ವಿವೇಕಾನಂದರ ನೆನಪಿಗಾಗಿ ‘ಭಾರತಕ್ಕಾಗಿ ಓಟ’

7

ವಿವೇಕಾನಂದರ ನೆನಪಿಗಾಗಿ ‘ಭಾರತಕ್ಕಾಗಿ ಓಟ’

Published:
Updated:

ಚಿಕ್ಕಬಳ್ಳಾಪುರ: ಸ್ವಾಮಿ ವಿವೇಕಾ­ನಂದರು ಚಿಕಾಗೋದಲ್ಲಿ ಸೆಪ್ಟೆಂಬರ್‌ 11ರಂದು ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರ ಹಿನ್ನೆಲೆ­ಯಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮಶತಾಬ್ದಿ ಸಮಿತಿ ಸಹ­ಯೋಗದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಬುಧವಾರ ನಗರ­ದಲ್ಲಿ ‘ಭಾರತಕ್ಕಾಗಿ ಓಟ’ ಕಾರ್ಯಕ್ರಮ ಆಯೋಜಿಸಿತ್ತು.ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮತ್ತು ಇತರ ಸಂಘಟನೆಗಳ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಓಡುವ ಮೂಲಕ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದರು. ಸರ್ಕಾರಿ ಜೂನಿಯರ್‌ ಕಾಲೇಜು ಆವರಣದಿಂದ ಆರಂಭ­ಗೊಂಡ ಓಟವು ಬಜಾರ್‌ ರಸ್ತೆ , ಗಂಗಮ್ಮಗುಡಿ ರಸ್ತೆ, ಎಂ.ಜಿ.ರಸ್ತೆ, ಬಿ.ಬಿ.ರಸ್ತೆ, ಮೂಲಕ ಪುನಃ ಕಾಲೇಜು ತಲುಪಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿವೈಎಸ್ಪಿ ಎ.ಬಿ.ದೇವಯ್ಯ ಮಾತನಾಡಿ, ಸ್ವಾಮಿ ವಿವೇಕಾನಂದರು ಅಲ್ಪಾವಧಿ­ಯಲ್ಲೆ ಸಮಾಜಕ್ಕೆ ಹಲವು ಕೊಡುಗೆ ಸಲ್ಲಿಸಿದರು. ಯುವಜನರ ಮನೋ­ಭಾವ ಬದಲಾಯಿಸಲು ಪ್ರಯತ್ನಪಟ್ಟ ಅವರು, ಸಾಮಾಜಿಕ ಪರಿವರ್ತನೆಗೆ ಆದ್ಯತೆ ನೀಡಿದರು. ತಮ್ಮ ಕನಸುಗಳನ್ನು ಯುವಜನರ ಮೂಲಕ ನನಸಾಗಿಸಲು ಬಯಸಿದ್ದರು ಎಂದರು.ಸ್ವಾಮಿ ವಿವೇಕಾನಂದರು ದೈಹಿಕ­ವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಮಾನ­ಸಿಕ ಮತ್ತು ಬೌದ್ಧಿಕವಾಗಿ ಇದ್ದಾರೆ. ಕಿರಿಯ ವಯಸ್ಸಿನಲ್ಲೇ ಉತ್ತಮ ಸಾಧನೆ ಮಾಡಿದ ಅವರನ್ನು ಯುವಜನರು ಆದರ್ಶವಾಗಿಸಿಕೊಳ್ಳಬೇಕು. ಅವರು ಸಾರಿದ ತತ್ವ–ಸಿದ್ಧಾಂತ ಮತ್ತು ವಿಚಾರಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಆತ್ಮವಿಶ್ವಾಸ ಮತ್ತು ಮನೋಬಲದಿಂದ ಎಲ್ಲವೂ ಸಾಧ್ಯ ಎಂಬುದನ್ನು ಮನಗಾಣಬೇಕು ಎಂದು ಅವರು ತಿಳಿಸಿದರು.ಸ್ವಾಮಿ ವಿವೇಕಾನಂದರ 150ನೇ ಜನ್ಮಶತಾಬ್ದಿ ಸಮಿತಿ ಪ್ರತಿನಿಧಿ ವರದ­ರಾಜ್‌ ಮಾತನಾಡಿ, ಸ್ವಾಮಿ ವಿವೇಕಾ­ನಂದರ 150ನೇ ಜನ್ಮಶತಾಬ್ದಿಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಯುವ­ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗ­ವಹಿಸುತ್ತಿದ್ದಾರೆ.ಭಾರತಕ್ಕಾಗಿ ಓಟ ಕಾರ್ಯಕ್ರಮವನ್ನು ಇಡೀ ದೇಶದಲ್ಲಿ ಆಯೋಜಿಸಲಾಗಿದ್ದು, ಭಾರಿ ಸಂಖ್ಯೆ­ಯಲ್ಲಿ ಯುವಜನರು ಭಾಗವಹಿಸಿದ್ದಾರೆ ಎಂದರು.ಎಬಿವಿಪಿ ಸಂಘಟನೆ ಮುಖಂಡ­ರಾದ ಶಿವಕುಮಾರ್‌, ಕಿರಣ್‌, ಮಂಜುನಾಥ್‌ರೆಡ್ಡಿ ಮತ್ತಿತ­ರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry