ಭಾನುವಾರ, ಮೇ 9, 2021
28 °C

ವಿವಿ ಮಾದರಿಯಲ್ಲಿ ಸ್ನಾತಕೋತ್ತರ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಕರ್ನಾಟಕ ವಿಶ್ವವಿದ್ಯಾಲಯದ ಹಾವೇರಿ ಸ್ನಾತಕೋತ್ತರ ಕೇಂದ್ರ ವನ್ನು ವಿಶ್ವವಿದ್ಯಾಲಯದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುವುದು~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ ಹೇಳಿದರು.ನಗರದ ಹೊರವಲಯದ ಕೆರೆಮತ್ತಿ ಹಳ್ಳಿಯಲ್ಲಿರುವ ಕರ್ನಾಟಕ ವಿವಿ ಹಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಸೋಮವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಸತಿ ನಿಲಯದ ಅಡಿಗಲ್ಲು ಸಮಾ ರಂಭವನ್ನು ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಹತ್ತು ವರ್ಷದ ಹಿಂದೆ ಸ್ನಾತ ಕೋತ್ತರ ಕೇಂದ್ರ ಸ್ಥಾಪನೆಯಾದರೂ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಸ್ನಾತಕೋತ್ತರ ಕೇಂದ್ರ ಬರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಅವರ ಅಗತ್ಯತೆಗೆ ಅನುಗುಣವಾಗಿ ಸ್ನಾತಕೋತ್ತರ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.ಈಗಾಗಲೇ ಸುಮಾರು 1.5 ಕೋಟಿ ರೂ.ವೆಚ್ಚದಲ್ಲಿ ಸ್ನಾತಕೋತ್ತರ ಕೇಂದ್ರಕ್ಕೆ ರಸ್ತೆ ನಿರ್ಮಾಣ ಮಾಡ ಲಾಗುತ್ತಿದ್ದು, ಸುಮಾರು ಒಂದುವರೆ ಕೋಟಿ ರೂ. ವೆಚ್ಚದಲ್ಲಿ ಮೊದಲನೆ ಮಹಡಿ ನಿರ್ಮಿಸಲಾಗುತ್ತದೆ. ಅದೇ ರೀತಿ ಸ್ನಾತಕೋತ್ತರ ಕೇಂದ್ರಕ್ಕೆ ಅವಶ್ಯ ವಿರುವ ಅತಿಥಿಗೃಹ, ವಿದ್ಯಾರ್ಥಿಗಳಿಗೆ ಕ್ಯಾಂಟಿನ್ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಹಂತ ಹಂತವಾಗಿ ನಿರ್ಮಿಸಲಾಗುವುದು ಎಂದರು.ಶಿಕ್ಷಣ ಅವಶ್ಯ: ಶಿಕ್ಷಣ ಬದುಕಿನ ವಿಕಾಸಕ್ಕೆ ಬೇಕಾದ ವಸ್ತುವಾಗಿದ್ದು, ಬದುಕಿಗೆ ಅನ್ನ, ನೀರು ಎಷ್ಟು ಅವಶ್ಯಕವೋ ಇಂದು ಶಿಕ್ಷಣವು ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ ಎಂದ ಅವರು, ಇಂದಿನ ಜಾಗತಿಕ ಮಟ್ಟದ ಸ್ಪರ್ಧೆ ಎದುರಿಸಲು ಶಿಕ್ಷಣದ ಅವ ಶ್ಯಕತೆಯಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿವಿ ಕುಲಪತಿ ಪ್ರೊ.ಎಚ್.ಬಿ.ವಾಲೀಕಾರ ಮಾತನಾಡಿ, ಹಾವೇರಿ ಸ್ನಾತಕೋತ್ತರ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿ ಮಾಡಲು ಅಗತ್ಯವಿರುವ ಎಲ್ಲ ಸಹ ಕಾರವನ್ನು ನೀಡುವುದಾಗಿ ತಿಳಿಸಿದರು.ಈಗಾಗಲೇ ಕರ್ನಾಟಕ ವಿವಿ ಧಾರವಾಡದಲ್ಲಿ ವಿದ್ಯಾರ್ಥಿಗಳಿಗೆ ಕೇವಲ 10 ರೂ.ಗಳಲ್ಲಿ ಊಟ ದೊರೆ ಯುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ವಿಶ್ವವಿದ್ಯಾಲಯ ಐದು ರೂ. ಭರಿಸಲಿದೆ. ಅದೇ ಮಾದರಿಯಲ್ಲಿ ಹಾವೇರಿ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ ಗಳಿಗೂ ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಶಾಸಕ ನೆಹರೂ ಓಲೇಕಾರ ಅವರು, ಹಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಭೂಗೋಳ ಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ಹಾಗೂ ಅರ್ಥಶಾಸ್ತ್ರ ವಿಭಾಗಗಳನ್ನು ಆರಂಭಿಸಬೇಕೆಂದು ಕುಲಪತಿಗಳಲ್ಲಿ ಮನವಿ ಮಾಡಿದರು.ನಂತರ ಕುಲಸಚಿವರು ಸ್ನಾತ ಕೋತ್ತರ ಕೇಂದ್ರಕ್ಕೆ ಅವಶ್ಯವಿರುವ ಬೇಡಿಕೆಗಳ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಿದರು.ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಕುಲಸಚಿವ ಪ್ರೋ.ಎಸ್.ಬಿ.ಹಿಂಚಿಗೇರಿ, ಸಿಂಡಿಕೇಟ್ ಸದಸ್ಯೆ ಡಾ. ಮಾಧುರಿ ದೇವದರ, ಪೃಥ್ವಿರಾಜ್ ಜೈನ್, ಪ್ರೊ.ಭದ್ರಾಪುರ, ಜಿ.ಪಂ.ಸದಸ್ಯ ವಿ.ಬಳ್ಳಾರಿ ಮತ್ತಿತರರು ಹಾಜರಿದ್ದರು. ಡಾ.ಟಿ.ಎಂ.ಭಾಸ್ಕರ್ ಸ್ವಾಗತಿಸಿದರು. ಡಾ.ಮುದೇನೂರ ನಿಂಗಪ್ಪ ನಿರೂಪಿಸಿದರು. ಪ್ರೊ. ಲಿಂಗ ರಾಜ ಪಾಟೀಲ ವಂದಿಸಿದರು.ಜನಜಾಗೃತಿ ಕಾರ್ಯಕ್ರಮ

ಹಾವೇರಿ:
ಜಿಲ್ಲಾ ವಾರ್ತಾ ಕಚೇರಿಯ  ಕ್ಷೇತ್ರ ಪ್ರಚಾರ ಘಟಕದ ವತಿಯಿಂದ ಹಾನಗಲ್ ತಾಲ್ಲೂಕಿನ ಆಯ್ದ 20 ಗ್ರಾಮಗಳಲ್ಲಿ ಸೋಮವಾರದಿಂದ ಆರಂಭಗೊಂಡ ಸರ್ಕಾರದ ವಿವಿಧ ಯೋಜನೆಗಳ ಕುರಿತು ಜನ ಜಾಗೃತಿ ಗಾಗಿ ಪ್ರಚಾರ ಕಾರ್ಯಕ್ರಮಗಳು ಅ.14ರ ವರೆಗೆ ನಡೆಯಲಿದೆ.ಈ ಕಾರ್ಯದಲ್ಲಿ ವಾರ್ತಾ ಇಲಾಖೆ ಸಂಚಾರಿ ವಸ್ತು ಪ್ರದರ್ಶನ ವಾಹನ ದಿಂದ ವಸ್ತು ಪ್ರದರ್ಶನ, ವಿಡಿಯೋ ಚಿತ್ರ ಪ್ರದರ್ಶನ, ವಿವಿಧ ಕಲಾವಿದರ ತಂಡಗಳಿಂದ ಬೀದಿ ನಾಟಕ ಹಾಗೂ ಜಾನಪದ ಕಾರ್ಯಕ್ರಮ ನಡೆಯಲಿದೆ.ಸೋಮವಾರದಿಂದ ಸೆ. 30ರವರೆಗೆ ಹಾನಗಲ್ ತಾಲ್ಲೂಕಿನ 10 ಗ್ರಾಮ ಗಳಾದ ದಶರಥಕೊಪ್ಪ, ಗುಡಗುಡಿ, ಹರಳಿಕೊಪ್ಪ, ಸಾವಿಕೇರಿ, ಸಾಗರವಳ್ಳಿ, ಲಕ್ಷ್ಮೀಪುರ, ಗಿರಿಶಿನಕೊಪ್ಪ, ಗೆಜ್ಜಿಹಳ್ಳಿ, ಕೋಡಿಯಲ್ಲಾಪೂರ, ಶೀಗಿಹಳ್ಳಿಯಲ್ಲಿ ಶಿಗ್ಗಾವಿ ತಾಲ್ಲೂಕಿನ ಮುಗಳಿ ಗ್ರಾಮದ ಕಲಾವಿದ ಗೂರಪ್ಪ ಹುಬ್ಬಳ್ಳಿ ಅವರಿಂದ ಸಂಗೀತ ಜರುಗಲಿದೆ.ಅ. 10ರಿಂದ 14ರವರೆಗೆ ಹಾನಗಲ್ ತಾಲ್ಲೂಕಿನ 10 ಗ್ರಾಮಗಳಾದ ಹೊಂಕಣ, ಶಿರಗೋಡ, ಸಮ್ಮಸಗಿ, ಹೀರೂರು, ಮಂತಗಿ, ಕೊಪ್ಪರಸಿ ಕೊಪ್ಪ, ಅರಳೇಶ್ವರ, ಸುರಳೇಶ್ವರ, ಆಡೂರು ಹಾಗೂ ಶೀಗಿಹಳ್ಳಿ- ಸಿಂಗಾಪೂರ ಪ್ಲಾಟ್ ಗ್ರಾಮಗಳಲ್ಲಿ, ಯಕಲಾಸಪೂರ ಗ್ರಾಮದ ಜನನಿ ಜನಪದ ಕಲಾ ವೇದಿಕೆಯ ಪರಶು ರಾಮ ಬಣಕಾರ ಅವರಿಂದ ಬೀದಿ ನಾಟಕ ಪ್ರದರ್ಶನಗೊಳ್ಳಲಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.