ಬುಧವಾರ, ಮಾರ್ಚ್ 3, 2021
26 °C
ವರದಾ ನದಿಯಿಂದ ನೀರನ್ನು ಹರಿಸಲು ಸಾರ್ವಜನಿಕರ ಒತ್ತಾಯ

ವಿಶಾಲವಾದ ಕೆರೆ, ಆದ್ರ ಹನಿ ನೀರಿಲ್ಲ...

ಪ್ರಜಾವಾಣಿ ವಾರ್ತೆ / ಮಾಲತೇಶ ಹರ್ಲಾಪೂರ Updated:

ಅಕ್ಷರ ಗಾತ್ರ : | |

ವಿಶಾಲವಾದ ಕೆರೆ, ಆದ್ರ ಹನಿ ನೀರಿಲ್ಲ...

ಸವಣೂರ:  ವಿಶಾಲವಾದ ಕೆರೆ ಇದೆ, ಆದರೆ ಹನಿ ನೀರಿಲ್ಲ. ಬರಿ ಜಾಲಿ ಮುಳ್ಳುಕಂಟಿಗಳಿಂದ ಕೂಡಿದೆ ಇಲ್ಲಿನ ಕೆರೆ. ತಾಲ್ಲೂಕಿನ ಹತ್ತಿಮತ್ತೂರ ಕೆರೆಗೆ ಬೇಕಾಗಿದೆ ನೀರು. ವರದಾ ನದಿಯಿಂದ ನೀರನ್ನು ತುಂಬಿಸಿದರೆ ಜನ ಹಾಗೂ ಜಾನುವಾರುಗಳಿಗೆ ನೀರಿನ ಅನುಕೂಲ ಕಲ್ಪಿಸಬಹುದಿತ್ತು. ಆದರೆ, ಇಂಥ ಯೋಜನೆ ರೂಪಿಸುವ ಪ್ರಯತ್ನ ಯಾರೂ ಮಾಡದೇ ಇರುವುದರಿಂದ ಕೆರೆಯಲ್ಲಿ ಮುಳ್ಳು ಕಂಟಿಗಳು ಬೆಳೆದು ನಿಂತಿವೆ.ಹತ್ತಿಮತ್ತೂರ ಕೆರೆ 301 ಎಕರೆಯಲ್ಲಿ ವ್ಯಾಪಿಸಿರುವ ವಿಶಾಲವಾದ ಅತಿ ದೊಡ್ಡದಾದ ಕೆರೆ ಎಂದು ಗುರುತಿಸಿಕೊಂಡಿದೆ. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಹನಿ ನೀರೂ ಇಲ್ಲದೆ ಖಾಲಿಯಾಗಿದೆ.ಹತ್ತಿಮತ್ತೂರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಗೆ, ಜಾನುವಾರುಗಳಿಗೆ ಈ ಕೆರೆ ಅನುಕೂಲ  ಕಲ್ಪಿಸಿತ್ತು. ಇಲ್ಲಿಗೆ ಗ್ರಾಮದ ಜಾನುವಾರುಗಳು ಬರುತ್ತಿ ದ್ದವು ಕುರಿಗಾರರು ತಮ್ಮ ಕುರಿಗಳಿಗೆ ನೀರು ಕುಡಿಸಲು ಬರುತ್ತಿದ್ದರು. ಹಲವು ಪಕ್ಷಿಗಳೂ ಈ ಕೆರೆ ಆಶ್ರಯಿಸಿದ್ದುವು. ಅವೆಲ್ಲವುಗಳಿಗೆ ಈ ಬಾರಿ ನೀರಿನ ತತ್ವಾರ ಉಂಟಾಗಿದೆ ಎಂದು ತಿರಕಪ್ಪ ತಾಯಮ್ಮನವರ ಹೇಳುತ್ತಾರೆ.ಈ ಕೆರೆಯಲ್ಲಿ ನೀರು ಇರು ವುದರಿಂದ  ಸುತ್ತಮುತ್ತಲಿನ ರೈತರ ಕೊಳವೆಬಾವಿಯಲ್ಲಿ ಅಂತರಜಲಮಟ್ಟ ಹೆಚ್ಚಾಗಿ ರೈತರು  ಸುಮಾರು 200 ಹೆಕ್ಟೇರ್ ಕ್ಷೇತ್ರದಲ್ಲಿ  ನೀರಾವರಿ ಬೆಳೆ ಬೆಳೆಯುತ್ತಿದ್ದರು. ಈ ಕೆರೆ  ಸುತ್ತಮುತ್ತ ಎಲೆಬಳ್ಳಿ ತೋಟಗಳೊಂದಿಗೆ ಹಸಿರು ಗದ್ದೆಗಳಾಗಿ ತುಂಬಿತ್ತು.1992ರಲ್ಲಿ ಮಾತ್ರ  ಕೆರೆ ತುಂಬಿ ಕೋಡಿಬಿದ್ದು ಹರದಿತ್ತು ಎಂದು ಅವರು ಸ್ಮರಿಸುತ್ತಾರೆ.ಹತ್ತಿಮತ್ತೂರ ಕೆರೆ ಅತಿ ದೊಡ್ಡಕೆರೆ. ನಾವು ಸಣ್ಣವರಿದ್ದಾಗ ಕೆರೆ ಖಾಲಿ  ಇರುವುದನ್ನು ನೋಡಿಲ್ಲ, ಇತ್ತೀಚೆಗೆ ಬರ ಕಾಣಿಸಿಕೊಂಡಿದ್ದರಿಂದ ಮಳೆಗಾಲ ದಲ್ಲಿಯೂ ಕೆರೆ ಭರ್ತಿಯಾಗಿಲ್ಲ.  ವರದಾ ನದಿಯಿಂದ ಸತತವಾಗಿ ನಮ್ಮ ಗ್ರಾಮದ ಹೊಂಡಕ್ಕೆ ಮತ್ತು  ಕೆರೆಗೆ ನೀರು ತುಂಬಿಸಿದರೆ ಬರಗಾಲದಲ್ಲಿರುವ ನೀರಿನ ಬವಣೆ ನೀಗಲು ಸಾಧ್ಯವಾಗುತ್ತದೆ.ಅಂತರ್ಜಲ ಹೆಚ್ಚಿ ನೀರಿನ ಕೊಳವೆಗೂ ನೀರು ಲಭ್ಯವಾಗುತ್ತದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಮತ್ತಷ್ಟು ಬರ ಎದುರಿಸಬೇಕಿದೆ. ಈ ಕೆರೆಯಲ್ಲಿ ನೀರು ಇಲ್ಲದಿರುವುದರಿಂದ ಕೆರೆಯ ಸುತ್ತಮುತ್ತಲಿನ ಭಾಗದಲ್ಲಿ ಅಂತರ್ಜಲ ಕಡಿಮೆಯಾಗಿ ರೈತರ ಕೊಳವೆಬಾವಿಗಳಿಗೆ ನೀರಿಲ್ಲದಂತಾಗಿದೆ ಎಂದು ಹೇಳಿದರು.ಕಳೆದ ವರ್ಷ  ಕೆರೆ ಖಾಲಿ ಇದ್ದು ಹೂಳುತೆಗೆಯಲು ಪ್ರಶಸ್ತ ಸಮಯವಾಗಿತ್ತು ಆದರೆ ಯಾರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಹೀಗಾಗಿ ಕೆರೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಕಳೆದ ವರ್ಷ ಕೆರೆಯಲ್ಲಿ ಹೊಳು ತೆಗೆಯುವುದಕ್ಕಾಗಿ   ₹ 1ಕೋಟಿ  ಹಣ ಖರ್ಚು ಮಾಡಿದ್ದಾರೆ, ಆದರೆ,  ನೀರಿನ ಸಂಗ್ರಹಣೆಗೆ ಮುಂದಾಗಬೇಕಾಗಿದೆ.ಹತ್ತಿಮತ್ತೂರ ವಿಶಾಲವಾದ ಕೆರೆಗೆ ವರದಾ ನದಿಯಿಂದ ನೀರು ತುಂಬಿಸಿದರೆ ಈ ಭಾಗದ ಸಾವಿರಾರು ಎಕರೆ ಕೃಷಿ, ತೋಟಗಾರಿಕೆಗೆ ಅನುಕೂಲವಾಗಲಿದೆ ಎಂದು ಕೃಷಿಕ ಸಮಾಜದ  ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಕರಿಗಾರ ಹೇಳುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.