ಜೋಯಿಸರಿಂದ ಮಹೂರ್ತ ಪಠಣವಾಯಿತು.ತೀರ್ಥ ಪ್ರಸಾದ ವಿನಿಯೋಗದ ನಂತರ ಪಾಂಡವಪುರ ಉಪವಿಭಾಗಾಧಿಕಾರಿ ವಾಣಿ ಅವರು, ಮಹಾರಥಕ್ಕೆ ಚಾಲನೆ ನೀಡಿದರು. ಪಾಂಡವಪುರ ತಹಶೀಲ್ದಾರ್ ಶಿವಕುಮಾರಸ್ವಾಮಿ, ದೇಗುಲದ ಪಾರುಪತ್ತೇಗಾರ್ ನಾಗರಾಜ ಅಯ್ಯಂಗಾರ್ ಭಾಗವಹಿಸಿದ್ದರು. ಸಡಗರದೊಂದಿಗೆ ಹೊರಟ ರಥ ಸಂಜೆ ಮತ್ತೆ ಮೂಲ ನೆಲೆಗೆ ತಲುಪಿತು.ಇಂದು ತೆಪ್ಪೋತ್ಸವ: ಪಂಚಕಲ್ಯಾಣಿಯಲ್ಲಿ ಸೋಮವಾರ ರಾತ್ರಿ ತೆಪ್ಪೋತ್ಸವ ನೆರವೇರಲಿದೆ. ಈ ಕಾರ್ಯಕ್ರಮದ ಅಂಗವಾಗಿ ಕಲ್ಯಾಣಿಯನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗುತ್ತದೆ. 19ರ ಬೆಳಿಗ್ಗೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ಸಂಜೆ ಪಟ್ಟಾಭಿಷೇಕ ನಡೆಯಲಿದ್ದು, ರಾಜಮುಡಿ ಕಿರೀಟಧಾರಣೆ ಮುಕ್ತಾಯವಾಗಲಿದೆ.ಆಂಜನೇಯಸ್ವಾಮಿ ರಥೋತ್ಸವ

ಕೃಷ್ಣರಾಜಪೇಟೆ: ತಾಲ್ಲೂಕಿನ ಮಡುವಿನಕೋಡಿಯ ಆಂಜನೇಯಸ್ವಾಮಿ ರಥೋತ್ಸವ ಭಾನುವಾರ ಸಡಗರ ಸಂಭ್ರಮಗಳಿಂದ ನೆರವೇರಿತು.ಗ್ರಾಮದ ಮುಖಂಡರು ಸರ್ವಾಲಂಕೃತ ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ರಥ ಸಂಚರಿಸಿತು. ರಥಯಾತ್ರೆ ಸಾಗುವ ಬೀದಿಗಳ ಇಕ್ಕೆಲಗಳಲ್ಲಿ ಬಣ್ಣ ಬಣ್ಣದ ರಂಗೋಲಿಗಳು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.ಗ್ರಾಮದ ಪ್ರಮುಖ ದೇವಾಲಯಗಳು ಮತ್ತು ರಥಬೀದಿ ವೈವಿಧ್ಯಮಯ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದವು. ನೆರೆದಿದ್ದ ಭಕ್ತರು ಹಣ್ಣು – ದವನಗಳನ್ನು ರಥಕ್ಕೆ ತೂರುವ ಮೂಲಕ ತಮ್ಮ ಭಕ್ತಿಭಾವ ಪ್ರದರ್ಶಿಸಿದರು. ತಮಟೆ, ಮಂಗಳವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಗಳು ರಥಯಾತ್ರೆಗೆ ಮೆರುಗು ತಂದಿದ್ದವು.ಸಂಜೆ ಗ್ರಾಮದ ಮುಂದಿನ ಬಯಲಿನಲ್ಲಿ ಏರ್ಪಡಿಸಲಾಗಿದ್ದ ಬಾಣು–ಬಿರುಸುಗಳ ಪ್ರದರ್ಶನ ನೆರೆದಿದ್ದವರ ಮನ ಸೂರೆಗೊಂಡಿತು. ಕಿವಿಗಡಚಿಕ್ಕುವಂತೆ ಸದ್ದು ಮಾಡುತ್ತಾ ಆಕಾಶದೆಡೆಗೆ ಮುಖಮಾಡಿ ನುಗ್ಗಿದ ಪಟಾಕಿಗಳು, ನಾಡ ರಾಕೆಟ್‌ಗಳು ಆಗಸದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ್ದಲ್ಲದೆ, ನೋಡುಗರ ಎದೆ ನಡುಗಿಸುವಂತಿದ್ದವು. ಸುತ್ತಮುತ್ತಲಿನ ಹೊಸಕೋಟೆ, ಮದ್ದಿಕ್ಯಾಚಮನಹಳ್ಳಿ, ಕಂಚಹಳ್ಳಿ, ದೊಡ್ಡಯಾಚೇನಹಳ್ಳಿ, ಮೆಳ್ಳಹಳ್ಳಿ, ಹರಿಹರಪುರ, ಬೊಮ್ಮೇನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ನಾಗರಿಕರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಮರಡಿಲಿಂಗೇಶ್ವರನ ಜೋಡಿ ರಥೋತ್ಸವ

ಕೃಷ್ಣರಾಜಪೇಟೆ: ಹಾಲು ಮತಸ್ಥರ ಆರಾಧ್ಯ ದೈವ ಮರಡಿಲಿಂಗೇಶ್ವರನ ಜೋಡಿ ರಥೋತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಭಾನುವಾರ ತಾಲ್ಲೂಕಿನ ನಗರೂರು – ಮಾರ್ಗೋನಹಳ್ಳಿ ಬಳಿ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಜನಾಂಗದ ಮುಖಂಡರು ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ದೊರೆಯಿತು.ತೇಗನಹಳ್ಳಿ, ಅಗ್ರಹಾರಬಾಚಹಳ್ಳಿ, ಚಿಲ್ಲದಹಳ್ಳಿ, ಹರಿರಾಯನಹಳ್ಳಿ, ಬಳ್ಳೇಕೆರೆ, ಕಾಡಮೆಣಸ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸಡಗರ ಸಂಭ್ರಮದಿಂದ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಂಡಿದ್ದರು. ಇಲ್ಲಿ ದೊಡ್ಡಯ್ಯ ಮತ್ತು ಚಿಕ್ಕಯ್ಯ ಎಂಬ ಉತ್ಸವ ಮೂರ್ತಿಗಳ ಜೋಡಿ ರಥೋತ್ಸವ ನಡೆಯುವುದು ವಿಶೇಷ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.