ಭಾನುವಾರ, ಜನವರಿ 26, 2020
18 °C

ವಿ.ವಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ಎಲ್ಲಾ ಶೈಕ್ಷಣಿಕ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕೆಂದು ಒತ್ತಾಯಿಸಿ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರತಿಭಟನೆ ನಡೆಸಿದರು.ವಿಶೇಷ ಸಿಂಡಿಕೆಟ್ ಸಭೆ ನಡೆಯುತ್ತಿದ್ದ ವೇಳೆ ಸಂಭಾಂಗಣ ಪ್ರವೇಶಿಸಿದ ಪ್ರತಿಭಟನಾಕಾರರು ಅಂಕಪಟ್ಟಿ ಹಾಗೂ ಮೌಲ್ಯಮಾಪನಗಳಲ್ಲಾಗಿರುವ ದೋಷಗಳಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಅಲ್ಲದೇ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ರಸ್ತೆ, ಕುಡಿಯುವ ನೀರು, ಶೌಚಾಲಯ ಕೊಠಡಿಗಳು ಸಂಪೂರ್ಣವಾಗಿ ಹಾಳಾಗಿದ್ದು ಈ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ನಗರ ಕಾರ್ಯದರ್ಶಿ ಪ್ರೇಮ್ ಮಾತನಾಡಿ `ಪದವಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಎರಡು ವರ್ಷವಾದರು ಪ್ರಮಾಣ ಪತ್ರ ಸಿಗದಿರುವುದು ಖಂಡನೀಯ. ಅರ್ಜಿಸಲ್ಲಿಸಿದ ವಾರದೊಳಗೆ ಪ್ರಮಾಣ ಪತ್ರ ಸಲ್ಲಿಸುವ ವ್ಯವಸ್ಥೆ ಮಾಡಬೇಕು, ವಿವಿಯಲ್ಲಿ ಈಗಿರುವ ಕುಂದುಕೊರತೆ ವಿಭಾಗವನ್ನು ಉನ್ನತಗೊಳಿಸಬೇಕು ಹಾಗೂ ವಿದ್ಯಾರ್ಥಿ ನಿಲಯಗಳ ಸಮಸ್ಯೆಗಳನ್ನು ಶೀಘ್ರವೇ  ಬಗೆಹರಿಸಬೇಕು ಎಂದು ಆಗ್ರಹಿಸಿದರು. ಬೆಂಗಳೂರು ನಗರ ಸೇರಿದಂತೆ ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರದ ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಫಲಿತಾಂಶ ಮತ್ತು ಅಂಕ ಪಟ್ಟಿ ಸಿಗದೆ ವಿದ್ಯಾರ್ಥಿಗಳು ಪರಿತಪ್ಪಿಸುತ್ತಿದ್ದಾರೆ ಈ ಬಗ್ಗೆ ಗಮನ ಹರಿಸಬೇಕು ಎಂದರು.ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಕುಲಪತಿ ಎನ್. ಪ್ರಭುದೇವ್ ಮನವಿ ಸ್ವೀಕರಿಸಿದ್ದು, ಪರೀಕ್ಷಾ ಶುಲ್ಕ ಕಟ್ಟುವ ಸಮಯವನ್ನು ಜನವರಿ 27ರವರೆಗೆ  ಮುಂದೂಡಿ  ಕುಂದುಕೊರತೆ ವಿಭಾಗವನ್ನು ತಕ್ಷಣವೇ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಒಂದು ವಾರದೊಳಗಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಬೃಹತ್ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಕ್ರಿಯಿಸಿ (+)