ಮಂಗಳವಾರ, ಜನವರಿ 28, 2020
29 °C

ವಿವಿಧ ಕ್ಷೇತ್ರದ ಗಣ್ಯರಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪರಿಶ್ರಮಪಟ್ಟು ಜೀವನದಲ್ಲಿ ಮುಂದೆ ಬಂದಿರುವವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕೆಲಸ. ಇಲ್ಲಿನ ಎಲ್ಲ ಕೈಗಾರಿಕೋದ್ಯಮಿಗಳು ಸೇರಿ ಗುಲ್ಬರ್ಗ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಂಸತ್ ಸದಸ್ಯ ಎನ್. ಧರ್ಮಸಿಂಗ್ ಅಭಿಪ್ರಾಯಪಟ್ಟರು.ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಹೈದರಾಬಾದ್ ಕರ್ನಾಟಕ ವಾಣಿಜ್ಯೋದ್ಯಮಿಗಳ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾವು ಸೇರಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದ್ದು, ಗುಲ್ಬರ್ಗದಲ್ಲಿ  ರೈಲ್ವೆ ವಿಭಾಗವನ್ನು ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಣ್ಣ ಕೈಗಾರಿಕೆ ಸಚಿವ ನರಸಿಂಹ ನಾಯಕ (ರಾಜೂಗೌಡ) ಮಾತನಾಡಿ, ಜಿಲ್ಲೆಯ ಸಣ್ಣ ಕೈಗಾರಿಕೆ ಕ್ಷೇತ್ರದಲ್ಲಿನ ಸಮಸ್ಯೆ ಕುರಿತು ಫೆಭ್ರುವರಿ ತಿಂಗಳಲ್ಲಿ ಕೈಗಾರಿಕೋದ್ಯಮಿಗಳ ಸಭೆ ಕರೆಯಲಾಗುತ್ತಿದೆ ಎಂದು ತಿಳಿಸಿದರು.ಕೈಗಾರಿಕೆ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಯಾದಗಿರಿಯಲ್ಲಿ ಈಗಾಗಲೇ 3,000 ಎಕರೆ ಪ್ರದೇಶವನ್ನು ಭೂಸ್ವಾಧೀನ ಮಾಡಿಕೊಳ್ಳಲಾಗಿದ್ದು, ಅಲ್ಲಿಯೂ ಉದ್ಯಮಗಳನ್ನು ಆರಂಭಿಸುವ ಮೂಲಕ ಸಣ್ಣ ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕೆಂದು ಉದ್ಯಮಿಗಳಲ್ಲಿ ಮನವಿ ಮಾಡಿದರು.ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ದಿ. ಶಿವಯ್ಯ ಸಿದ್ನಾಳ್, ದಿ. ಎ. ಚಿಂತಾಮಣಿ ರಾವ್, ರಾಮಗೋಪಾಲ ಕೆ. ಮಾಲು, ಮಹಿಬೂಬ್ ಅಲಿ ಮೊಹ್ಮದ್ ಅಲಿ, ಹನುಮಂತರಾವ ಇಂಗಿನಶೆಟ್ಟಿ, ಉಷಾ ಶ್ರೀಕಾಂತ ಲಾಹೋಟಿ, ಬಸವರಾಜ ಖಂಡೇರಾವ್, ಕೆ.ಎಸ್. ಮೂಲಿಮನಿ, ಎ.ವೈ. ನಾಯಕ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಹಜರತ್ ಖ್ವಾಜಾ ಬಂದೇನವಾಜ್ ದರ್ಗಾದ ಡಾ. ಸೈಯದ್ ಶಾ ಖುಸ್ರೋ ಹುಸೇನಿ ಸಾನ್ನಿಧ್ಯ ವಹಿಸಿದ್ದರು. ಎಚ್‌ಕೆಸಿಸಿಐ ಅಧ್ಯಕ್ಷ ಗೋಪಾಲಕೃಷ್ಣ ವಿ. ರಘೋಜಿ ಅಧ್ಯಕ್ಷತೆ ವಹಿಸಿದ್ದರು. ಉಮಾಕಾಂತ ನಿಗ್ಗುಡಗಿ ಮತ್ತಿತರರು ವೇದಿಕೆಯಲ್ಲಿದ್ದರು.ಜೆ. ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು. ರಮೇಶ ಮಂದಕನಳ್ಳಿ ಸ್ವಾಗತಿಸಿದರು. ಅಮರೇಶ ಸಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸೋಮಶೇಖರ ಜಿ. ಟೆಂಗಳಿ ವಂದಿಸಿದರು.

ಪ್ರತಿಕ್ರಿಯಿಸಿ (+)