ವಿವಿಧೆಡೆ ಸಂಭ್ರಮದ ಷಷ್ಠಿ ರಥೋತ್ಸವ

7

ವಿವಿಧೆಡೆ ಸಂಭ್ರಮದ ಷಷ್ಠಿ ರಥೋತ್ಸವ

Published:
Updated:
ವಿವಿಧೆಡೆ ಸಂಭ್ರಮದ ಷಷ್ಠಿ ರಥೋತ್ಸವ

ಮಳವಳ್ಳಿ: ತಾಲ್ಲೂಕಿನ ಕಂದೇಗಾಲ, ಅಮೃತೇಶ್ವರನಹಳ್ಳಿ, ಮೋಳೆದೊಡ್ಡಿ, ಕಲ್ಲುವೀರನಹಳ್ಳಿ ಮಧ್ಯೆ ಇರುವ ಮತ್ತಿತಾಳೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮಂಗಳವಾರ 12ನೇ ವರ್ಷದ ಷಷ್ಠಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧೆ, ಭಕ್ತಿಯಿಂದ ನೆರವೇರಿತು.ಬೆಳಿಗ್ಗೆಯಿಂದ ಭಕ್ತರು ದೇವಾಲಯಕ್ಕೆ ಆಗಮಿಸಿ ಮೊದಲು ಗರ್ಭಗುಡಿಯಲ್ಲಿರುವ ದೇವರ ದರ್ಶನ ಪಡೆದರು. ನಂತರ ಆಗಮಿಕರಾದ ಮಲ್ಲಾರಾಧ್ಯ, ಸಿದ್ಧಲಿಂಗಾರಾಧ್ಯ, ಪಂಡಿತಾರಾಧ್ಯ ಅವರ ತಂಡದವರು ಉತ್ಸವ ಮೂರ್ತಿಗೆ ಪೂಜಾ ವಿಧಿ ವಿಧಾನಗಳನ್ನು ನೆರಬೇರಿದರು. ನಂತರ ಮಂಟೇಸ್ವಾಮಿ ಬಸವ ಬಂದು ಪೂಜೆ ಸಲ್ಲಿಸುತ್ತಿದ್ದಂತೆ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತಗೊಳಿಸಿದ್ದ ರಥದ ಒಳಗೆ ಪ್ರತಿಷ್ಠಾಪಿಸಲಾಯಿತು.  ಪೂಜೆ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಭಕ್ತರು ಹಣ್ಣು ದವನ ಎಸೆದರು.ಪ್ರತಿ ಬಾರಿ ನಡೆಯುವ ಮತ್ತಿತಾಳೇಶ್ವರಸ್ವಾಮಿ ದೇವಾಲಯದ ಷಷ್ಠಿ ರಥೋತ್ಸವ ಜಿಲ್ಲೆಯಲ್ಲಿಯೇ ವಿಶಿಷ್ಠ ಹಾಗೂ ಪ್ರಸಿದ್ಧ. ಜಿಲ್ಲೆ ಮಾತ್ರವಲ್ಲದೇ ನೆರೆಯ ಜಿಲ್ಲೆಗಳಿಂದ ಕೂಡ ಅಪಾರ ಭಕ್ತರು ಇಲ್ಲಿನ ಉತ್ಸವಕ್ಕೆ ಬರುತ್ತಾರೆ. ಹಣ್ಣು, ದವನಗಳನ್ನು ಅರ್ಪಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಇಷ್ಟಾರ್ಥ ಕೈಗೂಡಿದವರು ಹರಕೆಗಳನ್ನು ತೀರಿಸುತ್ತಾರೆ. ಈ ಬಾರಿ ಕೂಡ ಭಕ್ತರು ಸಡಗರದಿಂದ ಉತ್ಸವದಲ್ಲಿ ಪಾಲ್ಗೊಂಡರು. ಸಾವಿರಾರು ಜನ ಏಕಕಾಲಜ್ಕೆ ರಥ ಎಳೆದು ಭಕ್ತಿ ಮೆರೆದರು.ಹೊನ್ನನಾಯಕನಹಳ್ಳಿ ಬಸವ ಬಂದ ನಂತರ ರಥೋತ್ಸವ ಜರುಗುವುದು ಸಂಪ್ರದಾಯ. ಆದರೆ, ಬಸವ ದೇವಾಲಯಕ್ಕೆ ಬರುವುದು ನಿಗದಿಪಡಿಸಿದ್ದ ಸಮಯಕ್ಕಿಂತ ಒಂದು ಗಂಟೆ ತಡವಾಯಿತು. ಮಾಜಿ ಸಚಿವ ಬಿ.ಸೋಮಶೇಖರ್, ತಹಶೀಲ್ದಾರ್ ಎಂ.ಆರ್. ರಾಜೇಶ್ ಹಾಗೂ ಹಲವು ಗಣ್ಯರು ಭಾಗವಹಿಸಿದ್ದರು.ಸುಬ್ರಹ್ಮಣ್ಯ ಷಷ್ಠಿ ಮಹೋತ್ಸವ

ಮದ್ದೂರು: ಸಮೀಪದ ರಾಂಪುರದ ಇತಿಹಾಸ ಪ್ರಸಿದ್ಧ ಅದಿಷ್ಟ ಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಮಂಗಳವಾರ ವಿಶೇಷ ಪೂಜಾ ಕೈಂಕರ್ಯಗಳು ನಡೆದವು.ಸುಬ್ರಹ್ಮಣ್ಯಸ್ವಾಮಿಗೆ ವಿಶೇಷ ಅಭಿಷೇಕ, ಅಲಂಕಾರ, ಪೂಜೆ ಮಾಡಲಾಯಿತು. ರಾಜ್ಯದ ವಿವಿಧೆಡೆಗಳಿಂದ ಅಪಾರ ಭಕ್ತರು ಸಂಭ್ರಮದಿಂದ ಪಾಲ್ಗೊಂಡು ಹರಕೆ, ಅಭಿಷ್ಠೆಗಳನ್ನು ಅರ್ಪಿಸಿದರು. ಹೊಸದಾಗಿ ಮದುವೆಯಾದ ದಂಪತಿ ಮಕ್ಕಳ ಭಾಗ್ಯ ಕರುಣಿಸಲೆಂದು ಕೋರಿ ವಿಶೇಷ ಹರಕೆ ಸಲ್ಲಿಸುವುದು ಇಲ್ಲಿನ  ವಿಶೇಷ. ಸಾವಿರಾರು ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರೆ

ಪಾಂಡವಪುರ: ಷಷ್ಠಿ ಪ್ರಯುಕ್ತ ಪಟ್ಟಣದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಜರುಗಿತು.ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದ್ದ ದೇವಸ್ಥಾನಕ್ಕೆ ಬೆಳಗಿನ ಜಾವ 5 ಗಂಟೆಯಿಂದಲೇ ಆಗಮಿಸತೊಡಗಿದ ಅಪಾರ ಭಕ್ತಾದಿಗಳು ಅಲ್ಲಿನ ಹುತ್ತಕ್ಕೆ ಅರಿಸಿನ, ಕುಂಕುಮ ಬಳಿದು ಹೂ, ಬಾಳೆಹಣ್ಣು, ತೆಂಗಿನಕಾಯಿ ಇಟ್ಟು ಪೂಜೆ ಸಲ್ಲಿಸಿದರು. ಅಲ್ಲದೇ ಹುತ್ತಕ್ಕೆ ಹಾಲು ತುಪ್ಪ ನೈವೇದ್ಯ ಮಾಡಲು ಭಕ್ತರು ಮುಗಿಬೀಳುತ್ತಿದ್ದರು. ಹರಕೆ ಹೊತ್ತಿದ್ದ ಭಕ್ತರು ಬೆಳ್ಳಿ ನಾಗರವನ್ನು ಸಮರ್ಪಿಸಿ, ಅರಳಿಕಟ್ಟೆ ಸುತ್ತಿ ಭಕ್ತಿಭಾವ ಪ್ರದರ್ಶಿಸಿದರು. ವಿವಿಧ ಪುಷ್ಟಗಳು ಹಾಗೂ ಚಿನ್ನಾಭರಣಗಳಿಂದ ಸಿಂಗರಿಸಲಾಗಿದ್ದ ಸುಬ್ರಹ್ಮಣ್ಯ ದೇವರ ದರ್ಶನ ಪಡೆಯಲು ಭಕ್ತರು ಹಿಂಡು ಹಿಂಡಾಗಿ ಬರಲಾಂಭಿಸಿದಾಗ ನೂಕುನುಗ್ಗಲು ಉಂಟಾಯಿತು. ಮಧ್ಯಾಹ್ನ ಸುಬ್ರಹ್ಮಣ್ಯ ದೇವರ ಉತ್ಸವವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಹಿಳಾ ದೇವರಗುಡ್ಡರು ಹಾಗೂ ಮಕ್ಕಳು ಕವಾಡಿ ಹೊತ್ತುಕೊಂಡು ಸಾಗಿದರು. ಉತ್ಸವವು ಬರುವ ಹೊತ್ತಿನಲ್ಲಿ ಬೀದಿಗಳನ್ನು ರಂಗೋಲಿಯಿಂದ ಸಿಂಗರಿಸಲಾಗಿತ್ತು. ಅಲ್ಲಲ್ಲಿ ಭಕ್ತರು ಉತ್ಸವವಕ್ಕೆ ಹೂ, ಹಣ್ಣು, ಜವನ ಎಸೆದರು.ಷಷ್ಠಿ: ವಿಶೇಷ ಪೂಜೆ

ಶ್ರೀರಂಗಪಟ್ಟಣ: ಸುಬ್ರಹ್ಮಣ್ಯ ಷಷ್ಠಿಯ ಅಂಗವಾಗಿ ತಾಲ್ಲೂಕಿನ ವಿವಿಧೆಡೆ ಭಕ್ತರು ಮಂಗಳವಾರ ಹುತ್ತಕ್ಕೆ ಹಾಲೆರೆದು ಭಕ್ತಿಯಿಂದ ಪೂಜೆ ಸಲ್ಲಿಸಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂನ ನಿಮಿಷಾಂಬ ದೇಗುಲ ಹಾಗೂ ಅಂಜೂರ ತೋಟದ ಪಕ್ಕದಲ್ಲಿರುವ ಹುತ್ತಗಳಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹರಕೆ ಹೊತ್ತವರು ನಾರು ಮಡಿಯಲ್ಲಿ ದೀರ್ಘ ನಮಸ್ಕಾರ ಹಾಕಿದರು. ಮಕ್ಕಳ ಜತೆ ಆಗಮಿಸಿ ಹುತ್ತಕ್ಕೆ ತುಪ್ಪ ಮತ್ತು ಹಾಲೆರೆದು ಭಕ್ತಿ ಸಮರ್ಪಿಸಿದರು.ತಾಲ್ಲೂಕಿನ ಅರಕೆರೆ, ಬೆಳಗೊಳ, ಪಾಲಹಳ್ಳಿಗಳಲ್ಲಿ ನಾಗರ ಕಲ್ಲುಗಳಿಗೆ ಪೂಜೆ ನಡೆಯಿತು. ಕೊಡಿಯಾಲ, ಕೆ.ಶೆಟ್ಟಹಳ್ಳಿ. ಮಹದೇವಪುರ, ಬಲ್ಲೇನಹಳ್ಳಿ, ನೆಲಮನೆ, ದರಸಗುಪ್ಪೆ ಇತರ ಕಡೆಗಳಲ್ಲೂ ಸುಬ್ರಹ್ಮಣ್ಯ ಆರಾಧನೆ ಜರುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry