ಸೋಮವಾರ, ಜೂನ್ 14, 2021
26 °C

ವಿಶಿಷ್ಟ ಅಲೆಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಿಷ್ಟ ಅಲೆಮಾರಿ

ಚಿತ್ರ: ಅಲೆಮಾರಿ

ಪ್ರೀತಿ ಮತ್ತು ರೌಡಿಸಂ ಸಿನಿಮಾ ಕಥೆಗಳ ಪ್ರೇರಕ ಅಂಶಗಳು. ಎರಡನ್ನೂ ಬಗಲಲ್ಲಿಟ್ಟುಕೊಂಡು ಹೆಣೆದ ಚಿತ್ರಗಳ ಸಾಲಿಗೆ ಸೇರುವಂತಹ ಕಥೆಯನ್ನೇ ಒಳಗೊಂಡಿದ್ದರೂ `ಅಲೆಮಾರಿ~ ನಿರೂಪಣೆಯ ಧಾಟಿ, ಸನ್ನಿವೇಶಗಳಲ್ಲಿನ ಸಂವೇದನೆ ಮತ್ತು ಸೃಜನಶೀಲತೆ ಯನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಪ್ರತ್ಯೇಕವಾಗಿ ಗುರುತಿಸುವಂತಹ ಚಿತ್ರ.ನಿರ್ದೇಶಕ ಪ್ರೇಮ್ ಬಳಗದಲ್ಲಿ ಕೆಲಸ ಮಾಡಿದ್ದ ಸಂತು ನಿರ್ದೇಶನದ ಮೊದಲ ಚಿತ್ರವಿದು. ಮಚ್ಚು ಲಾಂಗುಗಳ ಸದ್ದು, ತಾಯಿ ಮಗನ ಬಾಂಧವ್ಯ, ಹತ್ತಿರಲ್ಲೇ ಇದ್ದರೂ ಕಾಣದ ಪ್ರೇಮಿ, ತಂತ್ರಜ್ಞಾನದ ಬಳಕೆ... ಹೀಗೆ ಹಲವೆಡೆ ಪ್ರೇಮ್ ಪ್ರಭಾವ ಸ್ಪಷ್ಟವಾಗಿ ಕಾಣುತ್ತದೆ. ಹಾಗೆಂದು ಗುರುವಿನ ಮಾದರಿಯನ್ನೇ ಶಿಷ್ಯ ಅನುಕರಿಸಿದ್ದಾನೆ ಎನ್ನುವಂತಿಲ್ಲ.ಕಸುಬುದಾರಿಕೆಯಲ್ಲಿ, ಪ್ರೀತಿ- ವಿರಹದ ಭಾವನೆಗಳನ್ನು ಸಮತಟ್ಟಾಗಿ ತೂಗಿಸುವಲ್ಲಿ ಸಂತು ವಿಭಿನ್ನವಾಗಿ ನಿಲ್ಲುತ್ತಾರೆ. ಚಿತ್ರಗಳಲ್ಲಿ ತೀರಾ ಸಾಮಾನ್ಯ ಎನಿಸಿರುವ ಸರಕುಗಳೇ ಇಲ್ಲಿ ಕಂಡರೂ, ಅವುಗಳನ್ನು `ಅಲೆಮಾರಿ~ ಸೂಕ್ಷ್ಮವಾಗಿ ಪ್ರಸ್ತುತಪಡಿಸುತ್ತದೆ.ದುರಂತ ಅಂತ್ಯ ನೀಡುವ ಕಥೆಯಲ್ಲಿ ದುಃಖ ಕಟ್ಟೆಯೊಡೆದು ಪ್ರೇಕ್ಷಕನನ್ನು ಕಣ್ಣೀರಿನಲ್ಲಿ ತೋಯಿಸುವ ಬದಲು ಚಿತ್ರದುದ್ದಕ್ಕೂ ಭಾವನೆಗಳನ್ನು ಹಿಡಿದಿಡುವಂತೆ ಮಾಡುವಲ್ಲಿ ನಿರ್ದೇಶಕರು ತೋರಿರುವ ಸಂಯಮ ಮೆಚ್ಚುವಂತಹದ್ದು.`ಅಲೆಮಾರಿ~ ಕನಸುಗಳನ್ನು ಹುಡುಕುವ ಅಲೆದಾಟ ಎನ್ನುವುದು ನಿರ್ದೇಶಕರ ಪ್ರತಿಪಾದನೆ. ಆದರೆ ಕಥೆ ತೆರೆದುಕೊಳ್ಳುವುದು ಕನಸುಗಳ್ಲ್ಲಲೇ. ಕನಸುಗಳೆಲ್ಲಾ ಮುಗಿದು ವಾಸ್ತವ ಬಂದಾಗಲೂ ಬದುಕಿನ ಗತಿ ಬದಲಾಗುವುದಿಲ್ಲ. ಹುಡುಕಾಟದ ಎರಡು ಚಿತ್ರಣಗಳಲ್ಲೂ ಪ್ರೀತಿಯ ಕನವರಿಕೆ ಪದೇ ಪದೇ ಕಾಡುತ್ತದೆ. ಕೊನೆಯಲ್ಲೊಮ್ಮೆ ದುರಂತದ ಅಂತ್ಯಕ್ಕೆ ವಿಷಾದ, ದುಃಖದ ಛಾಯೆ ಹಾದುಹೋಗುತ್ತದೆ. ರೌಡಿಸಂನ ಮೂಲಮಂತ್ರ ಇಲ್ಲಿ ಕೆಲಸ ಮಾಡಿದೆ. ಮಚ್ಚುಲಾಂಗುಗಳ ಸದ್ದಿನ ನಡುವೆ ಕ್ರೌರ್ಯದ ವೈಭವೀಕರಣವಿಲ್ಲ. ಹೆಸರು ಮಾಡುವ ಹಂಬಲದ ಬಿಸಿರಕ್ತದ ಯುವಕರು ರೌಡಿಸಂನತ್ತ ವಾಲುವ ತೆಳುಚಿತ್ರಣದ ಜೊತೆ ನಾಯಕನನ್ನು ರೌಡಿಯಾಗಿಸದೆ ಕಟ್ಟಿಕೊಟ್ಟಿ ರುವುದು ನಿರ್ದೇಶಕರ ಕುಶಲತೆಗೆ ಸಾಕ್ಷಿ. ಯೋಗೀಶ್ ಪ್ರೀತಿ ಅರಸುವ ಅಲೆಮಾರಿಯಾಗಿದ್ದಾಗ `ಅಂಬಾರಿ~ಯ ಅಮಾಯಕತೆಯ ಪುನರ್‌ಸೃಷ್ಟಿಯಾಗಿ, ದಿಕ್ಕುದೆಸೆಯಿಲ್ಲದ ಅಲೆಮಾರಿ ಯಾದಾಗ ದೈಹಿಕ ಪರೀಕ್ಷೆಗೆ ಒಡ್ಡಿಕೊಳ್ಳುವ ಪ್ರಬುದ್ಧ ನಟನಾಗಿ ಕಾಣಿಸುತ್ತಾರೆ. ರಾಧಿಕಾ ಪಂಡಿತ್ ಮುಂಜಾನೆಯ ಬಿಸಿಲಿಗೆ ಮೈಯೊಡ್ಡಿದ ಮೊಗ್ಗಿನಂತೆ ಸುಂದರ. ಪ್ರತಿ ಕೋನದಲ್ಲೂ ಚಿತ್ರ ಸುಂದರವಾಗಿ ಮೂಡಿಸುವಲ್ಲಿ ಮಂಜುನಾಥ್ ನಾಯಕ್ ಕ್ಯಾಮೆರಾ ಶ್ರಮ ಎದ್ದು ಕಾಣುತ್ತದೆ.ಚಿತ್ರ ಲೋಪಗಳಿಂದ ಹೊರತಲ್ಲ. ಆಕ್ಷೇಪಾರ್ಹ ಅಂಶ ಕಾಣುವುದು ಪ್ರೀತಿಯ ಸನ್ನಿವೇಶದಲ್ಲಿ. ಇಲ್ಲಿ ನಾಯಕ-ನಾಯಕಿಗೆ ಜನರಿಲ್ಲದ ಏಕಾಂತದ ಸ್ಥಳ ಎಂದರೆ ಕನ್ನಡದ ಕಲಾತ್ಮಕ ಸಿನಿಮಾ ಪ್ರದರ್ಶನವಾಗುವ ಚಿತ್ರಮಂದಿರ. ಮುರುಕಲು ಸೀಟು, ಬೆರಳಣಿಕೆಯ ಜನರ ನಡುವೆ ಕನ್ನಡದ ಶ್ರೇಷ್ಠ ಚಿತ್ರವೊಂದರ ಸಂಭಾಷಣೆ ಹಿನ್ನೆಲೆಯಲ್ಲಿ ಕೇಳಿಬರುತ್ತದೆ, ಭುಜದ ಮೇಲೊರಗುವ ನಾಯಕಿ ಜೊತೆ ನಾಯಕ ಪ್ರೇಮಲೋಕದಲ್ಲಿ ಹಾಡಿ ಕುಣಿಯುತ್ತಾನೆ! ಕಲಾತ್ಮಕ ಚಿತ್ರವೊಂದು ಇಲ್ಲಿ ಗೇಲಿಗೊಳಗಾಗುವುದು ವಿಪರ್ಯಾಸ.

ದೀರ್ಘವೆನಿಸುವ ಸನ್ನಿವೇಶಗಳು ಅಲ್ಲಲ್ಲಿ ಬೇಸರ ಮೂಡಿಸುತ್ತವೆ. ಖಳನಾಯಕನ ಪಟ್ಟ ಅಲಂಕರಿಸಿದ ರಾಕೇಶ್ ಅಡಿಗ ಸಂಭಾಷಣೆ ಒಪ್ಪಿಸುವಾಗ ನಾಟಕೀಯತೆ ಎದ್ದುಕಾಣುತ್ತದೆ. ರಾಜು ತಾಳೀಕೋಟೆ ಮಾತೇ ಬಂಗಾರ. ಹೆಚ್ಚು ಆಪ್ತವೆನಿಸುವ ಉಮಾಶ್ರೀ ಪಾತ್ರ ಕೆಲವೇ ಸನ್ನಿವೇಶಗಳಿಗೆ ಸೀಮಿತವಾಗುತ್ತದೆ.ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಬಂಡವಾಳ. ಹಾಡುಗಳಲ್ಲಿ ಹೊಸತನ, ಲವಲವಿಕೆ ಎರಡನ್ನೂ ಜನ್ಯ ಸಂಗೀತ ಮತ್ತು ಸಂತು ಸಾಹಿತ್ಯ ನೀಡುತ್ತವೆ. ಮಂಜು ಮಾಂಡವ್ಯ ಸಂಭಾಷಣೆಯಲ್ಲಿ ಚುರುಕುತನವಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.