ಗುರುವಾರ , ನವೆಂಬರ್ 21, 2019
26 °C

ವಿವಿಯಿಂದ ಅತಿಕ್ರಮಣ ಭೀತಿ!

Published:
Updated:

ವಿವಿಧ ಕ್ರೀಡೆಗಳಲ್ಲಿ ರಾಷ್ಟ್ರೀಯ, ಅಂತರರಾಷ್ಟ್ರೀಯ ಕೂಟಗಳಲ್ಲಿ ಪಾಲ್ಗೊಂಡ ಹತ್ತಾರು ಕ್ರೀಡಾಪಟುಗಳು ತುಮಕೂರಿನಲ್ಲಿ ಕಾಣಸಿಗುತ್ತಾರೆ. ಕ್ರೀಡೆಗೆ ಪೂರಕ ವಾತಾವರಣ ಇಲ್ಲಿದ್ದರೂ ಮೂಲ ಸೌಕರ್ಯಗಳು ಮಾತ್ರ ಶೂನ್ಯ.ಜತೆಗೆ ಇಲ್ಲಿರುವ ಕ್ರೀಡಾ ಇಲಾಖೆಯ ಕ್ರೀಡಾ ಸೌಲಭ್ಯಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಳ್ಳಲು ತುಮಕೂರು ವಿ.ವಿ. ಒಂದೊಂದೇ ಹೆಜ್ಜೆ ಇಡುತ್ತಿದೆ.ನಗರದ ಹೃದಯ ಭಾಗದಲ್ಲೇ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣವಿದೆ. ಸನಿಹದಲ್ಲೇ ಒಳಾಂಗಣ ಕ್ರೀಡಾಂಗಣವೂ ಇದೆ.ಕ್ರೀಡಾಂಗಣದ ಜಾಗವನ್ನು ವಿವಿಧ ಉದ್ದೇಶಗಳಿಗೆ ಬೇರೆ ಇಲಾಖೆಗಳಿಗೆ ನೀಡಿರುವುದರಿಂದ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕೈಗೊಳ್ಳಲು ಅವಕಾಶವಿಲ್ಲ. ಸೌಕರ್ಯಗಳ ಕೊರತೆ ನಡುವೆಯೂ ಜಿಲ್ಲೆಯ ವಿವಿಧೆಡೆ ಹತ್ತಾರು ರಾಜ್ಯ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಗಳು ನಡೆಯುತ್ತಿವೆ. ಈ ಕ್ರೀಡಾಂಗಣದಲ್ಲಿ ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳ ಕಾರ್ಯಕ್ರಮಗಳು ನಡೆಯುತ್ತವೆ. ಆಗಾಗ್ಗೆ ಇಲ್ಲಿ `ಹೆಲಿಪ್ಯಾಡ್' ಕೂಡಾ ಕಂಡು ಬರುತ್ತದೆ.ಕ್ರೀಡಾಂಗಣದ ಒಂದು ಭಾಗದಲ್ಲೇ ಕ್ರೀಡೆ ಮತ್ತು ಯುವಜನ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಬಹು ವರ್ಷಗಳ ಹಿಂದೆಯೇ ಕ್ರೀಡಾಂಗಣದಲ್ಲಿ 400 ಮೀಟರ್ ಅಂತರರಾಷ್ಟ್ರೀಯ ದರ್ಜೆಯ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸುವ ಪ್ರಸ್ತಾವನೆ ಚಾಲನೆಯಲ್ಲಿತ್ತು. ಗೂಳಿಹಟ್ಟಿ ಡಿ.ಶೇಖರ್ ಕ್ರೀಡಾ ಸಚಿವರಾದ ನಂತರ ಇಲ್ಲಿಗಿದ್ದ ಪ್ರಸ್ತಾವನೆಯನ್ನು ಹೊಸದುರ್ಗಕ್ಕೆ ಸ್ಥಳಾಂತರಿಸಿದರು. ಸ್ಥಳೀಯ ಜನಪ್ರತಿನಿಧಿಗಳು ಕೊಂಚವೂ ವಿರೋಧ ವ್ಯಕ್ತಪಡಿಸದ ಕಾರಣ ಮೂವತ್ತೈದು ವರ್ಷಗಳ ಹಿಂದೆ ಇದ್ದ ಸ್ಥಿತಿಯಲ್ಲೇ ಕ್ರೀಡಾಂಗಣ ಇದೆ.ಕ್ರೀಡಾಂಗಣ ಅಭಿವೃದ್ಧಿಗಾಗಿ 42 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಂಡಿತ್ತು. ಆದರೆ ಈ ಹಣ ಸದ್ಬಳಕೆಯಾಗಲಿಲ್ಲ ಎಂಬ ಆರೋಪ ಕ್ರೀಡಾಪಟುಗಳದ್ದು. ಉಸ್ತುವಾರಿ ಹೊಣೆ ಹೊತ್ತಿರುವ ಕ್ರೀಡೆ ಮತ್ತು ಯುವಜನ ಇಲಾಖೆ ಅಧಿಕಾರಿಗಳು ಈ ಹಣವನ್ನು ಕಚೇರಿಗೆ ಹೊಂದಿಕೊಂಡಂತೆ ಶೌಚಾಲಯ ನಿರ್ಮಿಸಿಕೊಳ್ಳಲು ಕಚೇರಿ ಆಧುನೀಕರಣಕ್ಕೆ ಬಳಸಿಕೊಂಡಿದ್ದಕ್ಕೆ ಕ್ರೀಡಾಪಟುಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.ಕ್ರೀಡಾಂಗಣದಲ್ಲಿ ಇವತ್ತಿಗೂ ಶೌಚಾಲಯ ವ್ಯವಸ್ಥೆಯೇ ಇಲ್ಲ. ಇದರಿಂದ ಕ್ರೀಡಾಪಟುಗಳ ಪರದಾಟ ಹೇಳತೀರದು. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ದುರಸ್ತಿಗೊಳ್ಳಬೇಕಿದ್ದ ಪ್ರೇಕ್ಷಕರ ಗ್ಯಾಲರಿ ದಿನಕಳೆದಂತೆ ಅಲ್ಲಲ್ಲೇ ಕುಸಿಯುತ್ತಿದೆ. ಕ್ರೀಡಾಂಗಣದ ಸುತ್ತ ಹಸಿರು ಹುಲ್ಲು ಬೆಳೆಸಬೇಕಿತ್ತು. ಅದೂ ಇಲ್ಲ.  ಹೆಲಿಕಾಪ್ಟರ್ ಇಳಿಸಲಿಕ್ಕಾಗಿ ಸುತ್ತಲಿನ ಮರ ಕಡಿಯುತ್ತಿರುವುದಕ್ಕೆ ಪರಿಸರಾಸಕ್ತರ ತೀವ್ರ ವಿರೋಧವಿದೆ. ಆದರೂ ಮರ ಕಡಿಯುವುದು ನಿಂತಿಲ್ಲ.2012ರ ಆಗಸ್ಟ್‌ನಲ್ಲಿ ಅಥ್ಲೆಟಿಕ್ ಕೂಟವೊಂದು ನಡೆಯುವಾಗ ಪ್ರೇಕ್ಷಕರ ಗ್ಯಾಲರಿಗೆ ಹತ್ತಲು  ನಿರ್ಮಿಸಿದ್ದ ಮೆಟ್ಟಿಲು ಕುಸಿದು ಬಿದ್ದು ನಾಲ್ಕೈದು ಮಕ್ಕಳಿಗೆ ಗಂಭೀರ ಗಾಯಗಳಾದವು. ಘಟನೆ ನಡೆದು ಎಂಟು ತಿಂಗಳು ಗತಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ಗ್ಯಾಲರಿ ದಿನೇ ದಿನೇ ಅಲ್ಲಲ್ಲಿ ಕುಸಿಯುತ್ತಿದೆ. ಟ್ರ್ಯಾಕ್‌ನ ಹೊರ ವರ್ತುಲದಲ್ಲಿ `ವಾಕಿಂಗ್ ಪಾಥ್' ನಿರ್ಮಾಣ ಮಾಡುವ ಯೋಜನೆ ನೆನೆಗುದಿಗೆ ಬಿದ್ದಿದೆ.ಆ `ಹಾದಿ'ಯ ಸುತ್ತಲೂ ರಾತ್ರಿ ವೇಳೆ ಬೆಳಕು ಚೆಲ್ಲಲು ಕಂಬ ಹಾಕಲಾಗಿದೆ. ಆದರೆ  ಆ ಕಂಬಗಳಿಗೆ ಬಲ್ಬ್ ಅಳವಡಿಸದ ಕಾರಣ ಕ್ರೀಡಾಂಗಣ ನಿತ್ಯ ಕತ್ತಲಲ್ಲೇ ಮುಳುಗಿರುತ್ತದೆ. ಇದು ಅನೈತಿಕ ಚಟುವಟಿಕೆಗಳಿಗೆ ಎಡೆ ಮಾಡಿಕೊಟ್ಟಿದೆ.ಇಲ್ಲಿ ಜಿಮ್ನಾಸ್ಟಿಕ್ಸ್ ತರಬೇತಿಗೆ ಅಗತ್ಯವಾದ ಸಲಕರಣೆಗಳಿದ್ದರೂ; ಅವನ್ನು ಬಳಸುವಂತಿಲ್ಲ. ಸೂಕ್ತ ಸ್ಥಳಾವಕಾಶದ ಕೊರತೆಯಿಂದ ಇಲಾಖೆಯ ಗೋದಾಮಿನಲ್ಲೇ ತುಕ್ಕು ಹಿಡಿಯುತ್ತಿವೆ.  ಕ್ರೀಡಾಂಗಣದ ಮುಂಭಾಗದಲ್ಲಿರುವ ಬ್ಯಾಸ್ಕೆಟ್‌ಬಾಲ್ ಅಂಕಣ ಶಿಥಿಲಗೊಂಡಿದೆ.ಜಿಲ್ಲೆಯ ಕ್ರೀಡಾಸಕ್ತರ ತೀವ್ರ ವಿರೋಧದ ನಡುವೆ ಕ್ರೀಡಾಂಗಣವನ್ನು ವಿಶ್ವವಿದ್ಯಾಲಯ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಆಲೋಚನೆಯನ್ನೂ ಕೈಬಿಟ್ಟಿಲ್ಲ. ಇದು ಕ್ರೀಡಾಪ್ರೇಮಿಗಳ ಪಾಲಿಗೂ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.ಟೆನಿಸ್ ಕೋರ್ಟ್ ದುರಂತ: ಈ `ಹಸಿರು ಅಂಗಳ'ದಲ್ಲಿ ದೇಶ-ವಿದೇಶದ ಪ್ರತಿಷ್ಠಿತ ಎಟಿಪಿ ರ‍್ಯಾಂಕಿಂಗ್ ಟೆನಿಸ್ ಆಟಗಾರರು ಆಡಿದ್ದಾರೆ.  ಈಚೆಗೆ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಟ್ಟ ಟೆನಿಸ್ ಅಂಗಳ ಈಗ ನೆನಪು ಮಾತ್ರ. ಅಂಗಳದಲ್ಲಿ ಮೂಡುತ್ತಿರುವ `ಕೆಂಪು ಮಚ್ಚೆ'ಗಳು ಇದರ ಶೋಚನೀಯ ಅವಸ್ಥೆಯ ಪ್ರತಿಬಿಂಬದಂತೆ ಗೋಚರಿಸುತ್ತಿವೆ. ಇದರಿಂದ ದಶಕದ ವೈಭವ ಮಸುಕಾಗಿದೆ.ತುಮಕೂರಿನಲ್ಲಿ ಎಟಿಪಿ ಚಾಲೆಂಜರ್ ಟೂರ್ನಿ ನಡೆಸಬೇಕು. ಗ್ರಾಮೀಣ ಭಾಗದಲ್ಲಿ ಟೆನಿಸ್ ಕ್ರೀಡೆ ಜನಪ್ರಿಯಗೊಳಿಸಬೇಕು ಎಂಬ ಆಶಯದಿಂದ ಹಿಂದೆ ರಾಜ್ಯ ಟೆನಿಸ್ ಸಂಸ್ಥೆ ಅಧ್ಯಕ್ಷರಾಗಿದ್ದ ಎಸ್.ಎಂ.ಕೃಷ್ಣ 2000ನೇ ಇಸವಿಯಲ್ಲಿ ಟೆನಿಸ್ ಕೋರ್ಟ್ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದಕ್ಕೆ ಡಾ.ಜಿ.ಪರಮೇಶ್ವರ್ ಸಾಥ್ ನೀಡಿದರು. ನಿರೀಕ್ಷೆಯಂತೆ ಟೂರ್ನಿ ನಡೆಯಿತು. ಖ್ಯಾತ ಆಟಗಾರರೂ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ನಂತರ ಇದರ ಮೇಲ್ವಿಚಾರಣೆಯನ್ನು ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸ್ಥಳೀಯ ಟೆನಿಸ್ ಅಕಾಡೆಮಿಗೆ ನೀಡಲಾಗಿತ್ತು. ನಂತರ ಕಾಲೇಜು ಶಿಕ್ಷಣ ಇಲಾಖೆಯಿಂದ ಯುವಜನ ಸೇವಾ ಇಲಾಖೆಗೆ ವರ್ಗಾಯಿಸಲಾಯಿತು.ನಂತರ `ಇಲಾಖೆ ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಲೇ ಟೆನಿಸ್ ಅಂಗಳ ಉಳಿಸಿಕೊಳ್ಳಲಾಗಲಿಲ್ಲ. ಆಗ ಸರಿಯಾದ ದಾಖಲೆಯನ್ನು ಸರ್ಕಾರದ ಮೂಲಕ ಮಾಡಿಸಿಟ್ಟಿದ್ದರೆ ಈ ರೀತಿ ಪರಿಸ್ಥಿತಿ ಬರುತ್ತಿರಲಿಲ್ಲ' ಎನ್ನುತ್ತಾರೆ ಹೆಸರು ಹೇಳಲು ಬಯಸದ ಆಟಗಾರರು ಹಾಗೂ ತರಬೇತುದಾರರು. ಆದರೆ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆ ಉಪನಿರ್ದೇಶಕ ಸಿ.ಬಿ.ರಂಗಯ್ಯ ಪ್ರಕಾರ `ಟೆನಿಸ್ ಕೋರ್ಟ್ ಎಂದಿಗೂ ಇಲಾಖೆ ಅಧೀನದಲ್ಲಿರಲಿಲ್ಲ'.ಈ ಟೆನಿಸ್ ಅಂಗಣ ನಿರ್ಮಿಸಿದ್ದು ಜರ್ಮನಿಯ ಎಂಜಿನಿಯರ್ ತಂಡ. ತುಮಕೂರಿಗೆ 2000ನೇ ಇಸವಿಯಲ್ಲಿ ಬಂದ ಈ ತಂಡ `ಬಿಟ್ಯುಮಿನ್' ಎನ್ನುವ ಕಡು ಹಸಿರು ಬಣ್ಣದ ಡಾಂಬರ್ ಅನ್ನು ಬಳಸಿ ಸುಂದರ ರೂಪ ನೀಡಿದ್ದರು. ಅಂದು ತಗುಲಿದ ವೆಚ್ಚ ಸುಮಾರು 1 ಕೋಟಿ ರೂಪಾಯಿ. ಇಂಥ ಸುಂದರ ಅಂಗಣ ಈಗ ಪಾಳು ಬಿದ್ದಂತಿದೆ.ಈಜುಕೊಳದ ಜಾಗದಲ್ಲಿ ಬಯಲು ರಂಗಮಂದಿರ

ತುಮಕೂರಿನಲ್ಲಿ ಈಜುಕೊಳ ನಿರ್ಮಿಸಬೇಕು ಎಂಬುದು ದಶಕಗಳ ಕನಸು. ಇದಕ್ಕಾಗಿ ವರ್ಷಗಳಿಂದ ತಯಾರಿ ನಡೆಯುತ್ತಲೇ ಇದೆ. ಕೊಳ ನಿರ್ಮಾಣಕ್ಕೆ ಗುರುತಿಸಿದ್ದ ಜಾಗದಲ್ಲಿ ಗುಂಡಿ ತೋಡಲಾಗಿದೆ. ಇದಿಷ್ಟೇ ಪ್ರಗತಿ. ಈ ಗುಂಡಿಗೆ ಕೆಲವರ ಬಲಿಯೂ ಆಗಿದೆ. ಆದರೂ ಸಂಬಂಧಪಟ್ಟವರು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.ಆದರೆ ಈಜುಕೊಳಕ್ಕೆ ನಿಗದಿಪಡಿಸಿದ್ದ ಜಾಗ ಇದೀಗ ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದೆ. ಈಜುಕೊಳಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ ಈಗ ಬಯಲು ರಂಗಮಂದಿರವನ್ನು ನಿರ್ಮಿಸಲಾಗಿದೆ.

ಪ್ರತಿಕ್ರಿಯಿಸಿ (+)