ಶನಿವಾರ, ಡಿಸೆಂಬರ್ 14, 2019
20 °C

ವಿವೇಕಾನಂದರ ನೆನಪಿನ ಬೆಳಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿವೇಕಾನಂದರ ನೆನಪಿನ ಬೆಳಕು

ಸ್ವಾಮಿ ವಿವೇಕಾನಂದರ 150ನೇ ಜನ್ಮದಿನವನ್ನು ಕಳೆದ ವರ್ಷದಿಂದಲೂ ಹಲವು ನಿರಂತರ ಕಾರ್ಯಕ್ರಮಗಳ ಮೂಲಕ ಭಾರತದಾದ್ಯಂತ ಆಚರಿಸಲಾಗುತ್ತಿದೆ. ವಿವಿಧ ಕಾರ್ಯಕ್ರಮಗಳು ರಾಜ್ಯ-ಕೇಂದ್ರ ಸರ್ಕಾರಗಳ ವತಿಯಿಂದ ನಡೆಯುತ್ತಿವೆ. ಈ ಆಚರಣೆ 2013ರ ಜನವರಿ 12ರವರೆಗೂ ನಡೆಯಲಿದೆ.ಮಂಗಳೂರಿನಲ್ಲಿ ಇತ್ತೀಚೆಗೆ ಮುಕ್ತಾಯವಾದ `ರಾಷ್ಟ್ರೀಯ ಯುವಜನೋತ್ಸವ~ದಲ್ಲಿ ದೇಶದ ಯುವಶಕ್ತಿಯ ಅನಾವರಣಗೊಂಡಿತ್ತು. ಈ ಎಲ್ಲ ಕಾರ್ಯಕ್ರಮ, ಯುವಪ್ರತಿಭೆಯ ಅನಾವರಣ- ಇವೆಲ್ಲವೂ ಅಭೂತಪೂರ್ವ ವ್ಯಕ್ತಿತ್ವದ ಸ್ವಾಮೀಜಿ- ತತ್ವಜ್ಞಾನಿ- ರಾಷ್ಟ್ರೀಯವಾದಿ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಂದೇಶದ ಸ್ಮರಣಾರ್ಥವಾಗಿ ನಡೆಯುತ್ತಿವೆ.ಇದು ಇಡೀ ರಾಷ್ಟ್ರ ಸ್ವಾಮಿ ವಿವೇಕಾನಂದರನ್ನು ಕಂಡಿರುವ ರೀತಿಯನ್ನು ಪ್ರತಿಬಿಂಬಿಸುತ್ತದೆ. ಆದರೆ, ಹೀಗೆ ನಡೆಯುವ ಕಾರ್ಯಕ್ರಮಗಳಲ್ಲಿ ಹೆಚ್ಚಿನವು ಸ್ವಾಮಿ ವಿವೇಕಾನಂದರ ಹೆಸರನ್ನು ಕೇವಲ ಪ್ರತೀಕವಾಗಿ ಬಳಸಿಕೊಳ್ಳುವ ಅಪಾಯ ಸೃಷ್ಟಿಸುವಂತಿರುವುದನ್ನೂ ಗಮನಿಸಬೇಕು. ಅವುಗಳು ಹುಟ್ಟಿಸುವ ಗದ್ದಲದ ನಡುವೆ ವಿವೇಕಾನಂದರ ಸಂದೇಶಗಳು ಕಳೆದುಹೋಗುವ ಭೀತಿಯೂ ಎದುರಾಗಿದೆ.ವಿವೇಕಾನಂದರು ಬದುಕಿದ್ದು ಕೇವಲ 39 ವರ್ಷ (1863-1092). ಆದರೆ ಅದರಾಚೆಗೆ ಅವರಿಂದ ಮತ್ತು ಅವರ ಬೋಧನೆಗಳಿಂದ ಇಡೀ ದೇಶ ತೀವ್ರ ಪ್ರಭಾವಿತಗೊಂಡಿದೆ. ಅವರ ರಾಷ್ಟ್ರೀಯತಾವಾದ ಮತ್ತು ಸೇವಾ ತತ್ಪರತೆಯಿಂದ ಪ್ರಭಾವಿತಗೊಂಡ ಅಸಂಖ್ಯ ಜನರು ಮತ್ತು ಸಂಸ್ಥೆಗಳು ರಾಷ್ಟ್ರೀಯ ಮರುನಿರ್ಮಾಣದ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

 

1984ರಲ್ಲಿ ಭಾರತ ಸರ್ಕಾರ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು `ರಾಷ್ಟ್ರೀಯ ಯುವಕರ ದಿನ~ವನ್ನಾಗಿ ಘೋಷಿಸಿದ ಬಳಿಕ, 1985ರಿಂದ ನಿರಂತರವಾಗಿ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. `ಸ್ವಾಮೀಜಿ ಅವರ ಜೀವನದ ತತ್ವ, ಚಿಂತನೆ ಮತ್ತು ಆದರ್ಶಗಳು ಭಾರತೀಯ ಯುವಜನತೆಯನ್ನು ಪ್ರೇರೇಪಿಸುವ ಬಹುದೊಡ್ಡ ಸಂಪನ್ಮೂಲವಾಗಬಹುದು~ ಎಂದು ಸರ್ಕಾರ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ವಿವೇಕಾನಂದರ ಕುರಿತು ಯೋಚಿಸಿದಾಗ ಮೊದಲು ನನ್ನ ಸ್ಮರಣೆಗೆ ಬರುವುದು ಅವರೊಬ್ಬ ಸಹಾನುಭೂತಿಯುಳ್ಳ, ಬಡವರ ಬಗ್ಗೆ ಕಾಳಜಿಯುಳ್ಳ ಅಸಾಮಾನ್ಯ ಮಾನವೀಯ ವ್ಯಕ್ತಿಯೆಂಬುದು. ಬಡವರು ಮತ್ತು ಅಮುಖ್ಯರೆನಿಸಿಕೊಂಡ ಭಾರತೀಯರನ್ನೇ ತನ್ನ ದೇವರು ಎಂದು ಪರಿಗಣಿಸಿದ್ದ ಅವರು, ಅವರ ಉದ್ಧಾರಕ್ಕಾಗಿ ಯಾವ ರೀತಿ ಸಹಾಯ ಮಾಡಬಹುದು ಎಂಬ ಬಗ್ಗೆ ಚಿಂತಿಸುತ್ತಾ ನಿದ್ರಾರಹಿತ ರಾತ್ರಿಗಳನ್ನು ಕಳೆದಿದ್ದರು. `ಮನುಕುಲದ ಸೇವೆಗಾಗಿ ಮತ್ತೆ ಮತ್ತೆ ಜನಿಸಲು ಬಯಸುತ್ತೇನೆ~ ಎಂದವರು ಘೋಷಿಸಿದ್ದರು.ಅವರೊಬ್ಬ ಭಾವೋದ್ರಿಕ್ತ ರಾಷ್ಟ್ರೀಯವಾದಿ. ಆ ಕಾಲದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಅವರ ಕಾರ್ಯ ಮತ್ತು ಬರವಣಿಗೆಯ ಪ್ರಭಾವಕ್ಕೊಳಗಾಗಿದ್ದರು. ಸುಭಾಷ್‌ಚಂದ್ರ ಬೋಸ್, ಮಹಾತ್ಮಾ ಗಾಂಧಿ ಅಥವಾ ರಾಜಗೋಪಾಲಾಚಾರಿ ಮುಂತಾದವರು ವಿವೇಕಾನಂದರಲ್ಲಿ ಎಲ್ಲದ್ದಕ್ಕಿಂತ ಮಿಗಿಲಾಗಿ ದೇಶವನ್ನು ಪ್ರೀತಿಸುವ ಮಹಾನ್ ರಾಷ್ಟ್ರಭಕ್ತನನ್ನು ಕಂಡಿದ್ದರು. ಭಾರತ ಮುಂದೊಂದು ದಿನ ನೈತಿಕ ಪ್ರಭುತ್ವದ ಗದ್ದುಗೆಯನ್ನು ವಶಪಡಿಸಿಕೊಳ್ಳುವ ಮತ್ತು ವಿಶ್ವಕ್ಕೆ ಶಾಂತಿ ಸೌಹಾರ್ದದ ಬದುಕಿನ ಮಾರ್ಗವನ್ನು ತೋರಿಸುವ ವೈಭವಯುತ ತಾಯಿಯಾಗಿ ಸ್ವಾಮೀಜಿ ಅವರಿಗೆ ಕಂಡಿತ್ತು.

ಅವರೊಬ್ಬ ಅಸಾಧಾರಣ ನಾಯಕರೂ ಆಗಿದ್ದರು.ತಾವು ಸಾಗಿದ್ದಲ್ಲೆಲ್ಲಾ ತಮ್ಮ ನುಡಿ ಮತ್ತು ಬರಹದ ಮೂಲಕ ಎಲ್ಲರಲ್ಲೂ ತಮ್ಮ ಸಾಮರ್ಥ್ಯವನ್ನು ಹೊರಹಾಕಿಸುವ ಪ್ರೇರಣೆ ನೀಡಬಲ್ಲವರಾಗಿದ್ದರು. ವೈಯಕ್ತಿಕ ಹಿಂದುಳಿಯುವಿಕೆಯನ್ನು ಅವರು ಮನ್ನಿಸುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮಿಂದ ಸಾಧ್ಯವಾದುದನ್ನು ನೀಡುವಂತೆ ಪ್ರೋತ್ಸಾಹಿಸುತ್ತಾ, ಅರಮನೆಯಲ್ಲಿ ವಾಸಿಸುವ ಮಹಾರಾಜನಿಂದ ಹಿಡಿದು ರಸ್ತೆಯಲ್ಲಿ ಮಲಗುವ ಸಾಮಾನ್ಯ ಮನುಷ್ಯನವರೆಗೂ- ತನ್ನ ಸಂಪರ್ಕಕ್ಕೆ ಬಂದವರೆಲ್ಲರನ್ನೂ ಉತ್ತೇಜಿಸುತ್ತಿದ್ದರು.ಪ್ರಾಯೋಗಿಕತೆ ಮತ್ತು ವಿಶಾಲ ದೃಷ್ಟಿಕೋನ ಅವರ ನಾಯಕತ್ವ ಗುಣದ ವಿಶೇಷತೆ. ವಿಶ್ವ ಒಕ್ಕೂಟದಲ್ಲಿ ಭಾರತ ತನ್ನ ಯುಕ್ತಸ್ಥಾನವನ್ನು ಪಡೆದುಕೊಳ್ಳಬೇಕು ಎನ್ನುವುದು ಅವರ ಗುರಿಯಾಗಿತ್ತು.ಅವರು ಶ್ರೇಷ್ಠರಲ್ಲಿಯೇ ಶ್ರೇಷ್ಠ ಆಡಳಿತಗಾರ. ಸಂದರ್ಭೋಚಿತವಾಗಿ ಪ್ರಸ್ತುತವಾದ ಮತ್ತು ವ್ಯಾವಹಾರಿಕ ಆಡಳಿತ ತತ್ವಗಳ ಆಧಾರದ ಮೇಲೆ ಅತ್ಯುನ್ನತ ಮತ್ತು ವ್ಯವಸ್ಥಿತ ಸಂಸ್ಥೆಯಾದ `ರಾಮಕೃಷ್ಣ ಮಿಷನ್~ ಅನ್ನು ಅವರು ಸ್ಥಾಪಿಸಿದರು. ಅಲ್ಲಿ ಪ್ರಾರಂಭಿಸಿದ ಕಾರ್ಯಗಳು ಇಂದಿಗೂ ಪಾಲನೆಯಾಗುತ್ತಿದೆ. ಇದು ವಿವೇಕಾನಂದರು ಪ್ರಾರಂಭಿಸಿದ್ದಕ್ಕೆ ಎಂದಲ್ಲ, ಅದು ಇಂದಿನ ದಿನಗಳ ಅಗತ್ಯಗಳನ್ನೂ ಪೂರೈಸುತ್ತಿದೆ ಎಂಬ ಕಾರಣಕ್ಕೆ. ಅವರು ಯಾವುದೇ ಸಾಂಪ್ರದಾಯಿಕ ಅಧಿಕಾರವನ್ನು ಹೊಂದಿಲ್ಲ, ಹೊಂದಿರಲೂ ಇಲ್ಲ. ಆದರೆ ಇಡೀ ದೇಶ ಅವರ ಹೆಜ್ಜೆಯ ಹಿಂದಿದೆ.ಸತ್ಯಾನ್ವೇಷಣೆಯ ದೃಢ ಸಂಕಲ್ಪ ಅವರ ಮತ್ತೊಂದು ಅಸಾಮಾನ್ಯ ಗುಣ. ಅವರು ಎಂದಿಗೂ ಅರ್ಧ ಸತ್ಯ ಮತ್ತು ಸತ್ಯಕ್ಕೆ ಸಂಬಂಧಿಸಿದ ಸಂಗತಿಗಳನ್ನು ನಂಬಿದವರಲ್ಲ. ನೇರ ಅನುಭವದಾಚೆಗೆ ಜನ್ಮತಳೆದಾಗ ಮಾತ್ರ ಸತ್ಯ ಅರ್ಥಪಡೆದುಕೊಳ್ಳುವುದು ಎಂಬುದು ಅವರ ನಿಲುವು. ಅವರು ನಿರಂತರ ಪ್ರಯೋಗಶೀಲರೂ ಆಗಿದ್ದರು.

 

ತಮ್ಮ ಜೀವನುದ್ದಕ್ಕೂ ಪ್ರಯೋಗಗಳನ್ನು ಮಾಡಿದ್ದು ಮಾತ್ರವಲ್ಲ, ತಮ್ಮ ಸುತ್ತಲು ಇದ್ದವರನ್ನೂ ಹಾಗೇ ಮಾಡುವಂತೆ ಪ್ರಭಾವಿಸಿದ್ದರು. ತಮ್ಮನ್ನು ಯಾರೂ ಕುರುಡಾಗಿ ಅನುಸರಿಸದಂತೆ ಒತ್ತಾಯಿಸುತ್ತಿದ್ದರು. ಅಂದರೆ, ಅವರು ಹೇಳಿದ್ದು ಮತ್ತು ಪ್ರತಿಪಾದಿಸಿದ್ದನ್ನು ಪರೀಕ್ಷಿಸಬಹುದಾಗಿತ್ತು.ಅವರ ತೀರ್ಮಾನದ ಸ್ಥೈರ್ಯ ಐತಿಹಾಸಿಕವಾದದ್ದು. ತಮ್ಮ ಮನೋಧರ್ಮ, ನಿಲುವುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವುದನ್ನು ತಿರಸ್ಕರಿಸುತ್ತಿದ್ದರು ಎಂಬುದಕ್ಕೆ ಅವರ ಬಾಲ್ಯಬದುಕಿನ ಕುರಿತ ದಂತಕಥೆಗಳು ಹೇಳುತ್ತವೆ. ಅವರ ಇದೇ ಗುಣಗಳು ಅವರನ್ನು ಷಿಕಾಗೊದಲ್ಲಿ ನಡೆದ ಧರ್ಮ ಸಮ್ಮೇಳನದಲ್ಲಿ ಸಾಕಷ್ಟು ಹಣ ಮತ್ತು ಆಹ್ವಾನ ಪತ್ರಿಕೆ ಇಲ್ಲದಿದ್ದರೂ ಭಾಗವಹಿಸುವಂತೆ ಮಾಡಿದ್ದು.ಅವರ ಸಮಾಜವಾದದ ವಿಚಾರ ನನ್ನಂತಹ ಕಾರ್ಯಕರ್ತನಿಗೆ ಆಕರ್ಷಣೆ. ಅವರು ಹೇಳುತ್ತಾರೆ- `ಬ್ರೆಡ್ಡಿನ ತುಣುಕಿನ ಅರ್ಧ ಭಾಗ ಏನೂ ಇಲ್ಲದಿರುವುದಕ್ಕಿಂತ ಉತ್ತಮ~ ಮತ್ತು `ನಾನು ಒಬ್ಬ ಅನಾಥನ ಬಾಯಿಗೆ ಒಂದು ತುತ್ತು ಅನ್ನ ನೀಡದ ಅಥವಾ ಒಬ್ಬ ವಿಧವೆಯ ಕಣ್ಣೀರು ಒರೆಸದ ದೇವರು ಅಥವಾ ಧರ್ಮವನ್ನು ನಂಬುವುದಿಲ್ಲ~. ಬದಲಾವಣೆಗೆ ಹಂಬಲಿಸುವ ಯುವಕರನ್ನು ಪ್ರೇರೇಪಿಸಲು ಇದೊಂದು ಮಾತು ಸಾಲದೇ?ಭಾರತೀಯ ಮಹಿಳೆಯರ ಸ್ಥಾನಮಾನ ಮೇಲೆತ್ತಲು ಮತ್ತು ಸಿರಿವಂತರನ್ನು ಕೆಳಮಟ್ಟಕ್ಕೆ ಇಳಿಸದೆ, ಬಡವನನ್ನು ಮೇಲ್ಮಟ್ಟಕ್ಕೆ ಏರಿಸುವ ಮೂಲಕ ಸಮಾನತೆಯ ರಹದಾರಿಯ ಸೃಷ್ಟಿಸುವ ನಿರಂತರ ಪ್ರಯತ್ನಗಳನ್ನು ವಿವೇಕಾನಂದರು ಮಾಡಿದರು. ಇವು ಅವರ ಸಾಮಾಜಿಕ ಪ್ರಸ್ತುತತೆ ಮತ್ತು ದೂರದೃಷ್ಟಿಗೆ ನಿದರ್ಶನ. ವೈಯಕ್ತಿಕವಾಗಿ ನನ್ನ ಚಿಂತನಾ ಪ್ರಗತಿಯಲ್ಲಿ ಮತ್ತು ಅಭ್ಯಾಸದಲ್ಲಿ ಅವರ ಈ ವ್ಯಾಖ್ಯಾನಗಳೇ ಮೂಲ ಆಧಾರ.ವೇದ, ಬೈಬಲ್ ಮತ್ತು ಕುರಾನ್‌ಗಳಿಂದ ಉಲ್ಲೇಖಗಳನ್ನು ಒಂದೇ ಉಸಿರಿನಲ್ಲಿ ಹೇಳಬಲ್ಲ ಜ್ಞಾನ ಅವರಲ್ಲಿತ್ತು. ಪುರಾತತ್ವದಿಂದ ಹಿಡಿದು ಮಾನವಶಾಸ್ತ್ರ, ವಿಜ್ಞಾನದಿಂದ ಹಿಡಿದು ಧರ್ಮ- ಹೀಗೆ ಯಾವ ವಿಷಯದ ಕುರಿತು ಬೇಕಾದರೂ ನಿರರ್ಗಳವಾಗಿ ಮಾಡನಾಡುವ ಸಾಮರ್ಥ್ಯ ಅವರಿಗಿತ್ತು. ಇಡೀ ಬ್ರಿಟಾನಿಕಾ ವಿಶ್ವಕೋಶವನ್ನು ಕೆಲವೇ ದಿನಗಳಲ್ಲಿ ಓದಿ ಮುಗಿಸಿದ್ದರೆಂಬ ಆಖ್ಯಾನಗಳಿವೆ.ವಿವೇಕಾನಂದರನ್ನು ಪ್ರತಿಬಾರಿಯೂ ಓದಿದಾಗ ಅವರನ್ನು ವೈವಿಧ್ಯಮಯ ಬೆಳಕಿನಲ್ಲಿ, ಹೊಸತನವನ್ನು ಕಾಣುತ್ತೇವೆ. ಅವರು ಹಲವರಿಗೆ ಹಲವು ರೀತಿ ಅರ್ಥವಾಗುತ್ತಾರೆ. ಅವರೆಲ್ಲ ವಿವೇಕಾನಂದರನ್ನು ವಿವಿಧ ಅನುಭವಗಳಲ್ಲಿ ವಿವರಿಸುತ್ತಾರೆ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಅವರು ನಮ್ಮ ರಾಷ್ಟ್ರದ ಅತ್ಯಂತ ಹೆಮ್ಮೆಯ ಪುತ್ರರಲ್ಲಿ ಒಬ್ಬರು.ಅವರ ಸಂದೇಶಗಳನ್ನು ನಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಭಾರತದ ಇಂದಿನ ವಾಸ್ತವಿಕ ಸನ್ನಿವೇಶದಲ್ಲಿನ ರಾಷ್ಟ್ರೀಯ ಪುನರ್‌ನಿರ್ಮಾಣ ಸಾಧಿಸಲು ಅವರ ಜೀವನ ಮತ್ತು ಸಂದೇಶಗಳ ಸಮಗ್ರ ಅಳವಡಿಕೆಯನ್ನು ನಾವು ದೃಢಪಡಿಸಬೇಕು. ಶೇಕಡಾ 75ರಷ್ಟು ಜನಸಂಖ್ಯೆ 40 ವರ್ಷಕ್ಕಿಂತ ಕಡಿಮೆ, ಶೇಕಡಾ 50ರಷ್ಟು ಜನರು 20 ವರ್ಷಕ್ಕಿಂತ ಕಡಿಮೆ ವಯಸ್ಕರಿರುವ ಈ ದೇಶದಲ್ಲಿ ಯುವ ದಿನಾಚರಣೆಯ ಮಹತ್ವವನ್ನು ಮನಗಾಣಬೇಕು.ಮಾನವ ಸಂಪನ್ಮೂಲದಿಂದಾಗಿ ಅಪಾರ ಅವಕಾಶಗಳ ಕಿಟಕಿ ತೆರೆದಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು. ಪ್ರಸ್ತುತ ವಿಶ್ವದಲ್ಲೇ ಅತ್ಯಂತ ಕನಿಷ್ಠಮಟ್ಟದಲ್ಲಿ ಪರಾವಲಂಬನೆ ಮಟ್ಟ ಹೊಂದಿದ್ದೇವೆ. ಇದರರ್ಥ ಉತ್ಪಾದನಾ ಸಾಮರ್ಥ್ಯವುಳ್ಳ ವಯಸ್ಸಿನ ಗುಂಪಿನಲ್ಲಿ ಅತ್ಯಧಿಕ ಭಾರತೀಯರನ್ನು ಹೊಂದಿದ್ದೇವೆ ಎಂದು. ಈ ಅವಕಾಶವನ್ನು ಅರಿತುಕೊಂಡು, ಬಳಸಿಕೊಂಡು ಭಾರತವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಾಯಕತ್ವದ ಅಗತ್ಯವಿದೆ.ನವಭಾರತದ ಉದಯಕ್ಕೆ ದಾರಿ ತೋರುವ ನಿಟ್ಟಿನಲ್ಲಿ ದೇಶದ ಯುವಜನತೆ ತಮ್ಮನ್ನು ಸಮರ್ಪಿಸಿಕೊಳ್ಳಲು ಸಾಧ್ಯವೇ?- ದೇಶದ ಪ್ರತಿ ಮಗುವೂ ಶಾಲೆಗೆ ಹೋಗುವಂತಾದರೆ, ಆರೋಗ್ಯ ಸೇವೆ ದೂರದ ಕನಸಾಗದಿದ್ದರೆ, ದೇಶದ ಪ್ರತಿ ಹಳ್ಳಿ ಪ್ರತಿ ಮನೆಯಲ್ಲೂ ವಿದ್ಯುದ್ದೀಪದ ಬೆಳಕು ಮತ್ತು ಶುದ್ಧ ಹರಿಯುವ ನೀರು ಬರುವಂತಾದರೆ; ಆಹಾರ ಮತ್ತು ಪೌಷ್ಠಿಕತೆ ಗಣ್ಯರ ಐಷಾರಾಮದ ಕೋಣೆಯೊಳಗಿನ ಚರ್ಚೆಯಿಂದಾಚೆ ಬಂದು ನಿಜವಾಗುವಂತಾದರೆ, ಉತ್ತಮ ಆಡಳಿತ ನಮ್ಮದಾದರೆ- ಇವೆಲ್ಲವೂ ದೇಶದ ಯುವಕ ಮತ್ತು ಯುವತಿಯರ ಕೈಗಳಿಂದ, ಅಂತರಂಗದಲ್ಲಿ ನಿಸ್ವಾರ್ಥತೆ, ತುಟಿಯಲ್ಲಿ ರಾಷ್ಟ್ರೀಯ ಅಭಿವೃದ್ಧಿಯ ಮಂತ್ರ, ತಮ್ಮ ವೈಯಕ್ತಿಕ ಆಸೆ ಮತ್ತು ಆಕಾಂಕ್ಷೆಗಳಿಗೆ ಚಿಂತಿಸದೆ ಕೆಲಸದಲ್ಲಿ ಭಾಗಿಯಾಗುವುದು, ಗುರಿಮುಟ್ಟುವವರೆಗೂ ಹಗಲು ರಾತ್ರಿ ಪರಿಶ್ರಮಿಸುವುದರಿಂದ ಮಾತ್ರ ಸಾಧ್ಯ ಎಂದು ಸ್ವಾಮೀಜಿ ಹೇಳಿದ್ದರು.ಯುವಜನತೆ ತಮ್ಮ ಬುದ್ಧಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು, ಸ್ವಾಮಿ ವಿವೇಕಾನಂದರ ಕಹಳೆಯ ಧ್ವನಿಗೆ ದನಿಯಾಗುವ ಕಾರ್ಯಕ್ಕೆ ತಮ್ಮ ಹೆಗಲು ನೀಡಬೇಕಿದೆ.

(ಲೇಖಕರು ಸ್ವಾಮಿ ವಿವೇಕಾನಂದ ಯುವ ಚಳವಳಿಯ ಸಂಸ್ಥಾಪಕರು.)

ಪ್ರತಿಕ್ರಿಯಿಸಿ (+)