ಗುರುವಾರ , ಜೂನ್ 17, 2021
27 °C

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರಾಜ್ಯದ ಪರಿಶಿಷ್ಟ ಜಾತಿ, ಪಂಗಡ ಮೀಸಲಾತಿ ಪಟ್ಟಿಯಲ್ಲಿ ಹಿಂದುಳಿದ ವರ್ಗಗಳ ಸೇರ್ಪಡೆಯನ್ನು ಖಂಡಿಸಿ ಗುರುವಾರ ಮಂಡ್ಯದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡಿದರು.ಓಟ್‌ ಬ್ಯಾಂಕ್‌ ರಾಜಕಾರಣಕ್ಕಾಗಿ ಬೇರೆಯವರನ್ನು ಮೀಸಲಾತಿ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ. ಸಂಪುಟದ ತೀರ್ಮಾನ ಅವೈಜ್ಞಾನಿಕ ಹಾಗೂ ಸಂವಿಧಾನ ಬಾಹಿರವಾಗಿದೆ. ಕೂಡಲೇ ಈ ತೀರ್ಮಾನವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.ಹಿಂದುಳಿದ ವರ್ಗಗಳ ಆಯೋಗಗಳು ಹಿಂದುಳಿದ ವರ್ಗಗಳು ಎಂದು ಗುರುತಿಸಿರುವ ಜಾತಿಗಳನ್ನು ಪರಿಶಿಷ್ಟರ ಮೀಸಲಾತಿ ಪಟ್ಟಿಗೆ ಸೇರಿಸಬಾರದು. ಇದರಿಂದ ನಿಜವಾಗಿ ತೊಂದರೆ ಎದುರಿಸುತ್ತಿರುವ ಪರಿಶಿಷ್ಟ ಜಾತಿ, ಪಂಗಡದವರಿಗೆ ತೊಂದರೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಪ್ರವರ್ಗ– 1ರಲ್ಲಿ ಕುರುಬ ಸಮಾಜದವರು ಇದ್ದಾರೆ. ಅಲ್ಲಿರುವ ಕೆಲ ಜಾತಿಗಳನ್ನು ಪರಿಶಿಷ್ಟ ಮೀಸಲಾತಿಗೆ ಸೇರಿಸುವ ಮೂಲಕ ಕುರುಬರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದ್ದಾರೆ. ಆ ಮೂಲಕ ಸ್ವಜಾತಿ ಪ್ರೇಮವನ್ನು ಮೆರೆಯುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಟೀಕಿಸಿದರು.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ದಲಿತರ ಕೊಲೆ, ದೌರ್ಜನ್ಯ, ಬಹಿಷ್ಕಾರ ಹೆಚ್ಚಾಗಿದೆ. ಅವುಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು. ಅಂತಹ ಘಟನೆಗಳು ನಡೆದರೆ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠರನ್ನು ಜವಾಬ್ದಾರರನ್ನಾಗಿಸಬೇಕು ಎಂದು ಆಗ್ರಹಿಸಿದರು.ಸಮಿತಿಯ ಮುಖಂಡರಾದ ವೆಂಕಟಗಿರಿಯ್ಯ, ಡಿ.ಕೆ. ಅಂಕಯ್ಯ, ವೆಂಕಟೇಶ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.ದಲಿತರ ದಮನ ನೀತಿ ಖಂಡಿಸಿ ಪ್ರತಿಭಟನೆ

ಮಂಡ್ಯ: ರಾಜ್ಯದ ಚಿಕ್ಕಬಳ್ಳಾಪುರದ ಜಿಲ್ಲಾಡಳಿತದ ದಲಿತರ ದಮನ ನೀತಿಯನ್ನು ಖಂಡಿಸಿ ಗುರುವಾರ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿದರು.ಭೂ ಮಾಲೀಕರ ಪರವಾಗಿರುವ ಹಾಗೂ ಬಡ ದಲಿತರ ವಿರುದ್ಧವಾಗಿರುವ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ದುರಾಡಳಿತವನ್ನು ತೀವ್ರವಾಗಿ ಖಂಡಿಸಿದರು.ನುಗಿತಹಳ್ಳಿ ದಲಿತರಾದ ಸತ್ಯಪ್ಪ ಹಾಗೂ ಮುನಿಸ್ವಾಮಿ ಅವರಿಗೆ ಭೂಮಿಯನ್ನು ಮರಳಿ ಕೊಡಿಸಬೇಕು ಎಂದು ಆಗ್ರಹಿಸಿದರು. ಅಧಿಕಾರದ ಲಾಬಿಯಿಂದಾಗಿ ಅನ್ಯಾಯವಾಗಿದೆ ಎಂದು ದೂರಿದರುಪ್ರಕರಣದ ಬಗೆಗೆ ವಿಚಾರಿಸಲು ಹೋಗಿದ್ದ ದಲಿತ ಹೋರಾಟಗಾರರಾದ ರಾಜಾಕಾಂತ್‌್ ಹಾಗೂ ಕಾರ್ಯಕರ್ತರ ಮೇಲೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಉಪವಿಭಾಗಾಧಿಕಾರಿಗಳು ಸುಳ್ಳು ದೂರು ದಾಖಲಿಸಿದ್ದಾರೆ. ಕೂಡಲೇ ಪ್ರಕರಣ ಹಿಂತೆಗೆದುಕೊಳ್ಳಬೇಕು ಆಗ್ರಹಿಸಿದರು.ದಲಿತರ ಹೋರಾಟವನ್ನು ಶಮನಗೊಳಿಸಲು ಯತ್ನಿಸಲಾಗುತ್ತಿದೆ ಎಂದು ದೂರಿರುವ ಅವರು, ಅನ್ಯಾಯವಾಗಿರುವವರಿಗೆ ನ್ಯಾಯ ಕೊಡಿಸಬೇಕು ಹಾಗೂ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಸಂಚಾಲಕ ಗುರುಪ್ರದಾದ ಕೆರಗೋಡು, ಸಿ.ಬಿ. ಮಹಾದೇವಪ್ಪ, ಗುಡಿಗೇನಹಳ್ಳಿ ಚಂದ್ರಶೇಖರ್‌, ಗವಿಸ್ವಾಮಿ ಗಂಜಾಂ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.