ಮಂಗಳವಾರ, ಏಪ್ರಿಲ್ 13, 2021
29 °C

ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಪಾನ್ ದೇಶದಲ್ಲಿ ಸಂಭವಿಸಿದ ಭೂಕಂಪ ಮತ್ತು ಸುನಾಮಿಯಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ಕೋರಲು ವಿವಿಧ ಸಂಘಟನೆಗಳು ನಗರದ ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆ ಎದುರು ಶನಿವಾರ ಸಂತಾಪ ಸಭೆ ಹಮ್ಮಿಕೊಂಡಿದ್ದವು. ಬಿಜೆಪಿ ನಗರ ಯುವ ಮೋರ್ಚಾ, ಸಮತಾ ಸೈನಿಕ ದಳ, ಬಾರ್ನ್ ಫ್ರೀ ಆರ್ಟ್ ಸ್ಕೂಲ್ ಸಂಸ್ಥೆ ಸೇರಿದಂತೆ ಹಲವು ಸಂಘಟನೆಗಳು ಪಾಲ್ಗೊಂಡಿದ್ದವು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್, ‘ಜಪಾನ್‌ನಂತಹ ರಾಷ್ಟ್ರದಲ್ಲಿ ಇಂತಹ ದುರಂತ ಸಂಭವಿಸಬಾರದಿತ್ತು. ಆದಷ್ಟು ಬೇಗ ಅವರ ಸ್ಥಿತಿ ಉತ್ತಮಗೊಳ್ಳಲಿ’ ಎಂದರು. ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ದೀಪಗಳ ಮೂಲಕ ಇಂಗ್ಲಿಷ್ ಅಕ್ಷರಗಳಲ್ಲಿ ‘ಜಪಾನ್’ ಎಂದು ರಚಿಸಿ ಶ್ರದ್ಧಾಂಜಲಿ ಅರ್ಪಿಸಿತು. ಮೋರ್ಚಾ ಮುಖಂಡ ಮೋಹನರೆಡ್ಡಿ ಮಾತನಾಡಿ, ‘ಪ್ರಕೃತಿ ವಿಕೋಪದಿಂದಾಗಿ ಜಪಾನಿನ ಹಲವು ಪ್ರದೇಶಗಳು ನೀರಿನಲ್ಲಿ ಮುಳುಗಿ ಹೋಗಿವೆ. ವಿಶ್ವವೇ ಒಂದು ಎಂಬ ಸಿದ್ದಾಂತದಲ್ಲಿ ನಂಬಿಕೆಯಿಟ್ಟಿರುವ ಮೋರ್ಚಾವು ಜಪಾನಿನ ಸಹಾಯಕ್ಕೆ ಸದಾ ಸಿದ್ದವಾಗಿದೆ’ ಎಂದು ಹೇಳಿದರು.ಬಾರ್ನ್ ಫ್ರೀ ಆರ್ಟ್ ಸ್ಕೂಲ್ ಸಂಸ್ಥೆಯು ಗಾಯನದ ಮೂಲಕ ಸಂತಾಪ ವ್ಯಕ್ತಪಡಿಸಿತು. ಸಂಸ್ಥೆಯ ಸಹನಿರ್ದೇಶಕಿ ಜಪಾನ್ ಮೂಲದ ಮಿಯಾಯಿ ನಕಾಯಮಾ ಮಾತನಾಡಿ, ‘ಬೀದಿ ಮಕ್ಕಳಿಗೆ ನೃತ್ಯ ಕಲಿಸುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ. ಮಡಿದ ಎಲ್ಲಾ ಜಪಾನಿಯರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಕನ್ನಡದಲ್ಲಿಯೇ ಮಾತನಾಡಿ ಗಮನಸೆಳೆದರು.

ಸಮತಾ ಸೈನಿಕ ದಳದ ಎಂ.ವೆಂಕಟಸ್ವಾಮಿ, ಬಾರ್ನ್ ಫ್ರೀ ಆರ್ಟ್ ಸಂಸ್ಥೆಯ ನಿರ್ದೇಶಕ ಜಾನ್ ದೇವರಾಜ್, ಬೆಂಗಳೂರು ನಗರ ಯುವಮೋರ್ಚಾ ಅಧ್ಯಕ್ಷ ಮಂಜುನಾಥ್, ಪಾಲಿಕೆ ಸದಸ್ಯ ಚಂದ್ರಶೇಖರ್ ರಾಜು ಇತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.