ವಿವೇಚನಾ ಕೋಟಾ

7

ವಿವೇಚನಾ ಕೋಟಾ

Published:
Updated:

ರಾಜ್ಯ ಸರ್ಕಾರಕ್ಕೆ ‘ಜಿ’ ಕೆಟಗರಿ ಮೂಲಕ ನಿವೇಶನ ಮಂಜೂರು ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅದೇಶ ನೀಡುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿರುವುದರಿಂದ ಈ ವಿಶೇಷ ಕೋಟಾ ಪದ್ಧತಿಯ ದುರುಪಯೋಗ ಇನ್ನಾದರೂ ತಪ್ಪಬಹುದು. ಸಾಹಿತ್ಯ, ಸಂಸ್ಕೃತಿ, ಚಲನಚಿತ್ರ, ಸಮಾಜಸೇವೆ ಮತ್ತು ಕ್ರೀಡಾ ರಂಗದಲ್ಲಿ ಗಣನೀಯ ಸಾಧನೆ ಮಾಡಿದವರು ಹಾಗೂ ಪ್ರಶಸ್ತಿ ಪುರಸ್ಕೃತರು ಬೆಂಗಳೂರಿನಲ್ಲಿ ನಿವೇಶನ ಹೊಂದಿರದಿದ್ದರೆ ಅಂತಹವರಿಗೆ ಬಿಡಿಎ ನಿವೇಶನ ಮಂಜೂರು ಮಾಡಬೇಕೆನ್ನುವುದು ಈ ವಿಶೇಷ ಕೋಟಾದ ಆಶಯ. ಆದರೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿಗಳು ಇದು ತಮ್ಮ ವಿವೇಚನೆಯ ಅಧಿಕಾರ ಎಂದು ಭಾವಿಸಿ ನಿವೇಶನ ಮತ್ತು ಮನೆಗಳನ್ನು ಹೊಂದಿರುವ ಶಾಸಕರು, ಸಂಸದರು, ರಾಜಕಾರಣಿಗಳು ಮತ್ತು ತಮ್ಮ ಬಂಧುಗಳು, ಮನೆ ಹಾಗೂ ಕಚೇರಿಗಳ ಸಿಬ್ಬಂದಿಗಳಿಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ಮಂಜೂರು ಮಾಡಿ ಸಾರ್ವಜನಿಕ ಟೀಕೆಗೆ ಒಳಗಾಗಿರುವುದು ವಿಪರ್ಯಾಸ. ಆದರೆ ಬಿಡಿಎ ಇನ್ನಾದರೂ ಈ ವಿಶೇಷ ಅವಕಾಶ ದುರುಪಯೋಗ ಆಗದಂತೆ ಪಾರದರ್ಶಕವಾಗಿ ಬಳಕೆ ಮಾಡಬೇಕು. ಅರ್ಹರಿಗೆ ನಿವೇಶನ ದೊರೆಯುವಂತಾಗಬೇಕು.

ಇದುವರೆಗೆ ಮುಖ್ಯಮಂತ್ರಿಗಳು ಈ ಅವಕಾಶವನ್ನು ತಮ್ಮ ಪರಮಾಧಿಕಾರದ ಕೋಟಾ ಎಂದೇ ಭಾವಿಸಿ ನೀಡಿದ ನಿವೇಶನಗಳನ್ನು  ಹಲವರು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಿಕೊಳ್ಳುವ ಮೂಲಕ ಅದನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿದ್ದು ನಾಚಿಕೆಗೇಡು. ಜನಪ್ರತಿನಿಧಿಗಳು ನಾಚಿಕೆ ಬಿಟ್ಟು ಮಾಡಿಕೊಂಡು ಬರುತ್ತಿರುವ ಈ ದಂಧೆಗೆ ಹೈಕೋರ್ಟಿನ ಈಗಿನ ಈ ಕ್ರಮದಿಂದ ಕಡಿವಾಣ ಬೀಳಬಹುದೆಂದು ನಿರೀಕ್ಷೆ ಇಟ್ಟುಕೊಳ್ಳುವುದು ಕಷ್ಟವೇ.  ಅಧಿಕಾರ ದುರುಪಯೋಗದಲ್ಲಿ ಕುಖ್ಯಾತಿ ಹೊಂದಿರುವ ರಾಜಕೀಯ ಅಧಿಕಾರಸ್ಥರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಮತ್ತೊಂದು ಅಡ್ಡದಾರಿ ಹುಡುಕಿದರೆ ಅಚ್ಚರಿಯಿಲ್ಲ. ಈಗಾಗಲೇ ಕೇಂದ್ರ ಸರ್ಕಾರದಿಂದ ಸಂಸದರು, ಪೆಟ್ರೋಲ್ ಪಂಪ್, ಅಡುಗೆ ಅನಿಲ ಏಜೆನ್ಸಿ ಪಡೆಯಲು ಇದ್ದ ವಿವೇಚನಾ ಕೋಟಾವನ್ನು ದೆಹಲಿ ನ್ಯಾಯಾಲಯ ರದ್ದು ಮಾಡಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿ, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಕೂಡ ದುರುಪಯೋಗ ಆಗುತ್ತಿರುವ ಬಗೆಗೆ ವ್ಯಾಪಕವಾದ ದೂರುಗಳಿವೆ. ಈ ಹಿನ್ನೆಲೆಯಲ್ಲಿ ಬಿಹಾರ ಸರ್ಕಾರವು ಶಾಸಕರಿಗೆ ವರ್ಷಕ್ಕೆ ಇದ್ದ ಒಂದು ಕೋಟಿ ರೂಪಾಯಿ ಕ್ಷೇತ್ರಾಭಿವೃದ್ಧಿ ನಿಧಿಯನ್ನೂ ರದ್ದು ಮಾಡಿರುವ ಕ್ರಮ ಮೆಚ್ಚುವಂತಹದ್ದು. ಕೇಂದ್ರೀಯ ವಿದ್ಯಾಲಯಗಳ ಪ್ರವೇಶಾವಕಾಶದಲ್ಲಿ ಸಂಸದರಿಗೆ ಇರುವ ವಿಶೇಷ ಕೋಟಾ ವ್ಯವಸ್ಥೆಯನ್ನು ರದ್ದು ಮಾಡಲು ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ನಿರ್ಧರಿಸಿರುವುದು ಶ್ಲಾಘನೀಯ. ವಿವೇಚನಾ ಕೋಟಾ ದುರ್ಬಳಕೆಯಿಂದ ಈಗಾಗಲೇ ಕಳಂಕಿತವಾಗಿರುವ ಕರ್ನಾಟಕ ಸರ್ಕಾರ ಇಂತಹ ಒಂದು ಆದರ್ಶವನ್ನು ಇನ್ನಾದರೂ ಪಾಲಿಸಲು ಮುಂದಾಗಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry