ವಿಶಿಷ್ಟ ಜೋಕುಮಾರ ಹುಣ್ಣಿಮೆ

7

ವಿಶಿಷ್ಟ ಜೋಕುಮಾರ ಹುಣ್ಣಿಮೆ

Published:
Updated:
ವಿಶಿಷ್ಟ ಜೋಕುಮಾರ ಹುಣ್ಣಿಮೆ

ಕೆಂಭಾವಿ: ಸಂಪ್ರದಾಯವನ್ನು ಮರೆತು ವೈಜ್ಞಾನಿಕತೆಯತ್ತ ಸಾಗುತ್ತಿರುವ ಇಂದಿನ ದಿನಗಳಲ್ಲೂ ಕೆಲವು ಆಚರಣೆ­ಗಳು ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸಿಕೊಂಡು ಬರುತ್ತಿವೆ.

ಭಾದ್ರಪದ ಮಾಸದ ಶುಕ್ಲಪಕ್ಷದಲ್ಲಿ ಗಣೇಶ ಬಂದು ಹೋದ ನಂತರ ಗಂಗಾ­ಮತಸ್ಥ ಹೆಣ್ಣು ಮಕ್ಕಳು, ಬೇವಿನಸೊಪ್ಪು ತುಂಬಿದ ಬುಟ್ಟಿಯಲ್ಲಿ ಮಣ್ಣಿನ ಮೂರ್ತಿಯೊಂದನ್ನು ಇಟ್ಟುಕೊಂಡು ಮನೆಮನೆಗೆ ಹೋಗುತ್ತಾರೆ. ಅಲ್ಲಿ ದವಸಧಾನ್ಯಗಳನ್ನು ಪಡೆಯುತ್ತಾರೆ. ಇದು ಉತ್ತರ ಕರ್ನಾಟಕದಲ್ಲಿ ಆಚರಣೆ­ಯಲ್ಲಿರುವ ಜೋಕುಮಾರನ ಹಬ್ಬ. ಜೋಕು­ಮಾರನ ಮೂರ್ತಿ­ಯನ್ನು ಊರಿನ ಕುಂಬಾರರ ಮನೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಅಗಲ­ವಾದ ಮುಖ, ಅದಕ್ಕೆ ತಕ್ಕಂತೆ ಕಣ್ಣು, ಗಿಡ್ಡ ಕಾಲುಗಳು, ಕೈಯಲ್ಲಿ ಸಣ್ಣ ಕತ್ತಿಯನ್ನು ಹೊಂದಿದ ಮಣ್ಣಿನ ಮೂರ್ತಿಯನ್ನು ಬೇವಿನ ಸೊಪ್ಪಿನಲ್ಲಿ ಮುಚ್ಚಿಕೊಂಡು ಊರಿನ ಮನೆ ಮನೆಗೆ ಹೊತ್ತು ತರುತ್ತಾರೆ. ಜೋಕುಮಾರ­ನನ್ನು ಕುರಿತ ಹಾಡುಗಳನ್ನು ಹೇಳುತ್ತಾ ಮನೆಮನೆ ಸುತ್ತುತ್ತಾರೆ. ’ಅಷ್ಟಮಿ ದಿನ ಹುಟ್ಟಾನ ನನ್ನ ಕುವರ ಹುಟ್ಟಿದ ವಾಳ ಕರಿ ಲೇಸ ಜೋಕುಮಾರ’ ಎಂದು ಹಾಡುತ್ತಾ ಮಳೆಗಾಗಿ ಜೋಕುಮಾರ­ನನ್ನು ಪ್ರಾರ್ಥಿಸುತ್ತಾರೆ.

ಈ ಕುರಿತು ವಿವರಿಸಿದ ಸೋಮಾ­ಬಾಯಿ ತಳವಾರ, ’ನಮ್ಮ ವಂಶಸ್ಥರು ಈ ಪದ್ಧತಿಯನ್ನು ಬಹಳ ಕಾಲದಿಂದ ನಡೆಸಿಕೊಂಡು ಬರುತ್ತಿದ್ದಾರೆ. ಕೆಂಭಾವಿ, ಪತ್ತೆಪೂರ, ಯಡ್ಯಾಪುರ, ಮಾಳಳ್ಳಿ ಊರುಗಳಿಗೆ ತೆರಳಿ ಜೋಕುಮಾರನ ಕುರಿತು ಹಾಡು ಹಾಡುತ್ತೇವೆ. ಮನೆಯವರು ಕೊಟ್ಟ ಬಿಳಿಜೋಳ ತರುತ್ತೇವೆ, ಭೂಮಿಗೆ ಬರುವ ಗಣಪ ಮಳೆಯನ್ನು ತರದೇ ಕೈಲಾಸಕ್ಕೆ ಹೋದಾಗ, ಆತನ ನಂತರ ಬರುವ ಬಡವರ ಬಂಧು ಜೋಕು­ಮಾರ, ರೈತರ ಬವಣೆಯನ್ನು ನೋಡಿ ಮಳೆ ತರುತ್ತಾನಂತೆ. ಅದಕ್ಕಾಗಿ ಆತ ಮಳೆ ದೇವತೆ ಎಂದೇ ರೈತರು ನಂಬು­ತ್ತಾರೆ ಎಂದು ಹೇಳಿದರು.

ಈ ವಿಶಿಷ್ಟ ಆಚರಣೆ 7 ದಿನ ನಡೆ­ಯುತ್ತದೆ. ನಂತರ ಬರುವ ಹುಣ್ಣಿಮೆ (ಜೋಕ್ಯಾನ ಹುಣ್ಣಿಮೆ) ಅನಂತನ ಹುಣ್ಣಿಮೆ. ಅಲ್ಪಾಯುಷಿಯಾದ ಜೋಕು­ಮಾರನನ್ನು ಈ ಹುಣ್ಣಿಮೆಯ ರಾತ್ರಿ ಊರಿನ ದಲಿತ ಕೇರಿಯಲ್ಲಿ ಒನಕೆಯಿಂದ ಬಡಿದು ಸಾಯಿಸುತ್ತಾರೆ. ಆಗ ಆತನ ರುಂಡವು ಅಂಗಾತ ಬಿದ್ದರೆ ಸುಖ ಕಾಲವೆಂದು, ಬೋರಲು ಬಿದ್ದರೆ ದುಃಖದ ಕಾಲವೆಂದು ನಂಬುತ್ತಾರೆ.

ಅಗಸರು ಊರಿನ ಪಕ್ಕದಲ್ಲಿರುವ ಹಳ್ಳಕ್ಕೆ ಒಯ್ದು ಅಲ್ಲಿ ಬಟ್ಟೆಗಳನ್ನು ಒಗೆಯುವ ಕಲ್ಲಿನ ಕೆಳಗೆ ಹಾಕಿ ಬರುತ್ತಾರೆ. ಆಗ ಜೋಕುಮಾರನು ನರಳುತ್ತಾನಂತೆ. ಇದರಿಂದ ತಮಗೆ ಅಪಾಯ ಎಂಬ ನಂಬಿಕೆಯಿಂದ ಅಗ­ಸರು ಮೂರು ದಿನ ಬಟ್ಟೆ ಒಗೆಯಲು ಹಳ್ಳಕ್ಕೆ ಹೋಗುವುದಿಲ್ಲ ಎಂದು ಈ ಆಚರಣೆ ಮಾಡುವ ನೀಲಮ್ಮ ತಳವಾರ, ಬಾಗಮ್ಮ ತಳವಾರ, ಬಸಮ್ಮ ವಿವರಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry