ಬುಧವಾರ, ಸೆಪ್ಟೆಂಬರ್ 30, 2020
20 °C

ವಿ.ವಿ ಕುಲಪತಿಗಳ ಆಯ್ಕೆಯ ಮಾನದಂಡಕ್ಕೆ ರಾಜ್ಯಪಾಲರ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿ.ವಿ ಕುಲಪತಿಗಳ ಆಯ್ಕೆಯ ಮಾನದಂಡಕ್ಕೆ ರಾಜ್ಯಪಾಲರ ಕಳವಳ

ಬೆಂಗಳೂರು: `ವಿಶ್ವವಿದ್ಯಾಲಯಗಳಲ್ಲಿ ನೇಮಕ ಮಾಡುವಾಗ ಶೋಷಿತ ವರ್ಗಗಳು ಹಾಗೂ ಅಲ್ಪಸಂಖ್ಯಾತರನ್ನು ನಿರ್ಲಕ್ಷಿಸಲಾಗುತ್ತಿದೆ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಬೇಸರ ವ್ಯಕ್ತಪಡಿಸಿದರು.ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಗ್ರಂಥಾಲಯ ವೃತ್ತಿಪರರ ಸಂಘದ ಆಶ್ರಯದಲ್ಲಿ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ `ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಪುನರ್ ಶೋಧನೆ ಮತ್ತು ಪುನರ್ ರಚನೆ~ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.`ಶೋಷಿತ ಸಮುದಾಯದಿಂದ ಬಂದ ಕುಲಪತಿಗಳು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬ್ರಾಹ್ಮಣ ಸಮುದಾಯದವರನ್ನು ಕುಲಪತಿಯನ್ನಾಗಿ ನೇಮಿಸಿಲ್ಲ. ನಾನು ಯಾವುದೇ ಜಾತಿಯ ವಿರೋಧಿ ಅಲ್ಲ. ಆದರೆ, ಸರ್ಕಾರದ ಜೊತೆಗೆ ಹೋರಾಟ ನಡೆಸಿ ಉತ್ತಮ ಕುಲಪತಿಗಳನ್ನು ನೇಮಕ ಮಾಡುವ ಸ್ಥಿತಿ ಇದೆ. ಕುಲಪತಿಗಳ ಆಯ್ಕೆ ಮಾನದಂಡದ ಬಗ್ಗೆ ಸದನದಲ್ಲಿ ಚರ್ಚೆ ನಡೆದಿರುವುದು ಉತ್ತಮ ಬೆಳವಣಿಗೆ~ ಎಂದು ಅವರು ಶ್ಲಾಘಿಸಿದರು.`ದೇಶದ ಎಲ್ಲರಿಗೂ ಶಿಕ್ಷಣ ದೊರಕದಿದ್ದರೆ ದೇಶದ ಪ್ರಗತಿ ಅಸಾಧ್ಯ. ದುರ್ದೈವದ ಸಂಗತಿಯೆಂದರೆ ಗ್ರಾಮೀಣ ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಬಡವರು ಇದ್ದಾರೆ. ಅವರ ಬಾಳಿನಲ್ಲಿ ಬೆಳಕು ಮೂಡಿಲ್ಲ. ಸಮಾಜದಲ್ಲಿ ಸಾಮಾಜಿಕ ಅಸಮಾನತೆ ಹೋಗಲಾಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮ ಮನೋಭಾವ ಬದಲಾಗಬೇಕಿದೆ~ ಎಂದರು.`ಸಾಮಾಜಿಕ ಅಸಮಾನತೆ ಸಮಾಜದ ದೊಡ್ಡ ಶತ್ರು. ಶತಮಾನಗಳಿಂದ ಅಸಮಾನತೆ ತಾಂಡವವಾಡುತ್ತಿದ್ದು, ಹಿಂದುಳಿದವರನ್ನು ಮನುಷ್ಯರಂತೆ ನೋಡುತ್ತಿಲ್ಲ. ಯಾವ ವ್ಯಕ್ತಿಯನ್ನು ಸಹ ಜಾತಿಯ ಆಧಾರದಲ್ಲಿ ನೋಡಬಾರದು. ಕೆಲವರಿಗೆ ತಾವು ಶ್ರೇಷ್ಠ ಎಂಬ ಭಾವನೆ ಇದೆ. ಆದರೆ, ನಮ್ಮ ಸಂವಿಧಾನದ ಪ್ರಕಾರ ಯಾರೂ ಶ್ರೇಷ್ಠರಲ್ಲ, ಎಲ್ಲರೂ ಸಮಾನರು. ಇತರ ಎಲ್ಲ ನ್ಯಾಯಗಳಿಗಿಂತ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಒತ್ತು ನೀಡಬೇಕು~ ಎಂದು ಅವರು ಸಲಹೆ ನೀಡಿದರು.`ರಾಷ್ಟ್ರ ನಿರ್ಮಾಣದಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ಸಮಾಜದ ಪುನರ್ ನಿರ್ಮಾಣ ಆಗಬೇಕು. ಎಲ್ಲರಿಗೂ ಸಮಾನ ಹಕ್ಕು, ರಕ್ಷಣೆ ಸಿಗಬೇಕು. ಜನರು ಪೂರ್ವಾಗ್ರಹ ಬಿಟ್ಟು ನಾವೆಲ್ಲ ಭಾರತೀಯರು ಎಂಬ ಮನೋಭಾವ ಮೈಗೂಡಿಸಿಕೊಳ್ಳಬೇಕು~ ಎಂದು ಕಿವಿಮಾತು ಹೇಳಿದರು.`ಹಳೆಯ ಕಾಲಮಾನದಲ್ಲಿ ಜನಸಾಮಾನ್ಯರಿಗೆ ಜ್ಞಾನಾರ್ಜನೆಗೆ ಗ್ರಂಥಾಲಯ ಅನಿವಾರ್ಯವಾಗಿತ್ತು. ಆದರೆ ಇಂದು ಕಾಲ ಬದಲಾಗಿದ್ದು, ತಂತ್ರಜ್ಞಾನದ ತೀವ್ರ ಪ್ರಗತಿಯಾಗಿದೆ. ಗ್ರಂಥಾಲಯ ವ್ಯವಸ್ಥೆಯ ಪುನರ್ ನಿರ್ಮಾಣ ಆಗಬೇಕಿದೆ. ಈ ನಿಟ್ಟಿನಲ್ಲಿ ತಜ್ಞರು ಗಮನ ಹರಿಸಬೇಕು~ ಎಂದರು.ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ, `ಗ್ರಂಥಾಲಯ ವ್ಯವಸ್ಥೆಯ ಪುನರ್ ವ್ಯಾಖ್ಯಾನ ಆಗಬೇಕು. ಗ್ರಂಥಾಲಯ ನಾಲ್ಕು ಗೋಡೆಗಳಿಗೆ ಸೀಮಿತ ಆಗಬಾರದು. ಗ್ರಂಥಾಲಯಗಳು ಸಮುದಾಯ ಮಾಹಿತಿ ಕೇಂದ್ರಗಳಾಗಬೇಕು~ ಎಂದರು.`ಎಲ್ಲರಿಗೂ ಲಭ್ಯವಾಗುವಂತಹ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಬೇಕು. ಇದರ ಮೂಲಕ ದೇಶದ ಸಾಂಸ್ಕೃತಿಕ ಪರಂಪರೆ ಎಲ್ಲರಿಗೂ ಲಭ್ಯವಾಗಬೇಕು~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಪ್ರಭುದೇವ್ ತಿಳಿಸಿದರು.ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವಿ.ಜಿ.ತಳವಾರ, ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಇ.ಟಿ.ಪುಟ್ಟಯ್ಯ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಕೆ.ಜಿ.ವೆಂಕಟೇಶ್, ಬೆಂಗಳೂರು ವಿವಿ ಕುಲಸಚಿವ ಪ್ರೊ.ಬಿ.ಸಿ.ಮೈಲಾರಪ್ಪ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಗ್ರಂಥಾಲಯ ವೃತ್ತಿಪರರ ಸಂಘದ ಅಧ್ಯಕ್ಷ ಡಾ.ಗಣಪತಿ ಶಿಂದೆ, ಸಂಘಟನಾ ಕಾರ್ಯದರ್ಶಿ ಬಿ.ಆರ್.ರಾಮಕೃಷ್ಣ, ಕಾರ್ಯದರ್ಶಿ ಟಿ.ವೈ.ಮಲ್ಲಯ್ಯ ಉಪಸ್ಥಿತರಿದ್ದರು.`ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಿ~

`ಬೆಂಗಳೂರು ವಿವಿ ಕುಲಪತಿ ಡಾ. ಎನ್. ಪ್ರಭುದೇವ್ ಹಾಗೂ ಕುಲಸಚಿವ ಪ್ರೊ. ಬಿ.ಸಿ. ಮೈಲಾರಪ್ಪ ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು. ಅವರು ಯಾವುದೇ ವಿವಾದಗಳಿಗೆ ಅವಕಾಶ ಮಾಡಿಕೊಡಬಾರದು~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕಿವಿಮಾತು ಹೇಳಿದರು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, `ಮಂಗಳೂರು ವಿವಿ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಅತ್ಯುತ್ತಮ ಕುಲಪತಿ. ಮೈಸೂರು ವಿವಿ ಕುಲಪತಿ ಪ್ರೊ.ವಿ.ಜಿ. ತಳವಾರ್ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಗುಲ್ಬರ್ಗ ವಿವಿ ಕುಲಪತಿ ಪ್ರೊ.ಇ.ಟಿ. ಪುಟ್ಟಯ್ಯ ಅವರು ನನ್ನ ಶೋಧ. ಅವರು ಕಠಿಣ ಪರಿಶ್ರಮಿ.ಬೆಂಗಳೂರು ವಿವಿ ಕುಲಪತಿ ಡಾ. ಎನ್.ಪ್ರಭುದೇವ್ ಉತ್ತಮ ಸರ್ಜನ್. ಪ್ರೊ. ಬಿ.ಸಿ. ಮೈಲಾರಪ್ಪ  ಅವರಿಗೆ ಪ್ರಾಧ್ಯಾಪಕ ವೃತ್ತಿಯಲ್ಲಿ ಉತ್ತಮ ಭವಿಷ್ಯ ಇದೆ. ಅವರಿಬ್ಬರು ವಿಷಯಗಳನ್ನು ಅರಿತುಕೊಂಡು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು~ ಎಂದು ಅವರು ಸಲಹೆ ನೀಡಿದರು.`ಲೋಕಾಯುಕ್ತ: ಶೀಘ್ರ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ~

`ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಕರೆಯಿಸಿ ಲೋಕಾಯುಕ್ತ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಿಳಿಸಿದರು.ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, `ಶೀಘ್ರ ಲೋಕಾಯುಕ್ತರ ನೇಮಕ ಮಾಡಬೇಕು ಎಂದು ಹೈಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಸರ್ಕಾರ ಲೋಕಾಯುಕ್ತರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕಿದೆ~ ಎಂದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.