ಮಂಗಳವಾರ, ಏಪ್ರಿಲ್ 20, 2021
32 °C

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಕೆಆರ್‌ಎಸ್ ಜಲಾಶಯಕ್ಕೆ 100 ಅಡಿ ನೀರು ಬಂದಿರುವುದರಿಂದ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ತಕ್ಷಣವೇ ನೀರು ಹರಿಸಿ ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ಮಂಗಳವಾರ ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು. ಬೇಸಿಗೆ ಹಂಗಾಮಿನಲ್ಲಿ ಒಮ್ಮೆಯೂ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೆ ಜನಪ್ರತಿನಿಧಿಗಳು ನಿರ್ಲಕ್ಷ್ಯ ಧೋರಣೆ ತಾಳಿದ ಪರಿಣಾಮ ಜಲಾಶಯದ ನೀರನ್ನು ಸಮರ್ಪಕವಾಗಿ ಬಳಸಲು ಅಧಿಕಾರಿಗಳು ವಿಫಲರಾದರು.ಇದರಿಂದ ರೈತರು ಬೆಳೆ ನಷ್ಟು ಅನುಭವಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಸಂಪೂರ್ಣ ಕೈ ಕೊಟ್ಟಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಕಬ್ಬು ಇತರ ಬೆಳೆಗಳು ಒಣಗುತ್ತಿವೆ. ದಿನದಿಂದ ದಿನಕ್ಕೆ ಬೆಳೆ ಕುಗ್ಗುತ್ತಿದೆ. ಹಾಗಾಗಿ ತಡ ಮಾಡದೆ ವಿಶ್ವೇಶ್ವರಯ್ಯ ನಾಲೆ ಸೇರಿದಂತೆ ಅಚ್ಚುಕಟ್ಟು ಪ್ರದೇಶದ ಎಲ್ಲ ನಾಲೆಗಳಿಗೆ ನೀರು ಹರಿಸಬೇಕು ಎಂದು ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಒತ್ತಾಯಿಸಿದರು.ನಾಲೆಗಳಿಗೆ ನೀರು ಹರಿಸದಿದ್ದರೆ ಆ.15ರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜಿಲ್ಲಾ ಉಸ್ತವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಎಚ್ಚರಿಸಿದರು.`ಬತ್ತದ ಬೀಜ ಬಿತ್ತಲು ರೈತರಿಗೆ ಹೇಳಿದವರಾರು?~ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ವಿಜಯಕುಮಾರ್ ಹೇಳಿದ್ದಕ್ಕೆ ಕ್ರುದ್ಧರಾದ ತರಾಟೆಗೆ ತೆಗೆದುಕೊಂಡರು. ನಿಮ್ಮನ್ನು ಕೇಳಿ ಬೆಳೆ ಬೆಳೆಯಬೇಕಾಗಿಲ್ಲ. ಇದು ನಿಮ್ಮ ಉದ್ದಟತನದ ಪರಮಾವಧಿ ಎಂದು ಅವರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಹುಲಿಕೆರೆ ಸುರಂಗದಲ್ಲಿ ಕಾಮಗಾರಿ ನಡೆಯುತ್ತಿದೆ. ಆ.16ರ ಸಂಜೆ ವೇಳೆಗೆ ಕಾಮಗಾರಿ ಮುಗಿಯಲಿದ್ದು ನೀರು ಹರಿಸಲಾಗುವುದು ಎಂದು ವಿಜಯಕುಮಾರ್ ಹೇಳಿದ ನಂತರ ಪ್ರತಿಭಟನೆ ವಾಪಸ್ ಪಡೆದರು.ಪಿ.ಕೆಂಪೇಗೌಡ, ಸ್ವಾಮಿಗೌಡ, ಮೇಳಾಪುರ ಜಯರಾಂ, ಯುವ ಧ್ಯಕ್ಷ ಕಡತನಾಳು ಬಾಬು, ರಾಂಪುರ ವೆಂಕಟೇಶ್, ನಾಗೇಂದ್ರಸ್ವಾಮಿ, ನಂಜುಂಡಪ್ಪ, ಪಾಂಡು, ತಮ್ಮೇಗೌಡ, ಬಿ.ರಮೇಶ್ ಇದ್ದರು.ಬಡಾವಣೆ ಹೆಸರಲ್ಲಿ ಭೂಮಿ ಅತಿಕ್ರಮಣ: ಕಾಮಗಾರಿಗೆ ರೈತರ ತಡೆ-ಆಕ್ಷೇಪ

ಶ್ರೀರಂಗಪಟ್ಟಣ: ತಾಲ್ಲೂಕಿನ ಬೆಳಗೊಳ ಪೇಪರ್‌ಮಿಲ್ ಸರ್ಕಲ್ ಬಳಿ ಗ್ಯಾಮನ್ ಇಂಡಿಯಾ ಸಂಸ್ಥೆಯಿಂದ ಭೂಮಿ ಖರೀದಿಸಿ ಬಡಾವಣೆ ನಿರ್ಮಿಸುತ್ತಿರುವ ಕೆಬಿಎಲ್ ಸಂಸ್ಥೆ ಸರ್ಕಾರಿ ಜಮೀನು ಅತಿಕ್ರಮಿಸಿದೆ ಎಂದು ಆರೋಪಿಸಿ ರೈತರು ಭೂಮಿ ಸಮತಟ್ಟು ಮಾಡುವ ಕಾಮಗಾರಿಗೆ ತಡೆಯೊಡ್ಡಿದ ಪ್ರಸಂಗ ಮಂಗಳವಾರ ನಡೆಯಿತು.ಸ್ಥಳಕ್ಕೆ ತೆರಳಿದ ರೈತರು ಕೆಬಿಎಲ್ ಸಂಸ್ಥೆ ಖರೀದಿಸಿರುವ ಭೂಮಿಯ ಅಧಿಕೃತ ಸರ್ವೆ ನಡೆದಿಲ್ಲ. ಖರೀದಿಸಿರುವ ಜಮೀನಿಗೆ ಗಡಿ ಗೊತ್ತುಪಡಿಸಿಲ್ಲ. ಆದರೂ ಕೆಬಿಎಲ್ ಹೆಸರಿನ ಸಂಸ್ಥೆ ನಿವೇಶನ ಮಾರಾಟ ಮಾಡುವುದಾಗಿ ಜನರಿಂದ ಅರ್ಜಿ ಕರೆದಿದೆ. ಗ್ಯಾಮನ್ ಇಂಡಿಯಾ ಸಂಸ್ಥೆಯಿಂದ ಕೆಬಿಎಲ್ ಖರೀದಿಸಿರುವ ಜಮೀನಿನ ನಡುವೆ 8ರಿಂದ 10 ಎಕರೆಯಷ್ಟು ಸರ್ಕಾರಿ ಭೂಮಿ ಇದೆ. ಅದನ್ನೂ ಅತಿಕ್ರಮಿಸಿ ಭೂಮಿ ಸಮತಟ್ಟು ಮಾಡುತ್ತಿದೆ. ಸದ್ಯ ಈ ಭೂಮಿಯ ಮಾರುಕಟ್ಟೆ ಮೌಲ್ಯ ರೂ.25 ಕೋಟಿ ಇದೆ. ಇಂತಹ ಜಮೀನು ಅತಿಕ್ರಮಣಕ್ಕೆ ಅವಕಾಶ ನೀಡಬಾರದು ಎಂದು ಕೆ.ಎಸ್.ನಂಜುಂಡೇಗೌಡ ಹೇಳಿದರು.ಸ್ಥಳದಲ್ಲಿದ್ದ ಗುತ್ತಿಗೆದಾರರ ಪ್ರಸನ್ನ ಎಂಬನವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಭೂಮಿ ಸಮತಟ್ಟು ಕಾರ್ಯವನ್ನು ಸ್ಥಗಿತಗೊಳಿಸಬೇಕು ಎಂದರು. ಬೆಂಗಳೂರಿನ ಲಕ್ಷ್ಮಣ ಎಂಬವರು ಈ ಜಮೀನು ಖರೀದಿಸಿದ್ದು, ನಮಗೂ ಭೂಮಿಗೂ ಯಾವುದೇ ಸಂಬಂಧ ಇಲ್ಲ ಎಂದು ಪ್ರಸನ್ನ ಹೇಳಿದರು.ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಅರುಳ್‌ಕುಮಾರ್, ಗ್ಯಾಮನ್ ಇಂಡಿಯಾ ಸಂಸ್ಥೆಯಿಂದ ಭೂಮಿ ಖರೀದಿಸಿರುವ ಕೆಬಿಎಲ್ ಸಂಸ್ಥೆ ಭೂ ಪರಿವರ್ತನೆ ಮಾಡಿಕೊಂಡಿಲ್ಲ. ನಿವೇಶನವನ್ನಾಗಿ ಮಾರ್ಪಡಿಸಿ ಹಂಚಬೇಕಾದರೆ ಉದ್ದೇಶ ಬದಲಾವಣೆ ಆಗಬೇಕು. ಆದರೆ, ಈ ಸಂಸ್ಥೆ ನಿಯಮದ ಪ್ರಕಾರ ಏನನ್ನೂ ಮಾಡಿಲ್ಲ.ಕಾನೂನು ಪ್ರಕಾರ ಭೂಪರಿವರ್ತನೆ ಆಗುವವರೆಗೆ, ಸರ್ವೆ ಕಾರ್ಯ ಮುಗಿಯುವ ತನಕ ಇಲ್ಲಿ ಯಾವುದೇ ಕೆಲಸ ಕೈಗೊಳ್ಳಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸಿದರು. ಇಲ್ಲದಿದ್ದರೆ ಜೆಸಿಬಿ ಯಂತ್ರ, ಟಿಪ್ಪರ್ ವಾಹನ ಇತರ ಸಲಕರಣೆಗಳನ್ನು ಜಫ್ತಿ ಮಾಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಹಣ ನೀಡಲು ಆಗ್ರಹ


ಭಾರತೀನಗರ: ನಗರದ ಚಾಮುಂಡೇಶ್ವರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಕಳೆದ ಸಾಲಿನ ಕಬ್ಬಿನ ಬಾಕಿ ಹಣ ನೀಡಿಲ್ಲ ಎಂದು ದೂರಿದ ರೈತರು, ಕಬ್ಬು ಅರೆಯುವಿಕೆಗೆ ಮಂಗಳವಾರ ಅಡ್ಡಿಯುಂಟು ಮಾಡಿದರು.ಬಾಕಿ ಹಣ ನೀಡುವಂತೆ ರೈತರು ಕಳೆದ 3-4ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗೆ ಆಡಳಿತ ಮಂಡಳಿ ಅಧಿಕಾರಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಕಾರ್ಖಾನೆ ಆಡಳಿತ ಮಂಡಳಿ ಕಚೇರಿಗೆ ಬೀಗ ಜಡಿದಿದ್ದಾರೆ. ರೈತರು ಪ್ರತಿಭಟನೆ ನಡೆಸುತ್ತ್ದ್ದಿದಾರೆ.ಕಳೆದ ಹಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಮಾತುಕತೆಯಲ್ಲಿ ಕಾರ್ಖಾನೆ ಆರಂಭಕ್ಕೆ ಮೊದಲು ರೈತರ ಬಾಕಿ ಹಣವನ್ನು ಸಂಪೂರ್ಣವಾಗಿ ನೀಡುತ್ತೇವೆ ಎಂದು ಕಾರ್ಖಾನೆ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಜಿಲ್ಲಾಡಳಿತ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕಾರ್ಖಾನೆ ಮತ್ತು ಅಧಿಕಾರಿಗಳಿಗೆ ಮಾತ್ರ ಸೂಕ್ತ ಭದ್ರತೆ ಕೊಡುತ್ತಿದ್ದರು. ರೈತರ ಬಾಕಿ ಹಣದ ವಿಷಯವಾಗಿ ಯಾವುದೇ ದಿಟ್ಟ ತೀರ್ಮಾನ ತೆಗೆದುಕೊಳ್ಳಲು ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ಸ್ಥಳದಲ್ಲಿದ್ದ ರೈತರು ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.