ಮಂಗಳವಾರ, ಜನವರಿ 21, 2020
28 °C

ವಿವಿಧ ಬೇಡಿಕೆ: ಸರಣಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದೂರು:  ಜೀವ ವಿಮಾ ಪ್ರತಿನಿಧಿಗಳಿಗೆ ಬರಗಾಲದ ಮುಂಗಡ ನೀಡುವಂತೆ ಆಗ್ರಹಿಸಿ ತಾಲ್ಲೂಕು ಜೀವ ವಿಮಾ ಪ್ರತಿನಿಧಿಗಳ ಸಮಿತಿಯ ಪದಾಧಿಕಾರಿಗಳು ಪಟ್ಟಣದ ಎಲ್‌ಐಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.ತಾಲೂಕು ಘಟಕ ಅಧ್ಯಕ್ಷ ವಾಸು  ಮಾತನಾಡಿ, ಮದ್ದೂರು ತಾಲೂಕನ್ನು ರಾಜ್ಯ ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿದೆ,  ಈಗಾಗಲೇ ಎಲ್‌ಐಸಿಯು ತನ್ನ ನೌಕರ ವರ್ಗದವರಿಗೆ ಬರಗಾಲದ ಮುಂಗಡ ನೀಡಿದೆ.  ಆದರೆ, ವಿಮಾ ಪ್ರತಿನಿಧಿಗಳಿಗೆ  ಮುಂಗಡ ಮಂಜೂರು ಮಾಡದೇ ವಂಚಿಸಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಮುಂಗಡ ಮಂಜೂರಾತಿಗೆ ಮುಂದಾಗಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಬಿ. ಮುತ್ತುರಾಜ್, ಉಪಾಧ್ಯಕ್ಷರಾದ ನರಸಿಂಹಮೂರ್ತಿ, ಸಿ.ನಂಜುಂಡಯ್ಯ, ಖಜಾಂಚಿ ವಾಸು, ಪ್ರತಿನಿಧಿಗಳಾದ ಪ್ರದೀಪ್‌, ಮಹೇಶ್, ಗಿರಿಯಯ್ಯ, ಶಿವಪ್ಪ, ರಾಜು, ಅರುಣ್, ಪಿ. ರಾಜು, ಕೃಷ್ಣೇಗೌಡ ಸೇರಿದಂತೆ ಹಲವರು ಹಾಜರಿದ್ದರು.ಎಬಿವಿಪಿ ಪ್ರತಿಭಟನೆ

ಕೃಷ್ಣರಾಜಪೇಟೆ: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಕಾಯ್ದೆಯನ್ನು ವಿರೋಧಿಸಿ ಎಬಿವಿಪಿ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಯಿತು.ಪಟ್ಟಣದ ಎಂ.ಕೆ. ಬೊಮ್ಮೇಗೌಡ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ವಾಹನ ಸಂಚಾರ ತಡೆದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಂದ ಮಿನಿ ವಿಧಾನಸೌಧದವರೆಗೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ನೂರಾರು ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿದರು. ಪ್ರತಿಭಟನೆಯಲ್ಲಿ ಶಾಸಕ ಕೆ.ಸಿ. ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಕೃಷ್ಣಮೂರ್ತಿ, ರೈತ ಮುಖಂಡ ಮರುವನಹಳ್ಳಿ ಶಂಕರ್‌, ವಿದ್ಯಾರ್ಥಿ ಮುಖಂಡರಾದ ರಾಘವೇಂದ್ರ, ಪುನೀತ್ ಮತ್ತಿತರರು ಭಾಗವಹಿಸಿದ್ದರು.ವಾಹನ ಶುಲ್ಕ ರದ್ದುಪಡಿಸಲು ಆಗ್ರಹ

ಶ್ರೀರಂಗಪಟ್ಟಣ:  ಪಟ್ಟಣದ ಪ್ರವಾಸಿ ತಾಣಗಳಲ್ಲಿ ವಾಹನ ಶುಲ್ಕ ರದ್ದುಪಡಿಸಿದ್ದರೂ ಟಿಪ್ಪು ಗುಂಬಸ್‌ಗೆ ಬರುವ ವಾಹನಗಳಿಂದ ಟಿಪ್ಪು ವಕ್ಫ್‌ ಎಸ್ಟೇಟ್‌ ಶುಲ್ಕ ವಸೂಲಿ ಮಾಡುತ್ತಿದ್ದು, ಅದನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಶುಕ್ರವಾರ ಗುಂಬಸ್‌ ಬಳಿ ಪ್ರತಿಭಟನೆ ನಡೆಸಿದರು.ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ನಿಮಿಷಾಂಬ ದೇವಾಲಯ, ಗಂಜಾಂ ಬಳಿಯ ಸಂಗಮ್‌, ಗೋಸಾಯಿಘಾಟ್‌ಗೆ ಬರುವ ಪ್ರವಾಸಿ ವಾಹನಗಳಿಗೆ ಶುಲ್ಕ ರದ್ದುಪಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ, ಗುಂಬಸ್‌ ಬಳಿ ಮಾತ್ರ ವಾಹನ ಶುಲ್ಕ ವಸೂಲಿ ಅಡೆತಡೆಯಿಲ್ಲದೆ ನಡೆಯುತ್ತಿದೆ. ಇತರ ಸ್ಥಳಗಳಿಗೆ ಬರುವ ವಾಹನಗಳನ್ನು ಗುಂಬಸ್‌ ಬಳಿ ತಡೆದು ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮಾತ್ರವಲ್ಲದೆ ಟೆಂಡರ್‌ ಸಂದರ್ಭದಲ್ಲಿ ಗೊತ್ತುಪಡಿಸಿ ರುವ ಶುಲ್ಕಕ್ಕಿಂತ ದುಪ್ಪಟ್ಟು ಹಣ ವಸೂಲಿ ಮಾಡಲಾ ಗುತ್ತಿದೆ ಎಂದು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಜಿ.ಎನ್‌. ಕುಮಾರಸ್ವಾಮಿ ದೂರಿದರು.ವಾಹನ ಶುಲ್ಕ ರದ್ದುಪಡಿಸುವ ವಿಷಯದಲ್ಲಿ ಜಿಲ್ಲಾಡಳಿತ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದು ವಕೀಲ ಜಿ.ಎನ್‌. ರವೀಶ್‌ ಅಸಮಾಧಾನ ವ್ಯಕ್ತಪಡಿಸಿದರು.ಟಿಪ್ಪು ವಕ್ಪ್‌ ಎಸ್ಟೇಟ್‌ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಇರ್ಫಾನ್‌ ಅವರಿಗೆ ಮನವಿ ಸಲ್ಲಿಸಿದರು. ಎಸ್‌. ಅಲಿಖಾನ್‌, ಬಿ.ಎಚ್‌. ರಾಮಕೃಷ್ಣ, ರಾಜೇಶ್‌, ಇದಾಯತ್‌, ಹುಸೇನ್‌, ಕಲೀಂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)