ಭಾನುವಾರ, ಮೇ 16, 2021
27 °C

ವಿ.ವಿ. ಭ್ರಷ್ಟಾಚಾರ ತನಿಖೆ ಸೂಚನೆ: ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿ.ವಿ. ಭ್ರಷ್ಟಾಚಾರ ತನಿಖೆ ಸೂಚನೆ: ಮೊಯಿಲಿ

ಬೆಂಗಳೂರು: `ರಾಜ್ಯದ ಕೆಲವು ವಿಶ್ವವಿದ್ಯಾಲಯಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ' ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.ನಗರದ ಡಾ.ಅಂಬೇಡ್ಕರ್ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ ನೂತನ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಮಾತನಾಡಿ, ಶಿಕ್ಷಣದ ಬಲದಿಂದ ದೇಶವನ್ನು ಮುನ್ನಡೆಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಹೇಳಿದರು.ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ನ (ಎಐಸಿಟಿಇ) ಅಧ್ಯಕ್ಷ ಡಾ.ಎಸ್.ಎಸ್.ಮಾಂಥ ಮಾತನಾಡಿ, `ರಾಷ್ಟ್ರೀಯ ಕೌಶಲ ಅಭಿವೃದ್ಧಿ ಯೋಜನೆಯಡಿ (ಎನ್‌ಎಸ್‌ಡಿಪಿ) ದೇಶದ 200 ತಾಂತ್ರಿಕ ಕಾಲೇಜುಗಳಿಗೆ ತಲಾ ರೂ. 2 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ 6 ಕಾಲೇಜುಗಳಿಗೆ ಈ ಯೋಜನೆಯಡಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ' ಎಂದರು.ಎಐಸಿಟಿಇ ಅನುದಾನದಡಿ ಕಾಲೇಜಿನ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗಾಗಿ `ಅಶೋಕ' ಹೆಸರಿನ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಎರಡು ಮಹಡಿಗಳ ವಿದ್ಯಾರ್ಥಿ ನಿಲಯವು ರೂ. 2 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಾಣವಾಗಲಿದೆ.ಕಾರ್ಯಕ್ರಮದಲ್ಲಿ ಶಾಸಕ ಮುನಿರತ್ನ, ರಾಜ್ಯ ತಾಂತ್ರಿಕ ಶಿಕ್ಷಣ ಮಂಡಳಿಯ ನಿರ್ದೇಶಕ ಎಚ್.ಯು.ತಳವಾರ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಮರಿಸ್ವಾಮಿ, ಕಾಲೇಜಿನ ಪ್ರಾಂಶುಪಾಲ ಡಾ.ಸಿ.ನಂಜುಂಡಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.`ವೈಯಕ್ತಿಕ ಬೆದರಿಕೆಯಲ್ಲ'

`ದೇಶದೊಳಗಿನ ತೈಲ ನಿಕ್ಷೇಪಗಳನ್ನು ಗುರುತಿಸಿ, ಆಂತರಿಕ ಉತ್ಪಾದನೆ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಕೆಲವು ಆತಂಕಗಳು ಎದುರಾಗಿವೆಯೇ ಹೊರತು ನನಗೆ ಯಾರೂ ವೈಯಕ್ತಿಕ ಬೆದರಿಕೆ ಹಾಕಿಲ್ಲ' ಎಂದು ವೀರಪ್ಪ ಮೊಯಿಲಿ ಸ್ಪಷ್ಟಪಡಿಸಿದರು.ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ವಿದೇಶದಿಂದ ವಾರ್ಷಿಕ ಶೇ 80ರಷ್ಟು (ರೂ. 8 ಲಕ್ಷ ಕೋಟಿ ಮೌಲ್ಯ) ತೈಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ದೇಶದ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಹೀಗಾಗಿ ಆಂತರಿಕ ಉತ್ಪಾದನೆ ಹೆಚ್ಚಿಸಿಕೊಳ್ಳಬೇಕಿದೆ. ಈ ಪ್ರಯತ್ನಕ್ಕೆ ಆಮದು ಲಾಬಿ ಅಡ್ಡಿ ಪಡಿಸುತ್ತಿದೆ' ಎಂದರು.`ನಮ್ಮ ದೇಶದಲ್ಲಿ ಹೊಸ ತೈಲ ನಿಕ್ಷೇಪಗಳನ್ನು ಗುರುತಿಸಿ ತೈಲ ಉತ್ಪಾದನೆ ಹೆಚ್ಚಿಸಿಕೊಳ್ಳುವ ಪ್ರಯತ್ನಕ್ಕೆ ಆಮದು ಲಾಬಿಯಿಂದ ಆತಂಕವಿದೆ. ಆದರೆ, ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್)ಗೆ ಲಾಭ ಮಾಡಿಕೊಡುವ ಯಾವ ಪ್ರಯತ್ನವೂ ನಡೆದಿಲ್ಲ' ಎಂದು ಅವರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.