ವಿ.ವಿ ಕುಲಪತಿಗೆ ಸಂಸ್ಕೃತ ತಿಳಿದಿಲ್ಲ: ಸ್ವಾಮೀಜಿ ಆಕ್ಷೇಪ

7

ವಿ.ವಿ ಕುಲಪತಿಗೆ ಸಂಸ್ಕೃತ ತಿಳಿದಿಲ್ಲ: ಸ್ವಾಮೀಜಿ ಆಕ್ಷೇಪ

Published:
Updated:

ತುಮಕೂರು: ರಾಜ್ಯ ಸರ್ಕಾರ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಸಂಸ್ಕೃತವೇ ಸರಿಯಾಗಿ ಗೊತ್ತಿಲ್ಲದ ವ್ಯಕ್ತಿಯನ್ನು ಕುಲಪತಿಯಾಗಿ ನೇಮಕ ಮಾಡಿ ವಿ.ವಿ. ಹಿನ್ನೆಡೆ ಅನುಭವಿಸುವಂತೆ ಮಾಡಿದೆ ಎಂದು ಕೊಳದ ಮಠದ ಡಾ.ಶಾಂತವೀರ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದರು.ನಗರದ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರು, ಆಗಮಿಕರು ಹಾಗೂ ನೌಕರರ ಸಂಘದಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅರ್ಚಕರ ಸಮಾವೇಶದಲ್ಲಿ ಮಾತನಾಡಿ, ರಾಜ್ಯದ ಅರ್ಚಕರು, ಆಗಮಿಕರ ಬೇಡಿಕೆ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದಲ್ಲಿ ಸಂಸ್ಕೃತ ವಿ.ವಿ. ಸ್ಥಾಪಿಸಿದ್ದರೂ ಕುಲಪತಿ ನೇಮಕಾತಿಯಲ್ಲಿ ಎಡವಿದೆ ಎಂದು ಟೀಕಿಸಿದರು.ಸಂಸ್ಕತ ವಿ.ವಿ. ಅಡಿಯಲ್ಲಿ ಆಗಮಶಾಸ್ತ್ರ ತರಲು ಮುಂದಾಗಿರುವುದು ತಪ್ಪು. ಹಿಂದೂ ಆಗಮ ಶಾಸ್ತ್ರವನ್ನು ಒಂದು ವಿ.ವಿ.ಗೆ ಸಿಮೀತಗೊಳಿಸಬಾರದು. ವಿವಿಧ ಧರ್ಮಗಳಿಗೆ ಸಂಬಂಧಿಸಿದ ಏಳು ಆಗಮ ಶಾಸ್ತ್ರಗಳು ನಮ್ಮಲ್ಲಿವೆ. ಅವುಗಳೆಲ್ಲವನ್ನು ಬೋಧಿಸುವಷ್ಟು ಸಂಸ್ಕತ ವಿ.ವಿ. ವಿಶಾಲವಾಗಿಲ್ಲ. ವೀರಶೈವ ಆಗಮ, ಜೈನ ಆಗಮ ಶಾಸ್ತ್ರ    ಸೇರಿದಂತೆ ಇರುವ ಏಳು ಆಗಮ ಶಾಸ್ತ್ರಗಳಲ್ಲಿ ಕೇವಲ ಮೂರನ್ನು ಮಾತ್ರ ಕಲಿತು ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಯಾವುದೇ ಕಾರಣಕ್ಕೂ ಆಗಮ ಶಾಸ್ತ್ರವನ್ನು ಸಂಸ್ಕತ ವಿ.ವಿ. ಅಧೀನಕ್ಕೆ ತರಬಾರದು ಎಂದು               ಒತ್ತಾಯಿಸಿದರು.ರಾಜ್ಯ ಸರಕಾರ ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನು ಬೇರೆ ಇಲಾಖೆಯೊಂದಿಗೆ ವಿಲೀನಗೊಳಿಸಿ, ಸೌಲಭ್ಯಗಳನ್ನು ಮೊಟಕುಗೊಳಿಸಲು ಮುಂದಾಗಿದೆ. ಕಂದಾಯ ಇಲಾಖೆಯಿಂದ ಬೇರ್ಪಡಿಸಿ ಪತ್ಯೇಕವಾಗಿ ಬೆಳೆಸಬೇಕು ಎಂದು ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರ ಧಾರ್ಮಿಕ ದತ್ತಿ ಇಲಾಖೆಯನ್ನು ಬೇರೆ ಇಲಾಖೆಯ ಜೊತೆಗೆ ಸೇರಿದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ. ಅಲ್ಲದೆ ಧಾರ್ಮಿಕ ಪರಿಷತ್ತನ್ನು ರಾಜ್ಯ ಮತ್ತು ಜಿಲ್ಲಾ ಎಂದು ವಿಂಗಡಿಸಿ ನಿವೃತ್ತ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಕಾಯ್ದೆಯನ್ನು ಕೈಬಿಡಬೇಕು ಎಂದು ಸ್ವಾಮಿಜಿ ಆಗ್ರಹಿಸಿದರು.ಭೂಸುಧಾರಣಾ ಕಾಯ್ದೆಯಂತೆ ಹೂಳುವವ ಭೂಮಿ ಒಡೆಯ ಕಾನೂನು ಇದ್ದರೂ ಅರ್ಚಕರು ಹೂಳುತ್ತಿರುವ ಭೂಮಿ ಇಂದಿಗೂ ಅವರ ಹೆಸರಿಗೆ ಖಾತೆ, ಪಹಣಿ ಆಗಿಲ್ಲ. ಧಾರ್ಮಿಕ ದತ್ತಿ ಇಲಾಖೆ ನೌಕರರಾಗಿರುವ ಅರ್ಚಕರು, ಆಗಮಿಕರು ಹಾಗೂ ಇತರರಿಗೆ ಸರಕಾರಿ ಸವಲತ್ತು ನೀಡಬೇಕು. ಅರ್ಚಕರಿಗೆ ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.ಅರ್ಚಕರು ಸ್ವಹಿತಾಸಕ್ತಿಗಿಂತ ದೇವಾಲಯ ಅಭಿವೃದ್ಧಿಗೆ ಮುತುವರ್ಜಿ ವಹಿಸಬೇಕು. ಸರ್ಕಾರಕ್ಕೆ ಮುಜರಾಯಿ ದೇವಾಲಯಗಳ ಎಲ್ಲ ಸಮಸ್ಯೆಗಳ ಅರಿವಿದೆ. ಅರ್ಚಕರ ಸಂಘದ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುವುದಾಗಿ ರಾಜ್ಯ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಬಿ.ಜಿ.ನಂದಕುಮಾರ್ ಹೇಳಿದರು.ಮುಜರಾಯಿ ದೇವಾಲಯಗಳ ಅರ್ಚಕರಿಗೆ ದೇವಾಲಯ ಆವರಣದಲ್ಲೇ ಮನೆ ನಿರ್ಮಿಸಿಕೊಡುವುದು, ಬಿಪಿಎಲ್ ಕಾರ್ಡ್, ಸ್ವಸ್ತಿಕ್ ದರ ಹೆಚ್ಚಳ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.ಸಿದ್ದಂಗಾ ಮಠಾಧ್ಯಕ್ಷ ಡಾ.ಶಿವಕುಮಾರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರೇಮಠಾಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಉಜನಿ ತ್ರಿದಂಡ ವೆಂಕಟರಾಮಾನುಜಾಚಾರ್ಯ ಸ್ವಾಮಿಜಿ, ಬೆಟ್ಟದಹಳ್ಳಿ ಗವಿಮಠದ ಚಂದ್ರಶೇಖರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಡಾ.ಬಿ.ಎನ್.ರವಿ, ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಸಂಘದ ಅಧ್ಯಕ್ಷ ಶ್ರೀವತ್ಸ, ಕಾರ್ಯದರ್ಶಿ ಶ್ರೀನಿವಾಸ್, ಜಿಲ್ಲಾ ಅಧ್ಯಕ್ಷ ವಿ.ರಾಮತೀರ್ಥನ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry