ವಿ.ವಿ ಅಂತರ ಕಾಲೇಜು ಅಥ್ಲೆಟಿಕ್ಸ್: 3 ದಾಖಲೆ

7

ವಿ.ವಿ ಅಂತರ ಕಾಲೇಜು ಅಥ್ಲೆಟಿಕ್ಸ್: 3 ದಾಖಲೆ

Published:
Updated:

ಉಡುಪಿ: ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಟ್ಟದ ಮಹಿಳಾ ಮತ್ತು ಪುರುಷರ ಅಥ್ಲೆಟಿಕ್ಸ್ ಕ್ರೀಡಾಕೂಟದ ಎರಡನೆ ದಿನದಲ್ಲಿ ಮೂಡಬಿದಿರೆ ಆಳ್ವಾಸ್ ಮತ್ತು ಉಜಿರೆ ಎಸ್‌ಡಿಎಂ ಕಾಲೇಜಿನ ಕ್ರೀಡಾಳುಗಳು 3 ನೂತನ ದಾಖಲೆ ಸ್ಥಾಪಿಸಿದ್ದಾರೆ ಹಾಗೂ ಎರಡನೇ ದಿನಮೂಡುಬಿದಿರೆ ಆಳ್ವಾಸ್ ಕಾಲೇಜು ಪ್ರಾಬಲ್ಯ ಮುಂದುವರಿಸಿದೆ. ಉಜಿರೆ ಎಸ್‌ಡಿಎಂ ಕಾಲೇಜಿನ ಕೆ.ಬಿ.ರಾಣಿ  ಐದು ಕಿ.ಮೀ.ನಡಿಗೆ ಸ್ಪರ್ಧೆಯಲ್ಲಿ 28.10 ನಿಮಿಷದಲ್ಲಿ ಗುರಿ ತಲುಪುವ ಮೂಲಕ 2007-08ರಲ್ಲಿ ತಮ್ಮದೇ ಕಾಲೇಜಿನ ಎಚ್.ಎಸ್.ಸಿಂಪನಾ (28.20) ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿ ಪ್ರಥಮ ಸ್ಥಾನ ಪಡೆದರು. ಅದೇ ಕಾಲೇಜಿನ ಕೆ.ಬಿ.ಅಕ್ಷತಾ 32.51 ನಿಮಿಷದಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಗಳಿಸಿದರು.ಮಹಿಳೆಯರ ಪೋಲ್‌ವಾಲ್ಟ್‌ನಲ್ಲಿ ಬಸ್ರೂರು ಎಸ್‌ಎಸ್‌ಸಿ ಕಾಲೇಜಿನ ಕೀರ್ತೀ 2.50 ಮೀಟರ್ ಎತ್ತರ ಜಿಗಿಯುವ ಮೂಲಕ ಪ್ರಥಮ ಸ್ಥಾನ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ  ಸುಪ್ರಿಯ 2.40 ಮೀಟರ್ ಎತ್ತರ ಜಿಗಿಯುವ ಮೂಲಕ ದ್ವಿತೀಯ ಸ್ಥಾನ ಪಡೆದರು.

ನೂರು ಮೀಟರ್ ಅಡೆತಡೆ (ಹರ್ಡಲ್ಸ್) ಓಟದಲ್ಲಿ ಆಳ್ವಾಸ್ ಕಾಲೇಜಿನ ಸುಶ್ಮಿತಾ ಅವರು 17.6 ಸೆಕುಂಡುಗಳಲ್ಲಿ ಗುರಿ ತಲುಪಿ ಪ್ರಥಮ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ಕೆ.ಎನ್. ಮಮತಾ ಅವರು 21.2 ಸೆಕುಂಡುಗಳಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನ ಗಳಿಸಿದರು.ಹ್ಯಾಮರ್ ಥ್ರೊ ಸ್ಪರ್ಧೆಯಲ್ಲಿ ಆಳ್ವಾಸ್ ಮೂಡುಬಿದಿರೆಯ ವಿಭಾ ಬಿ.ಶಂಕರ್ ಅವರು 42.19 ಮೀಟರ್ ದೂರ ಎಸೆಯುವ ಮೂಲಕ 2011-12ರಲ್ಲಿ ತಮ್ಮದೇ ಹೆಸರಿನ್ಲ್ಲಲಿದ್ದ ದಾಖಲೆ (42.03)ಯನ್ನು ಉತ್ತಮ ಪಡಿಸಿ ಪ್ರಥಮ ಸ್ಥಾನ ಪಡೆದರು. ಅದೇ ಕಾಲೇಜಿನ ಪುಣ್ಯಶ್ರೀ ರೈ ಅವರು 33.87 ದೂರ ಹ್ಯಾಮರ್ ಎಸೆದು ದ್ವಿತೀಯ ಸ್ಥಾನ ಗಳಿಸಿದರು.400 ಮೀಟರ್ ಓಟದ ಸ್ಪರ್ಧೆಯಲ್ಲಿ ಆಳ್ವಾಸ್ ಮೂಡುಬಿದಿರೆಯ ಸುಶ್ಮಿತಾ ದೇವದಾಸ್ 57.5 ಸೆಕುಂಡುಗಳಲ್ಲಿ ದೂರ ಕ್ರಮಿಸಿ ಪ್ರಥಮ ಸ್ಥಾನ ಹಾಗೂ ಅದೇ ಕಾಲೇಜಿನ ಕುಸುಮಾ 1.03.2 ನಿಮಿಷದಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದರು.ಪುರುಷರ ವಿಭಾಗದ ಹ್ಯಾಮರ್ ಥ್ರೊ ಸ್ಪರ್ಧೆಯಲ್ಲಿ ಉಜಿರೆ ಎಸ್‌ಡಿಎಂ ಕಾಲೇಜಿನ ಖಾಸೀಂ ಬಡೇಸಾಬ್ ಅವರು 52.34 ಮೀಟರ್ ದೂರ ಹ್ಯಾಮರ್ ಎಸೆದು 2009-10ರಲ್ಲಿ ಆಳ್ವಾಸ್ ಮೂಡುಬಿದಿರೆಯ ಅರುಣ್ ಕುಮಾರ್ ಶೆಟ್ಟಿ ಹೆಸರಿನಲ್ಲಿದ್ದ (51.05ಮೀ) ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಂಡರು. ಈ ವಿಭಾಗದಲ್ಲಿ 47.55ಮೀಟರ್ ದೂರ ಎಸೆದ ಆಳ್ವಾಸ್ ಕಾಲೇಜಿನ ಸುಧೀರ್ ಶಿರದೋನೆ ದ್ವಿತೀಯ ಸ್ಥಾನ ಪಡೆದರು.ಪುರುಷರ 20 ಮೀಟರ್ ನಡಿಗೆ ಸ್ಪರ್ಧೆಯಲ್ಲಿ ಪುತ್ತೂರು ಸೇಂಟ್ ಫಿಲೋಮಿನಾ ಕಾಲೇಜಿನ ರಾಜೇಶ್ ಮೂಲ್ಯ 1.53.48 ಸಮಯದಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಹಾಗೂ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಗಿರೀಶ್ 1.53.49 ಸಮಯದಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನ ಗಳಿಸಿದರು.110ಮೀಟರ್ ಅಡೆ ತಡೆ ಓಟದಲ್ಲಿ ಆಳ್ವಾಸ್ ಮೂಡುಬಿದಿರೆಯ ಶ್ರೀಕಾಂತ್ 15 ಸೆಕುಂಡ್‌ಗಳಲ್ಲಿ ಗುರಿ ತಲುಪಿದ್ದಲ್ಲದೇ 2007-08 ಆಳ್ವಾಸ್‌ನ ನಿಸಾರ್ ಸ್ಥಾಪಿಸಿದ್ದ ದಾಖಲೆಯನ್ನು ಸರಿಗಟ್ಟಿದರು. ಅದೇ ವಿಭಾಗದಲ್ಲಿ ಉಡುಪಿ ಎಂಜಿಎಂ ಕಾಲೇಜಿನ ಎಸ್.ಯು.ಸಮರ್ಥ್ 15.1 ಸೆಕುಂಡ್‌ಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದರು.400 ಮೀಟರ್ ಓಟದ ಸ್ಪರ್ಧೆಯಲ್ಲಿ ಆಳ್ವಾಸ್ ಮೂಡುಬಿದಿರೆಯ ಮನೋಹರ್ ಅವರು 50.6 ಸೆಕುಂಡುಗಳಲ್ಲಿ ಗುರಿ ಮುಟ್ಟಿ ಪ್ರಥಮ ಹಾಗೂ ಆಳ್ವಾಸ್ ಬಿಇಡಿ ಕಾಲೇಜಿನ ಸಿದ್ದರಾಜು 51.2 ಸೆಕುಂಡುಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry