ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

7

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:

ಹಾಸನ: ನಗರದಲ್ಲಿ ಶುಕ್ರವಾರ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಮೂರು ಪ್ರತಿಭಟನೆಗಳನ್ನು ನಡೆಸಿದ್ದಾರೆ.ಬಸ್‌ಗೆ ಆಗ್ರಹ: ದುದ್ದ ರಸ್ತೆಯಲ್ಲಿ ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಕಳೆದ ಕೆಲವು ದಿನಗಳಿಂದ ಹಾಸನದ ವಿವಿಧ ಕಾಲೇಜುಗಳಿಗೆ ಬರುವ 150 ರಿಂದ 200 ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ, ಈ ರಸ್ತೆಯಲ್ಲಿ ಬಸ್ ಓಡಿಸಬೇಕು ಎಂದು ಆಗ್ರಹಿಸಿ ನಿತ್ಯ ಹಾಸನದ ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.ಕಳೆದ 11 ದಿನಗಳಿಂದ ಈ ರಸ್ತೆಯಲ್ಲಿ ಬಸ್ ಬರುತ್ತಿಲ್ಲ. ಇದರಿಂದಾಗಿ ಚಿಕ್ಕಕಡಲೂರು, ಕೋರವಂಗಲ, ಅಟ್ಟಾವರ ಹೊಸಹಳ್ಳಿ ಮುಂತಾದ ಅನೇಕ ಹಳ್ಳಿಗಳ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.  ಕೆಲವು ವಿದ್ಯಾರ್ಥಿಗಳು ಮುಂಜಾನೆ 5 ಗಂಟೆಗೆ ಎದ್ದು, ಗಂಡಸಿ ಹ್ಯಾಂಡ್‌ಪೋಸ್ಟ್‌ಗೆ ಹೋಗಿ ಅಲ್ಲಿಂದ ಬಸ್ ಹಿಡಿದು ಬರಬೇಕಾಗುತ್ತಿದೆ. ನಾವು ಕಾಲೇಜಿಗೆ ಬರುವಾಗ ಮಧ್ಯಾಹ್ನ 12 ಗಂಟೆಯಾಗುತ್ತಿದೆ. ನಮಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.ಪಶು ವೈದ್ಯಕೀಯ ಕಾಲೇಜು

ಎರಡು ದಿನಗಳಿಂದ ಕಾಲೇಜಿನ ಮುಂದೆಯೇ ಪ್ರತಿಭಟನೆ ನಡೆಸುತ್ತಿರುವ ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಆರಂಭಿಸಿದರು.ಬುಧವಾರ ಬೆಳಿಗ್ಗೆ ಕಾಲೇಜಿನ ಸಿಬ್ಬಂದಿಗೂ ಒಳಗೆ ಹೋಗಲು ಅವಕಾಶ ನೀಡದೆ ಪ್ರತಿಭಟನೆ ಆರಂಭಿಸಿದ ವಿದ್ಯಾರ್ಥಿಗಳು ಗುರುವಾರವೂ ಅದನ್ನು ಮುಂದುವರಿಸುವುದರ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಬಗ್ಗೆ ಮನವಿಪತ್ರ ಸಲ್ಲಿಸಿದ್ದರು.ತಮ್ಮ ಸಮಸ್ಯೆ ಬಗೆಹರಿಯದಿರುವ ಕಾರಣದಿಂದ ಶುಕ್ರವಾರ ಕೆಲವು ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಉಳಿದು ಕೊಂಡು ಉಳಿದವರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು.ಮೆರವಣಿಗೆಯಲ್ಲಿ ಎತ್ತಿನ ಗಾಡಿಯನ್ನು ತಳ್ಳಿಕೊಂಡು ಬಂದ ವಿದ್ಯಾರ್ಥಿಗಳು ಎತ್ತುಗಳ ಬದಲು ತಾವೇ ಆ ಜಾಗದಲ್ಲಿ ನಿಂತು ನಗರದಲ್ಲಿ ಗಾಡಿ ಎಳೆಯುತ್ತ ಬಂದರು. `ಕಾಲೇಜಿಗೆ ಮಾನ್ಯತೆ ಲಭಿಸದಿರುವುದರಿಂದ ನಮ್ಮ ಭವಿಷ್ಯ  ಡೋಲಾಯಮಾನ ವಾಗಿದೆ. ಇದಕ್ಕೆ ಸರ್ಕಾರವೇ ಹೊಣೆ. ಕೂಡಲೇ ಕಾಲೇಜಿಗೆ ಮಾನ್ಯತೆ ನೀಡುವುದರ ಜತೆಗೆ ಸೌಲಭ್ಯಗಳನ್ನೂ ಒದಗಿಸಬೇಕು. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಕೋರ್ಸ್ ಪೂರೈಸಲು ಇನ್ನು ಕೆಲವೇ ತಿಂಗಳು ಉಳಿದಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಜಿಲ್ಲಾಧಿಕಾರಿ ಆವರಣದಲ್ಲೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕೊನೆಗೆ ಅಲ್ಲಿಯೇ ಪ್ರತಿಭಟನೆ ಆರಂಭಿಸಿದರು.ಬೇಲಿ ಕಿತ್ತ ಕಾನೂನು ವಿದ್ಯಾರ್ಥಿಗಳು

ಪಶು ವೈದ್ಯಕೀಯ ಕಾಲೇಜಿನ ಜತೆಜತೆಯಲ್ಲೇ ಪ್ರತಿಭಟನೆ ಆರಂಭಿಸಿದ ಇಲ್ಲಿನ ಸರ್ಕಾರಿ ಕಾನೂನು ಕಾಲೇಜಿ ವಿದ್ಯಾರ್ಥಿ ಗಳೂ ಶುಕ್ರವಾರ ಪ್ರತಿಭಟನೆ ಇನ್ನಷ್ಟು ತೀವ್ರಗೊಳಿಸಿದ್ದಾರೆ.ಕ್ರೀಡಾಂಗಣದ ಕಡೆಯಿಂದ ಕಾಲೇಜಿಗೆ ಪ್ರವೇಶಿಸದಂತೆ ಹಾಕಿದ್ದ ತಂತಿ ಬೇಲಿಯನ್ನು ಶುಕ್ರವಾದ ಅವರು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು.

ಇದಾದ ಬಳಿಕ ಮಧ್ಯಾಹ್ನ ಅವರೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry