ವಿವೇಕಾನಂದರ ಛಾಯಾಚಿತ್ರ ಪ್ರದರ್ಶನ

ಮಂಗಳವಾರ, ಜೂಲೈ 23, 2019
27 °C

ವಿವೇಕಾನಂದರ ಛಾಯಾಚಿತ್ರ ಪ್ರದರ್ಶನ

Published:
Updated:

ಬೆಂಗಳೂರು: ಚಿಕಾಗೋದಲ್ಲಿ ನಡೆದ ವಿಶ್ವ ಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸ್ವಾಮಿ ವಿವೇಕಾನಂದರು, ಕೀರ್ತನೆ ಹಾಡುತ್ತ ಸಮಾಧಿ ಸ್ಥಿತಿಯಲ್ಲಿ ಲೀನವಾಗಿರುವ ಶ್ರೀರಾಮಕೃಷ್ಣ ಪರಮಹಂಸರು, ಅಲೆದಾಡುವ ಸನ್ಯಾಸಿ ವಿವೇಕಾನಂದರು- ಹೀಗೆ ಅಲ್ಲಿ ಅಪರೂಪದ ಛಾಯಾಚಿತ್ರಗಳ ದರ್ಶನವೇ ಮನಸ್ಸಿಗೆ ಸ್ಫೂರ್ತಿ ನೀಡುತ್ತದೆ.ಕ್ಷೇತ್ರ ಪ್ರದರ್ಶನ ಕಾರ್ಯಾಲಯ ಹಾಗೂ ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ ಜಂಟಿಯಾಗಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ಸ್ವಾಮಿ ವಿವೇಕಾನಂದರ 150 ನೇ ಜಯಂತಿಯ ಪ್ರಯುಕ್ತ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಬುಧವಾರದಿಂದ ಆಯೋಜಿಸಿದೆ.ಸ್ವಾಮಿ ವಿವೇಕಾನಂದರ ಪೂರ್ವಿಕರ ಮನೆ, ಅವರ ತಾಯಿ ಭುವನೇಶ್ವರಿ ದೇವಿ, ಅವರ ಅಜ್ಜಿ ರಘುಮಣಿ ದೇವಿ, ಸಹೋದರರ ಚಿತ್ರಗಳು, ರಾಮೇಶ್ವರದ ದೇವಸ್ಥಾನ, ಚಿಕಾಗೋದಲ್ಲಿ ನಡೆದ ವಿಶ್ವದ ಧಾರ್ಮಿಕ ಸಮ್ಮೇಳನದ ವೇದಿಕೆಯಲ್ಲಿ ವಿವೇಕಾನಂದರು ಕುಳಿತಿರುವ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಸ್ವಾಮಿ ವಿವೇಕಾನಂದರು 1901 ರಲ್ಲಿ ಶಿಲ್ಲಾಂಗ್‌ನಲ್ಲಿ ಅಸ್ವಸ್ಥರಾಗಿದ್ದ ಚಿತ್ರ, ಬೇಲೂರು ಮಠದಲ್ಲಿನ ಅವರ ಕೋಣೆ, ಬೇಲೂರು ಮಠದಲ್ಲಿ ಅವರ ಮಂದಿರ ಹೀಗೆ ಅಪರೂಪದ ಒಟ್ಟು 74 ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.ಪ್ರದರ್ಶನವನ್ನು ಉದ್ಘಾಟಿಸಿದ ನೆಹರು ಯುವ ಕೇಂದ್ರ ಸಂಘಟನೆಯ ವಿಭಾಗೀಯ ನಿರ್ದೇಶಕ ಆರ್. ನಟರಾಜನ್ ಅವರು, `ಸ್ವಾಮಿ ವಿವೇಕಾನಂದರು ಯುವಜನತೆಗೆ ಎಂದಿಗೂ ಸ್ಫೂರ್ತಿಯಾಗುತ್ತಾರೆ. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ' ಎಂದರು.`ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಂಡು, ದೇಶವನ್ನು ಕಟ್ಟುವಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು' ಎಂದು ಹೇಳಿದರು. ಕಾರ್ಯಕ್ರಮದಲ್ಲಿ  ಕ್ಷೇತ್ರ ಪ್ರದರ್ಶನ ಕಾರ್ಯಾಲಯದ ನಿರ್ದೇಶಕಿ ನತಾಶಾ ಡಿಸೋಜಾ ಇತರರು ಚಿತ್ರದಲ್ಲಿದ್ದಾರೆ. ಪ್ರದರ್ಶನವು ಜುಲೈ 21 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry