ಗುರುವಾರ , ಜೂನ್ 24, 2021
29 °C

ವಿಶಿಷ್ಟವಾಗಿ ಕೆಂಡ ಸೇವೆ ಆಚರಿಸಿದ ಗ್ರಾಮಸ್ಥರು

ಪ್ರಜಾವಾಣಿ ವಾತ್ರೆ Updated:

ಅಕ್ಷರ ಗಾತ್ರ : | |

ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದ ಬಸವೇಶ್ವರ ಜಾತ್ರೆ ಹಾಗೂ ಶಿಂಗಟಾಲೂರ ಗ್ರಾಮದ ವೀರ­ಭದ್ರೇಶ್ವರ ಜಾತ್ರೆಗಳಲ್ಲಿ ಭಾನುವಾರ ಅಗ್ನಿ ಹಾಯುವುದನ್ನು (ಕೆಂಡ ಸೇವೆ) ತುಂಬಾ ವಿಶಿಷ್ಟವಾಗಿ ಮತ್ತು ವಿಭಿನ್ನವಾಗಿ ಆಚರಿಸಲಾಯಿತು.ಅಗ್ನಿ ಮಹೋತ್ಸವದ ದಿವಸ ಗ್ರಾಮಸ್ಥರೆಲ್ಲ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಮೆರವಣಿಗೆಯ ಮೂಲಕ ತುಂಗಭದ್ರಾ ನದಿಗೆ ಕೊಂಡೊಯ್ದರು. ಅಲ್ಲಿ ಎಲ್ಲರೂ ಸಾಮೂಹಿಕವಾಗಿ ಸ್ನಾನ ಮಾಡಿ ಪಲ್ಲಕ್ಕಿಯಲ್ಲಿರುವ ದೇವರಿಗೆ ಪೂಜೆ ಸಲ್ಲಿಸಿ ಭಾಜಾ ಭಜಂತ್ರಿಗಳೊಂದಿಗೆ ಅದ್ದೂರಿಯಿಂದ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟರು.ಮೆರವಣಿಗೆಯ ಉದ್ದಕ್ಕೂ ಭಾಜಾ ಭಜಂತ್ರಿಯವರು ಬಾರಿಸುವ ಸಮ್ಮಾಳಕ್ಕೆ ಪುರವಂತರು ಹಾಗೂ ನಂದಿ­ಕೋಲಿ­ನವರು ಲಯಬದ್ಧವಾಗಿ ಕುಣಿ­ಯುವು­ದನ್ನು ನೋಡಲು ರಸ್ತೆಗಳ ಇಕ್ಕೆಲಗಳಲ್ಲಿ ಸಾವಿರಾರು ಜನರು ನೆರೆದಿದ್ದರು.ಮೆರವಣಿಗೆಯ ಉದ್ದಕ್ಕೂ ಕಾಶಿ ಕಟ್ಟಿದ ಪುರವಂತರು ಹಾಗೂ ನೂರಾರು ಭಕ್ತರು ಬೆಳ್ಳಿ, ತಾಂಬ್ರ ಹಾಗೂ ಚಲೋಹಗಳಿಂದ ತಯಾರಿಸಿದ ವಿವಿಧ ಗಾತ್ರಗಳ ಶಸ್ತ್ರಗಳನ್ನು ಹಿಡಿದು­ಕೊಂಡು ವೀರಾವೇಷದಿಂದ ಕುಣಿಯು­ವುದನ್ನು ನೆರೆದಿದ್ದ ಜನರೆಲ್ಲ ಭಯ ಭಕ್ತಿಯಿಂದ ನೋಡಿದರು. ಮೆರವಣಿಗೆಯ ಉದ್ದಕ್ಕೂ ನೂರಾರು ಭಕ್ತರು ವಿವಿಧ ಗಾತ್ರದ ಶಸ್ತ್ರಗಳನ್ನು ತಮ್ಮ ಒಂದು ಕೆನ್ನೆಗೆ ಚುಚ್ಚಿಕೊಳ್ಳುತ್ತಾ ವೀರಾವೇಷದಿಂದ ಕುಣಿಯುತ್ತಾರೆ. ಮಧ್ಯದಲ್ಲಿ ದೇವರ ಒಡಬು(ಒಡಪು)ಗಳನ್ನು ಹೇಳುತ್ತಾ, ಭಾವ ಪರವಶರಾದರು.ಕೆಲವು ಭಕ್ತರು ಸುಮಾರು ನೂರು ಫೋಟ್‌ ಉದ್ದನೆಯ ಮತ್ತು ನೂರೆಂಟು ಗಂಟುಗಳುಳ್ಳ ದಾರವನ್ನು ತಮ್ಮ ಒಂದು ಕೆನ್ನೆಯಿಂದ ಇನ್ನೊಂದು ಕೆನ್ನೆಯ ಮೂಲಕ ದಾಟಿಸಿಕೊಳ್ಳುವ ಮೂಲಕ ಹರಕೆ  ತೀರಿಸಿದರು. ಕೆಲವು ಭಕ್ತರು ಐದಾರು ಅಡಿ ಉದ್ದನೆಯ ಹಾಗೂ ಹೆಬ್ಬೆರಳು ಗಾತ್ರದ ಶಸ್ತ್ರವನ್ನು ನಾಲಿಗೆಯ ಮಧ್ಯದಲ್ಲಿ ಚುಚ್ಚಿಕೊಂಡು ಆಚೆ ತೆಗೆಯುವ ಮೂಲಕ ನೆರೆದಿದ್ದ­ವರನ್ನು ಮಂತ್ರ ಮುಗ್ಧಗೊಳಿಸಿದರು.ಹೀಗೆ ವಿವಿಧ ಆಚರಣೆಗಳಿಂದ ಬೆಳಿಗ್ಗೆ 10ಗಂಟೆಗೆ ಪ್ರಾರಂಭವಾಗುವ ಅದ್ದೂರಿ ಮೆರವಣಿಗೆಯು ಮಧ್ಯಾಹ್ನ 12ಗಂಟೆಗೆ ಗ್ರಾಮದ ಬಸವೇಶ್ವರ ದೇವಸ್ಥಾನದ ಮುಂದೆ ಅಗ್ನಿ ಹಾಯುವ ಮೂಲಕ ಕೊನೆಗೊಳ್ಳುತ್ತದೆ. ಪ್ರತೀ ವರ್ಷ ಜರುಗುವ ಜಾತ್ರೆ ನೋಡಲು ದೂರದೂರದ ಊರುಗಳಿಂದ ಜನರು ಆಗಮಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.