ಮಂಗಳವಾರ, ಏಪ್ರಿಲ್ 20, 2021
25 °C

ವಿ.ವಿ ರೋಗಕ್ಕೆ ಶೀಘ್ರ ಮದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು, ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎನ್.ಪ್ರಭುದೇವ್, ಕುಲಸಚಿವ ಪ್ರೊ.ಬಿ.ಸಿ. ಮೈಲಾರಪ್ಪ ಅವರಿಗೆ ತಾಕೀತು ಮಾಡಲಾಗುವುದು ಎಂದು ಕಾನೂನು ಸಚಿವ ಎಸ್.ಸುರೇಶ್‌ಕುಮಾರ್ ಬುಧವಾರ ವಿಧಾನಸಭೆಯಲ್ಲಿ ತಿಳಿಸಿದರು.ಕಾಂಗ್ರೆಸ್‌ನ ಎನ್.ಸಂಪಂಗಿ ಪ್ರಶ್ನೆಗೆ ಉತ್ತರಿಸಿದ ಸಚಿವರು, `ಕುಲಪತಿ, ಕುಲಸಚಿವರು  ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಲಾಕರ್‌ನಲ್ಲಿ ಹಾಕಿ ಇಡಲಿ, ಆ ಸ್ಥಾನಗಳನ್ನು ತ್ಯಜಿಸಿದ ನಂತರ ತೆಗೆಯಲಿ~ ಎಂದು ವ್ಯಂಗ್ಯವಾಡಿದರು.ವಿ.ವಿ.ಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಯಾರಿಗೂ ಶೋಭೆ ತರುವುದಿಲ್ಲ. ಅವರಿಬ್ಬರನ್ನು ಕರೆಸಿ ತಾಕೀತು ಮಾಡುವ ಮೂಲಕ ವಿಶ್ವವಿದ್ಯಾಲಯವನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಗಂಡ-ಹೆಂಡತಿ ಜಗಳದಲ್ಲಿ ಕೂಸು (ವಿದ್ಯಾರ್ಥಿಗಳು) ಬಡವಾಗಲು ಬಿಡುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು. ಕುಲಪತಿ, ಕುಲಸಚಿವರಿಗೆ ಹೆಚ್ಚಿನ ಜವಾಬ್ದಾರಿ ಇದೆ. ರಾಜ್ಯಪಾಲರೂ ಅವರಿಗೆ ಕಿವಿಮಾತು ಹೇಳಿದ್ದಾರೆ. ಜ್ಞಾನಭಾರತಿ ಆವರಣದ ರಸ್ತೆಗಳಂತೆ ವಿ.ವಿ ಕಾರ್ಯವೈಖರಿ ಇದೆ. ರಸ್ತೆಗಳನ್ನು ರಿಪೇರಿ ಮಾಡುತ್ತಿದ್ದೇವೆ. ಬಳಿಕ ಕುಲಪತಿ, ಕುಲಸಚಿವರನ್ನು ರಿಪೇರಿ ಮಾಡಲಾಗುವುದು ಎಂದರು.ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ಮಾತನಾಡಿ, ವಿಶ್ವವಿದ್ಯಾಲಯವನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಇಳಿಸಿದ್ದಾರೆ. ಅಲ್ಲಿನ ಅವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಲು ಸದನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.

ಜಾತಿ ಆಧಾರದ ಮೇಲೆ ಕುಲಪತಿಗಳನ್ನು ನೇಮಕ ಮಾಡುವುದೇ ಇಷ್ಟೆಲ್ಲ ಅವಾಂತರಗಳಿಗೆ ಕಾರಣ. ವಿಧಾನ ಸಭಾ ಚುನಾವಣೆಯಲ್ಲಿ ಸೋತಿರುವ ಮೈಲಾರಪ್ಪ ಅವರನ್ನು ಕುಲಸಚಿವರನ್ನಾಗಿ ಮಾಡಿರುವುದು ಸರಿಯಲ್ಲ. ಸೋತವರನ್ನು ಉನ್ನತ ಸ್ಥಾನಕ್ಕೆ ನೇಮಕ ಮಾಡಿದ್ದರಿಂದ ಅಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಎ.ಮಂಜು ದೂರಿದರು.

ಜಾತಿ ಆಧಾರದ ಮೇಲೆ ಕುಲಪತಿಗಳ ನೇಮಕ ಆಗಿಲ್ಲ. ಶೋಧನಾ ಸಮಿತಿ ಶಿಫಾರಸು ಪ್ರಕಾರ ನೇಮಕವಾಗುತ್ತದೆ. ಸರ್ಕಾರದ ಇತಿಮಿತಿಗೆ ಅನುಗುಣವಾಗಿ ವಿಶ್ವವಿದ್ಯಾಲಯವನ್ನು ಸರಿದಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಭರವಸೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.