ವಿಶಾಲ ತೀರ ಎಷ್ಟು ದೂರ

7

ವಿಶಾಲ ತೀರ ಎಷ್ಟು ದೂರ

Published:
Updated:

ಕೋವಳಂ ಬೀಚ್

ಪ್ರಕೃತಿಯನ್ನು ತನ್ನಲ್ಲೇ ಹುದುಗಿಸಿಟ್ಟುಕೊಂಡಿರುವ ಕೇರಳವನ್ನು ಹಸಿರು ನಾಡೆಂದೇ ಕರೆಯಬಹುದು. ಈ ಹಸಿರು ನಾಡಿನ ಸೌಂದರ್ಯಕ್ಕೆ ಕೋವಳಂ ಬೀಚ್ ಇನ್ನಷ್ಟು ರಂಗು ತುಂಬಿದೆ.ದಕ್ಷಿಣ ಭಾರತದ ಕಡಲ ತೀರಗಳಲ್ಲಿ ಕೋವಳಂಗೆ ಹೆಚ್ಚು ಪ್ರಾಮುಖ್ಯ. ತಿರುವನಂತಪುರಂನಿಂದ 10 ಕಿ.ಮೀ ದೂರದಲ್ಲಿ ಈ ಕೋವಳಂ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ಹೊಂದಿದೆಯಂತೆ.ವಿಶಾಲವಾದ ಮರಳು ಪ್ರದೇಶ, ಉಳಿದ ಕಡಲ ನೀರಿಗಿಂತ ತಿಳಿಯಾಗಿರುವ ನೀರು ಕೋವಳಂನ ವಿಶೇಷತೆ. ಭಾರತದ ಅತಿ ಆಕರ್ಷಕ ಸ್ಥಳಗಳಲ್ಲಿ ಒಂದೆಂದು ತನ್ನ ಛಾಪು ಮೂಡಿಸಿರುವ ಈ ಕೋವಳಂ ಜತೆ ಈವ್ಸ್ ಬೀಚ್, ಹವಾ ಬೀಚ್ ಮತ್ತು ಲೈಟ್‌ಹೌಸ್ ಬೀಚ್ ಕೂಡ ಪ್ರಕೃತಿ ಚೆಲುವನ್ನು ಹೆಚ್ಚಿಸಿದೆ. ಅರ್ಧ ವೃತ್ತಾಕಾರದ ರೀತಿಯಲ್ಲಿರುವ ಈ ಕಡಲಿನ ಮರಳು ಸುಮಾರು 4 ಕಿ.ಮೀವರೆಗೆ ಚಾಚಿಕೊಂಡಿದೆ.ಹಿಪ್ಪಿಗಳಿಂದ ಸುಮಾರು 70ನೇ ದಶಕದಲ್ಲಿ ಬೆಳಕಿಗೆ ಬಂದ ಈ ಕೋವಳಂ ಹಿಂದೆ ಮೀನುಗಾರರ ಹಳ್ಳಿಯಾಗಿತ್ತು. ಈಗ ಪ್ರವಾಸಿಗರ ತಾಣವಾಗಿ ಮಾರ್ಪಾಡಾಗಿದೆ. ಸೂರ್ಯೋದಯ ಮತ್ತು ಸೂರ್ಯಾಸ್ತಮವನ್ನು ಮನಸಾರೆ ನೋಡ ಬಯಸುವವರು ಇಲ್ಲಿಗೆ ಬಂದರೆ ಸಾಕು, ಪ್ರಕೃತಿ ಸೊಬಗನ್ನು ಕಣ್ತುಂಬಿಕೊಳ್ಳಬಹುದು.ಕಡಲ ತಡಿಯನ್ನು ಕೊಳಕು ಮಾಡದೆ, ಅತಿ ಶುದ್ಧವಾಗಿ ಈ ಪ್ರವಾಸಿ ತಾಣಗಳನ್ನು ನಿರ್ವಹಿಸಿರುವುದು ಕೇರಳ ಸರ್ಕಾರದ ವೈಶಿಷ್ಟ್ಯ. ನವೆಂಬರ್‌ನಿಂದ ಮಾರ್ಚ್ ಇಲ್ಲಿಗೆ ಬರಲು ಸೂಕ್ತ ಸಮಯ.ಮರೀನಾ ಬೀಚ್

 ಏಷ್ಯಾದಲ್ಲೇ ಎರಡನೇ ಅತಿ ದೊಡ್ಡ ಕಡಲು ಎಂದು ಮರೀನಾ ಬೀಚ್ ಹೆಸರುವಾಸಿ. 12 ಕಿ. ಮೀ. ವಿಶಾಲವಾಗಿ ಹರಡಿಕೊಂಡಿರುವ ಮರಳ ರಾಶಿ, ಕಣ್ಣು ಚಾಚುದಷ್ಟೂ ಮುಗಿಯದ ಕಡಲು ನೋಡುಗರನ್ನು ನಿಬ್ಬೆರಗಾಗಿಸುತ್ತದೆ.ಚೆನ್ನೈನ ಅತಿ ಪ್ರಸಿದ್ಧ ಪ್ರವಾಸಿ ತಾಣ ಎಂದು ಹೆಸರಾಗಿರುವ ಮರೀನಾದಲ್ಲಿ ಸೂರ್ಯಾಸ್ತ, ಸೂರ್ಯೋದಯ ನೋಡುವುದೇ  ವಿಭಿನ್ನ ಅನುಭವ. ಸಂಜೆಯಾಗುತ್ತಿದ್ದಂತೆ  ಮರೀನಾ ಮತ್ತೂ ರಂಗೇರುತ್ತದೆ.ಮರೀನಾ ಸುತ್ತ ಮುತ್ತಲ ಪ್ರದೇಶಗಳಲ್ಲಿ ಚೆಂದದ ಉದ್ಯಾನಗಳೂ ಇವೆ. ಆಗಾಗ್ಗೆ ಕಡಲ ತಡಿಯಲ್ಲಿ ಗಾಳಿಪಟ ಹಾರಿಸುವ ಹವ್ಯಾಸ ಹೊಂದಿರುವವರು ಇಲ್ಲಿಗೆ ಬಂದು ಬಣ್ಣ ಬಣ್ಣದ ಗಾಳಿಪಟಗಳಿಂದ ಕಡಲ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತಾರೆ. ಮರೀನಾ ಬೀಚ್‌ಗೆ ಹತ್ತಿರದಲ್ಲೇ ಅಕ್ವೇರಿಯಂ ಇದ್ದು, ಹಲವು ಅಪರೂಪದ ಮೀನುಗಳ ಸಂಗ್ರಹವನ್ನು ಇಲ್ಲಿ ನೋಡಬಹುದು.ಕಲಂಗೂಟ್

`ಕ್ವೀನ್ ಆಫ್ ಬೀಚ್~ ಎಂದೇ ಹೆಸರುವಾಸಿಯಾದ ಕಡಲ ತೀರ ಗೋವಾದ ಕಲಂಗೂಟ್ ಪ್ರವಾಸಕ್ಕೆ ಹೇಳಿಮಾಡಿಸಿದ ತಾಣ. ವಾರವಿಡೀ ಜಂಜಾಟದಲ್ಲಿ ಕಳೆದುಹೋದ ನಗರಿಗರು ಆಗಾಗ್ಗೆ ವಿಶ್ರಾಂತಿಗೆಂದು ಗೋವಾಗೆ ಬರುತ್ತಾರೆ. ವರ್ಷದಿಂದ ವರ್ಷಕ್ಕೆ ಇಲ್ಲಿನ ಪ್ರವಾಸಿಗರ ಸಂಖ್ಯೆಯೂ ದ್ವಿಗುಣಗೊಳ್ಳುತ್ತಲೆ ಇದೆ. ಇದಕ್ಕೆ ಪ್ರವಾಸಿಗರ ಸ್ವರ್ಗ ಎಂಬ ಹೆಸರೂ ಪ್ರತೀತಿಯಲ್ಲಿದೆ.ಈ ಬೀಚ್‌ನಲ್ಲಿ ಕಾಣಬಹುದಾದ ಪ್ರಕೃತಿ ಸೌಂದರ್ಯವನ್ನು ಇನ್ನೆಲ್ಲೂ ಸವಿಯಲು ಸಾಧ್ಯವಿಲ್ಲದ ಕಾರಣ ಇದಕ್ಕೆ `ಕ್ವೀನ್ ಆಫ್ ಬೀಚ್~ ಎಂಬ ಹೆಸರು ಬಂದಿದೆ ಎನ್ನುವ ಮಾತಿದೆ. ಕಡಲ ಕಿನಾರೆಯುದ್ದಕ್ಕೂ ಹರಡಿಕೊಂಡಿರುವ ಪಾಮ್ ಮರಗಳು, ಸುತ್ತ ಹಸಿರಿನ ಹೊದಿಕೆ ಬೀಚ್‌ನ ಸೌಂದರ್ಯಕ್ಕೆ ಮೆರುಗನ್ನು ಇಮ್ಮಡಿಗೊಳಿಸಿದೆ.`ಕಲಂಗೂಟ್~ ಹೆಸರಿನ ಹಿಂದೆಯೂ ಇತಿಹಾಸವಿದೆ. `ಕೋಲಗುಟ್ಟಿ~ (ಮೀನುಗಾರರ ಭೂಮಿ) ಎಂದು ಕರೆಯಲ್ಪಡುತ್ತಿದ್ದ ಈ ನೆಲ ನಂತರ `ಕಾಲ್ಯಗುಟ್ಟಿ~ (ಕಲೆಯ ಹಳ್ಳಿ) ಎಂದಾಯಿತು. ಆನಂತರ `ಕೊನವಾಲೊ ಗಾಟ್ ` (ತೆಂಗಿನ ಮರಗಳು ಹೆಚ್ಚಿರುವ ಜಾಗ ) ಎಂದಾಯಿತು.ಪೋರ್ಚುಗೀಸರು ಬಂದ ನಂತರ ಇದು `ಕಲಂಗೂಟ್~ ಹೆಸರಾಗಿ ಪರಿವರ್ತನೆಯಾಯಿತು ಎಂಬ ಹಿನ್ನೆಲೆಯಿದೆ. ಪಣಜಿಯಿಂದ 16 ಕಿ.ಮೀ ಅಂತರದಲ್ಲಿ ಈ ಕಡಲ ಪ್ರಪಂಚವೇ ಹರವುಗೊಂಡಿದೆ.ಕಾರವಾರ

ಉತ್ತರ ಕರ್ನಾಟಕದ ಅತಿ ಪ್ರಸಿದ್ಧ ಕಡಲ ಕಿನಾರೆ ಕಾರವಾರ. ಕಡಲು ಮಾತ್ರವಲ್ಲ, ಸದಾಶಿವಗಡ ಬೆಟ್ಟ, ದುರ್ಗಾ ದೇವಸ್ಥಾನ, ಚರ್ಚ್, 300 ವರ್ಷ ಇತಿಹಾಸ ಹೊಂದಿರುವ ವೆಂಕಟರಾಮ ದೇವಸ್ಥಾನ, ನಾಗನಾಥ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಗೋವಾದಿಂದ 100 ಕಿ.ಮೀ ಅಂತರದಲ್ಲಿರುವ ಈ ಕಡಲು ಅತಿ ಶಾಂತಯುತ ಪ್ರದೇಶ ಎಂದು ಕರೆಯುತ್ತಾರೆ.ಸುತ್ತಲೂ ಬೆಟ್ಟಗಳ ಹೊದಿಕೆ ಹೊಂದಿರುವ ಕಾರವಾರ ಕರಾವಳಿ ಬೆಡಗು ಇನ್ನಷ್ಟು ಹೆಚ್ಚುವುದು ಇಲ್ಲಿಂದ 3 ಕಿ. ಮೀ ಅಂತರದಲ್ಲಿರುವ ದೇವಬಾಗ್ ದ್ವೀಪದಿಂದ. ಪ್ರಕೃತಿ ತನ್ನ ಸೌಂದರ್ಯವನ್ನು ಇಡಿಯಾಗಿ ಕಾರವಾರಕ್ಕೆ ನೀಡಿರುವಳೇನೊ ಎಂಬ ಭಾವ ಇಲ್ಲಿಗೆ ಭೇಟಿ ಕೊಟ್ಟರೆ ಮಿಂಚಿ ಮರೆಯಾಗುತ್ತದೆ.ರವೀಂದ್ರನಾಥ ಟ್ಯಾಗೋರರಿಗೂ ಈ ಪ್ರದೇಶ ಸ್ಫೂರ್ತಿ ತುಂಬಿತ್ತು. ಸಮುದ್ರದಲ್ಲಿ ಆಡಿ ತಣಿದು ಸುಸ್ತಾದವರು ಅಲ್ಲೇ ಸೀಫುಡ್‌ಗಳ ರುಚಿಯನ್ನೂ ಸವಿಯುವ ಅವಕಾಶವಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry