ಗುರುವಾರ , ಜೂನ್ 24, 2021
23 °C

ವಿವಿಧ ಬೇಡಿಕೆ ಈಡೇರಿಕೆಗೆ ಹಲವು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹಲವಾರು ವರ್ಷಗಳಿಂದ ಅಕ್ರಮ ಸಾಗುವಳಿ ಮಾಡಿಕೊಂಡು ಬರುತ್ತಿರುವ ಬಡ ರೈತರ ಜಮೀನುಗಳನ್ನು ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಸ್ಮಶಾನಭೂಮಿ ಇಲ್ಲದ ಗ್ರಾಮಗಳಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು. ಭೂ ನ್ಯಾಯ ಮಂಡಳಿ ರಚಿಸಬೇಕು. ಅರಣ್ಯದಂಚಿ ನಲ್ಲಿ ಸಾಗುವಳಿ ಮಾಡುತ್ತಿರುವ ರೈತರನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುತ್ತಿದ್ದು, ಈ ಬಗ್ಗೆ ಕ್ರಮಕೈಗೊಳ್ಳಬೇಕು. ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಕೆ.ಸಿ.ರಜಾಕಾಂತ ಅವರ ಮೇಲಿನ ಸುಳ್ಳು ಮೊಕದ್ದಮೆ ಕೈಬಿಡಬೇಕು. ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಶೇ 25ರಷ್ಟು ಸೀಟುಗಳನ್ನು ನಿಯಮಾನುಸಾರ ನೀಡಬೇಕು ಎಂದು ಒತ್ತಾಯಿಸಿದರು.ದಲಿತ, ಆದಿವಾಸಿ ಹಾಗೂ ಬಡ ರೈತರು ಅನೇಕ ವರ್ಷಗಳಿಂದ ತುಂಡು ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇಲ್ಲಸಲ್ಲದ ನೆಪ ಹೇಳುತ್ತ ಒಕ್ಕಲೆಬ್ಬಿಸುತ್ತಿದ್ದಾರೆ. ಭೂರಹಿತ ದಲಿತರು ಅಕ್ರಮ–ಸಕ್ರಮ ಯೋಜನೆಯಡಿ ಅಲ್ಪ ಸ್ವಲ್ಪ ಜಮೀನು ಮಂಜೂರು ಮಾಡಿಸಿ ಕೊಂಡರೂ ಗ್ರಾಮದ ಬಲಿಷ್ಠರು ಆ ಜಮೀನು ಗಳು ದಲಿತರಿಗೆ ಸಿಗದಂತೆ ಮಾಡುತ್ತಿದ್ದಾರೆ.ಇಂತಹ ಅನ್ಯಾಯಗಳನ್ನು ಖಂಡಿಸಿದರೆ ಅಧಿಕಾ ರಿಗಳು, ಬಲಾಢ್ಯರದಿಗೆ ಕೈಜೋಡಿಸಿ ದಲಿತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುತ್ತಿದ್ದಾರೆ. ಆದ್ದರಿಂದ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಭೂ ಮಂಜೂರಾತಿ ಸಮಿತಿ ರಚನೆ ಮಾಡಿ ದಲಿತರಿಗೆ ಸಾಗುವಳಿ ಪತ್ರ ನೀಡಬೇಕು ಎಂದು ಆಗ್ರಹಿಸಿದರು.ದಸಂಸ ಮುಖಂಡರಾದ ಪುಂಡಲೀಕ ಗಾಯಕ ವಾಡ, ಸುನಿಲ್ ವಂಟಿ, ಧರ್ಮಣ್ಣ ಕೋಣೆಕರ, ಸಿದ್ರಾಮ ಕಟ್ಟಿ, ಶಂಕರ ಬಾದನ ಹಳ್ಳಿ, ಸುಭಾಷ ಯಾಮೇರ, ಭೀಮರಾವ ಗೌರ, ಪಾಂಡುರಂಗ ಲೊಡ್ಡನೋರ ಪ್ರತಿಭಟನೆ ನೇತೃತ್ವ ವಹಿಸಿದ್ದರು.ತೊಗರಿ ಖರೀದಿ ಸ್ಥಗಿತ:ಆಕ್ರೋಶ

ಗುಲ್ಬರ್ಗ: ಹಣಕಾಸಿನ ಕೊರತೆಯ ನೆಪವೊಡ್ಡಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವ ಪ್ರಕ್ರಿಯೆ ಸ್ಥಗಿತೊಳಿಸಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ರೈತರ ಹೋರಾಟದ ಫಲವಾಗಿ ಸರ್ಕಾರ ₨ 5 ಸಾವಿರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಾಡುತ್ತಿತ್ತು. ಆದರೆ, ಒಂದು ವಾರದಿಂದ ತೊಗರಿ ಖರೀದಿ ನಿಲ್ಲಿಸಲಾಗಿದೆ. ಇದರಿಂದಾಗಿ ತೊಗರಿ ಬೆಳೆಗಾರರು ಕಂಗಾಲಾಗಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರ ತೊಗರಿ ಖರೀದಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಸಮಿತಿ ಕಾರ್ಯದರ್ಶಿ ಗೌರಮ್ಮ ಪಾಟೀಲ್, ತಾಲ್ಲೂಕು ಸಮಿತಿ ಕಾರ್ಯದರ್ಶಿ ಸೋಮಶೇಖರ ಮುದ್ದಡಗಿ, ಸುಭಾಷ ಹೊಸ ಮನಿ, ಪಾಂಡುರಂಗ ಮಾವಿನಕರ್ ಇದ್ದರು.ವಸತಿಗೃಹ ತೆರವಿಗೆ ವಿರೋಧ

ಗುಲ್ಬರ್ಗ: ಸೇಡಂ ರಸ್ತೆಯ ಜಿಲ್ಲಾಸ್ಪತ್ರೆ ಆವರಣ ದಲ್ಲಿರುವ ಶುಶ್ರೂಷಕರ ವಸತಿ ಗೃಹಗಳನ್ನು ತೆರವುಗೊಳಿಸುತ್ತಿರುವುದನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಶುಶ್ರೂಷಕ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ವಸತಿಗೃಹಗಳನ್ನು ತೆರವುಗೊಳಿಸಬೇಕು ಎಂದು 2014ರ ಜನವರಿ 28ರಂದು ಜಿಲ್ಲಾ ಶಸ್ತ್ರಚಿಕಿತ್ಸಕರು ನೋಟಿಸ್ ಜಾರಿ ಮಾಡಿದ್ದಾರೆ. ಈ ವಸತಿ ಗೃಹಗಳಲ್ಲಿ 27 ಕುಟುಂಬಗಳು ವಾಸಿಸುತ್ತಿವೆ. ಮಕ್ಕಳಿಗೆ ಈಗ ವಾರ್ಷಿಕ ಪರೀಕ್ಷೆ ಇರುವುದರಿಂದ ತೆರವುಗೊಳಿಸುವುದು ಕಷ್ಟವಾ ಗುತ್ತದೆ. ಆದ್ದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಒಂದು ವೇಳೆ ಕಡ್ಡಾಯವಾಗಿ ತೆರವುಗೊಳಿಸ ಲೇಬೇಕು ಎನ್ನುವುದಾದರೆ ಲೋಕೋಪಯೋಗಿ ಇಲಾಖೆ ವಸತಿಗೃಹಗಳನ್ನು ಮಂಜೂರು ಮಾಡಿ ಕೊಡಬೇಕು. ಇಲ್ಲವಾದಲ್ಲಿ ಮಾ. 4 ರಂದು ನಡೆಯಲಿರುವ ವೈದ್ಯಕೀಯ ಕಾಲೇಜಿನ ಅಡಿಗಲ್ಲು ಸಮಾರಂಭಕ್ಕೆ ಅಡ್ಡಿಪಡಿಸಲಾಗು ವುದು ಎಂದು ಎಚ್ಚರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.