ಭಾನುವಾರ, ಮೇ 22, 2022
21 °C

`ವಿಶಾಲ ಹೃದಯವೇ ಕಾಣಿಕೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: `ಸಿಟ್ಟು ಬಂದಾಗ, ದುಃಖವಾದಾಗ ನನ್ನನ್ನು ಸ್ಮರಿಸಿ. ವಿಶಾಲ ಹೃದಯವಂತರಾಗಿ. ಇದೇ ನನ್ನ ಜನ್ಮದಿನಕ್ಕೆ ನೀವು ಕೊಡುವ ಕಾಣಿಕೆ' ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಕರೆ ನೀಡಿದರು.ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಬೈಲುಕುಪ್ಪೆಯಲ್ಲಿಯ ಟಿಬೆಟನ್ ನಿರಾಶ್ರಿತರ ಶಿಬಿರದಲ್ಲಿ ಶನಿವಾರ ಏರ್ಪಡಿಸಿದ್ದ ತಮ್ಮ 78ನೇ ಜನ್ಮದಿನ ಸಮಾರಂಭದಲ್ಲಿ ಅವರು ಮಾತನಾಡಿದರು.`ಪ್ರೀತಿಯಿಂದ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದ್ದೀರಿ. ಅದನ್ನು ಧರಿಸಿಕೊಂಡೇ ಮಾತನಾಡುವೆ' ಎಂದ ಅವರು, `ದುಗುಡದ ಜಗತ್ತಿನಲ್ಲಿ ಬದುಕಿರುವಾಗ ಶಾಂತಿ, ಸೌಹಾರ್ದ ಹಾಗೂ ಪ್ರೀತಿ ಅಗತ್ಯ. ಇದಕ್ಕಾಗಿ ಧಾರ್ಮಿಕ ಮುಖಂಡರು ನಿರಂತರವಾಗಿ ಶಾಂತಿ ಹಾಗೂ ಸೌಹಾರ್ದ ಬದುಕಿನ ಕುರಿತು ಸಂದೇಶ ನೀಡಬೇಕು' ಎಂದರು.ನಿಜಲಿಂಗಪ್ಪ ನೆನಪು: `ಎಸ್. ನಿಜಲಿಂಗಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಟಿಬೆಟ್ ಜನರ ಪುನರ್‌ವಸತಿ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿ ಚರ್ಚಿಸಿದ್ದೆ' ಎಂದು ಸ್ಮರಿಸಿಕೊಂಡ ಅವರು, ಕರ್ನಾಟಕದಲ್ಲಿ ಸುಮಾರು 40 ಸಾವಿರ ಹಾಗೂ ದೇಶದಲ್ಲಿ ಸುಮಾರು 1 ಲಕ್ಷ ಟಿಬೆಟನ್ ಜನರು ನೆಲೆಯೂರಿದ್ದಾರೆ ಎಂದರು.ಬುದ್ಧನ ಸ್ಫೂರ್ತಿ: `ದಲೈಲಾಮಾ ಅವರಲ್ಲಿ ಬುದ್ಧನ ಸ್ಫೂರ್ತಿ ಕಂಡೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ದಲೈಲಾಮಾ ಅವರಿಗೆ ಮೈಸೂರು ಪೇಟ ತೊಡಿಸಿ, ರೇಷ್ಮೆ ಶಾಲು ಹೊದಿಸಿ, ಗಂಧದ ಹಾರ ಹಾಕಿ ಸನ್ಮಾನಿಸಿ ಜನ್ಮದಿನದ ಶುಭಾಶಯ ಕೋರಿದ ನಂತರ ಅವರು ಮಾತನಾಡಿದರು.`ಭಾರತ-ಟಿಬೆಟ್ ಸಂಬಂಧ 50 ವರ್ಷಗಳಿಗೂ ಅಧಿಕವಾದುದು. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯ ನಿರಂತರವಾಗಿದೆ. ಟಿಬೆಟನ್ ಜನರ ಕಷ್ಟಗಳಿಗೆ ಕರ್ನಾಟಕದ ಜನರು ಸದಾ ಸ್ಪಂದಿಸುತ್ತಿದ್ದಾರೆ. ರಸ್ತೆ, ಕುಡಿಯುವ ನೀರು ಹಾಗೂ ಕೃಷಿಗೆ ಸಂಬಂಧಿಸಿ ಸೌಲಭ್ಯಗಳನ್ನು ಕರ್ನಾಟಕ ಸರ್ಕಾರ ಕಲ್ಪಿಸುತ್ತಿದೆ. ನಿಮ್ಮ ಕಷ್ಟಗಳಿಗೆ ರಾಜ್ಯ ಸರ್ಕಾರ ಸದಾ ಸ್ಪಂದಿಸುತ್ತದೆ. ಜತೆಗೆ, ಸದಾವಕಾಲ ನಿಮ್ಮನ್ನು ಅತಿಥಿಯಾಗಿ ನೋಡಿಕೊಳ್ಳುತ್ತದೆ' ಎಂದು ಭರವಸೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.