ಶುಕ್ರವಾರ, ಮೇ 7, 2021
19 °C

ವಿಶಿಷ್ಟ ನಂಬಿಕೆಯ ಸೌಹಾರ್ದ ಕೇಂದ್ರ ಹಣಗೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಾಡಿನ ಹೆಮ್ಮೆಯ ಹಿಂದೂ ಮುಸ್ಲಿಂ ಸೌಹಾರ್ದ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನ ಮೂಲಸೌಕರ್ಯ ಕೊರತೆಯಿಂದ ನಲುಗುತ್ತಿದೆ.ನಿತ್ಯ ಎರಡರಿಂದ ಮೂರು ಸಾವಿರ ಭಕ್ತರು ಇಲ್ಲಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಾರೆ. ಹುಣ್ಣಿಮೆ, ಅಮಾವಾಸ್ಯೆಯಂದು 15 ಸಾವಿರಕ್ಕೂ ಹೆಚ್ಚುಮಂದಿ ಭಕ್ತರು ಭೇಟಿ ನೀಡುತ್ತಾರೆ. ಭಕ್ತರಿಂದ ಸಂಗ್ರಹವಾಗುತ್ತಿರುವ ಕಾಣಿಕೆ ರೂಪದ ಹಣ ಸರ್ಕಾರದ ಖಜಾನೆ ತುಂಬುತ್ತಿದೆ. ಅಭಿವೃದ್ಧಿ ಮರೀಚಿಕೆಯಾಗಿದೆ.1965ರಿಂದ 1970ರ ಅವಧಿಯಲ್ಲಿ ಶರಾವತಿ ಮುಳುಗಡೆ ಪ್ರದೇಶದ ನಿರಾಶ್ರಿತರಿಗೆ ಹಣಗೆರೆ ಪಂಚಾಯ್ತಿ ವ್ಯಾಪ್ತಿ ಪ್ರದೇಶದಲ್ಲಿ ಜಮೀನು ನೀಡಿ ಪುನರ್ವಸತಿಯನ್ನು ಕಲ್ಪಿಸಲಾಗಿದೆ. ಕೆರೆಹಳ್ಳಿ, ಸಂಕ್ಲಾಪುರ, ಕಲ್ಕೊಪ್ಪ, ಕರಕುಚ್ಚಿ ಮುಂತಾದದಲ್ಲಿ ನೆಲೆ ನಿಂತ ನಿರಾಶ್ರಿತರಿಗೆ ಸರ್ಕಾರ ಸೌಲಭ್ಯ ಒದಗಿಸುತ್ತಾ ಬಂದಿದ್ದರೂ ಇನ್ನೂ ಈ ಭಾಗದಲ್ಲಿ ಅನೇಕ ಸಮಸ್ಯೆ ಹಾಗೆಯೇ ಉಳಿದಿದೆ. ಗ್ರಾಮಾಂತರ ಪ್ರದೇಶಗಳಿಗೆ ಸರಿಯಾದ ರಸ್ತೆ ಸಂಪರ್ಕ ಕಲ್ಪಿಸಿಲ್ಲ.ಹಣಗೆರೆ ಗ್ರಾಮ ಪಂಚಾಯ್ತಿಯಲ್ಲಿ ಬಹುತೇಕ ಈಡಿಗ ಜನಾಂಗದವರು ಹೆಚ್ಚಿದ್ದು, ಒಕ್ಕಲಿಗರು, ಬ್ರಾಹ್ಮಣರು, ಮುಸ್ಲಿಮರು, ಪರಿಶಿಷ್ಟ ಜಾತಿ, ವರ್ಗದ ಜನರು ವಾಸವಾಗಿದ್ದಾರೆ.ಮಳೆಯಾಶ್ರಿತ ಪ್ರದೇಶವಾದ್ದರಿಂದ ಮಳೆ ಬಿದ್ದರೆ ಮಾತ್ರ ಬೆಳೆ. ಪಂಚಾಯ್ತಿ ವ್ಯಾಪ್ತಿಯ ಅರನಲ್ಲಿ, ಹಣಗೆರೆ, ಶಿರನಲ್ಲಿ, ಬಸವನಗದ್ದೆ, ಕೊಂಬಿನಕೈ ಗ್ರಾಮಗಳು ನೀರಿನ ಬವಣೆಯಿಂದ ತಪ್ಪಿಸಿಕೊಂಡಿಲ್ಲ.ಧಾರ್ಮಿಕ ಹಿನ್ನೆಲೆ: ಬಹಳ ವರ್ಷಗಳ ಹಿಂದೆ ಹಣಗೆರೆಕಟ್ಟೆಯ ಕೆರೆ ದಡದ ಮೇಲೆ ಬಾಗ್ದಾದ್ ಸೂಫೀ ಮನೆತನದ ಹಜರತ್ ಸೈಯದ್ ಸಾದತ್ ಅವರು ಧ್ಯಾನಾಸಕ್ತರಾಗಿ ನೆಲೆಸುತ್ತಾರೆ. ಅವರ ಧ್ಯಾನಕ್ಕೆ ಭೂತಪ್ಪ ಹಾಗೂ ಚೌಡಮ್ಮ ಎಂಬ ಅಣ್ಣ- ತಂಗಿಯರು ಸಹಕರಿಸುತ್ತಾರೆ. ಹಣ್ಣು, ಹಾಲು, ಆಹಾರ ಒದಗಿಸುವ ಮೂಲಕ ನೆರವಾಗುತ್ತಾರೆ. ಒಮ್ಮೆ ಹಜರತ್ ಸೈಯದ್ ಸಾದತ್ ಅವರು ಲೋಕ ಕಲ್ಯಾಣಕ್ಕಾಗಿ ಅಲ್ಲಿಯೇ ಜೀವಂತ ಸಮಾಧಿಯಾಗುತ್ತಾರೆ. ಅವರು ಗೋರಿಯ ಅಕ್ಕಪಕ್ಕ ಭೂತಪ್ಪ ಹಾಗೂ ಚೌಡಮ್ಮ ನೆಲೆನಿಂತಿದ್ದು, ಈ ಸ್ಥಳ ಹಿಂದೂ-ಮುಸ್ಲಿಂ ಸಮುದಾಯದ ಶ್ರದ್ಧಾ ಕೇಂದ್ರವಾಗಿದೆ ಎಂಬ ಮಾಹಿತಿ ಲಭ್ಯವಿದೆ.ಭಕ್ತರೇ ಅರ್ಚಕರು

ಸಾವಿರಾರು ಸಂಖ್ಯೆಯಲ್ಲಿ ನಿತ್ಯ ಇಲ್ಲಿಗೆ ಆಗಮಿಸುವ ಭಕ್ತರಿಗೆ ಅರ್ಚಕರ ಗೊಡವೆ ಬೇಕಿಲ್ಲ. ತಮ್ಮ ಇಷ್ಟದಂತೆ ಪೂಜೆ ಸಲ್ಲಿಸಲು ಮುಕ್ತ ಅವಕಾಶವಿದೆ. ಸಂತರ ಗೋರಿಗೆ ಸಕ್ಕರೆ ಒದಿಕೆ(ಒಪ್ಪಿಸಿ) ಮಾಡಿಸಿ, ಗೋರಿ ಪಕ್ಕದಲ್ಲಿ ಮತ್ತಿ ಮರದಲ್ಲಿ ನೆಲೆ ನಿಂತ ಭೂತಪ್ಪ ಹಾಗೂ ಅದರ ಪಕ್ಕದಲ್ಲಿನ ಚೌಡೇಶ್ವರಿಗೆ ಹಣ್ಣು, ಕಾಯಿ ಎಡೆ ಇಟ್ಟು ಪೂಜಿಸುರಾಗುತ್ತಾರೆ.ವಿಶಿಷ್ಟ ನಂಬಿಕೆಯ ಆಚರಣೆಗಳು: ಮತ್ತಿಮರದಲ್ಲಿ ನೆಲೆ ನಿಂತ ಭೂತಪ್ಪನಿಗೆ ಹರಕೆ ಹೇಳಿಕೊಂಡ ಭಕ್ತರು ಮೊಳೆಹೊಡೆದು, ತಾಯತ, ತ್ರಿಶೂಲವನ್ನು ಅರ್ಪಿಸುತ್ತಾರೆ. ಬೀಗಹಾಕುವ ಮೂಲಕ ತಮ್ಮ ಎದುರಾಳಿಯನ್ನು ಸದೆಬಡಿಯಬಹುದು. ಕೋರ್ಟ್ ವ್ಯಾಜ್ಯಗಳಲ್ಲಿ ವಿರೋಧಿಗಳ ಬಾಯಿ ಮುಚ್ಚಿಸಬಹುದು. ಮಾಟ ಮಂತ್ರ ಮಾಡಿದವರಿಗೆ ವಾಪಸ್ಸಾಗುವಂತೆ ಮಾಡುವ ನಂಬಿಕೆಯ ಹಿನ್ನೆಲೆಯಲ್ಲಿ ಈ ಬಗೆಯ ಹರಕೆ ಒಪ್ಪಿಸುತ್ತಾರೆ.ಭಕ್ತರ ದಂಡು: ಹುಣ್ಣಿಮೆ, ಅಮಾವಾಸ್ಯೆಯಲ್ಲಿ ನಾಡಿನ, ಹೊರ ರಾಜ್ಯಗಳಿಂದಲೂ ಇಲ್ಲಿನ ದರ್ಗಾಕ್ಕೆ ಭಕ್ತರು ಭೇಟಿ ನೀಡುತ್ತಾರೆ. ದಾವಣಗೆರೆ, ಹರಿಹರ, ಬೆಂಗಳೂರು, ತುಮಕೂರು, ಅರಸೀಕೆರೆ ಮಂಗಳೂರು, ಗೋವಾ, ತಮಿಳುನಾಡು ಕಡೆಯಿಂದ ಬರುತ್ತಾರೆ. ಹುಣ್ಣಿಮೆ, ಅಮಾವಾಸ್ಯೆಯಂದು ಸಲ್ಲಿಸುವ ಪೂಜೆ ಶ್ರೇಷ್ಠವಾದದ್ದು ಎಂದು ನಂಬಲಾಗುತ್ತದೆ. ಹಾಗಾಗಿ, ಭಕ್ತರು ಹಣಗೆರೆಗೆ ಜಮಾಯಿಸುತ್ತಾರೆ.ಹುಂಡಿಗೆ ಲಕ್ಷ ಲಕ್ಷ ಕಾಣಿಕೆ

1938ರಲ್ಲಿ ಜಾಫರ್ ಮೊಹದ್ದೀನ್ ಸಾಬ್ ಮುಜಾವರ್(ವಹಿವಾಟುದಾರ) ಆಗಿದ್ದರು. ಆ ಕಾಲದಲ್ಲಿ ಸರ್ಕಾರಕ್ಕೆ ಜಮಾ ಮಾಡಬೇಕಿದ್ದ ್ಙ 120 ಕಟ್ಟಲು ಯಾರೂ ಮುಂದಾಗಲಿಲ್ಲ. ಅವರು 1965ರವರೆಗೆ ಕಾರ್ಯ ನಿರ್ವಹಿಸಿದರು. 1965ರಿಂದ 1992ರವರೆಗೆ ಸೈಯದ್ ಖರೀಂ ಮುಜಾವರ್ ಆಗಿ ಸೇವೆ ಸಲ್ಲಿಸಿದರು. 1985ರ ಮೇ 1ರಂದು ಈ ದರ್ಗಾವನ್ನು ಮುಜರಾಯಿ ಇಲಾಖೆಗೆ ಸೇರಿಸಲಾಯಿತು. ಮೂರು ತಿಂಗಳಿಗೊಮ್ಮೆ ಮುಜರಾಯಿ ಅಧಿಕಾರಿಗಳ ಸಮ್ಮುಖದಲ್ಲಿ ಹುಂಡಿಯನ್ನು ತೆರೆಯಲಾಗುತ್ತದೆ. ಪ್ರತಿ ಬಾರಿ ್ಙ 9ರಿಂದ 13 ಲಕ್ಷ ಹಣ ಸಂಗ್ರಹವಾಗುತ್ತಿದೆ ಎಂದು ಹೇಳುತ್ತಾರೆ ದರ್ಗಾದ ಮುಜಾವರ್ ಹಾಜಿ ಸೈಯದ್ ನೂರ್ ಸಾಹೆಬ್.ಕಸದ ತೊಟ್ಟಿಯಂತೆ ಪ್ರಾಂಗಣ...

ದರ್ಗಾ ದೇವಸ್ಥಾನದ ಸುತ್ತಲಿನ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದೆ. ರಸ್ತೆ ಮೇಲೆ ಕಸದ ರಾಶಿ ಬಿದ್ದಿದ್ದು, ದೇವಸ್ಥಾನದ ಪ್ರಾಂಗಣದಲ್ಲಿ ಭಕ್ತರು ಬಳಸಿ ಎಸೆದ ಕಸದ ರಾಶಿಯನ್ನು ಶುಚಿಗೊಳಿಸುವ ಕೆಲಸಕ್ಕೆ ಆದ್ಯತೆ ನೀಡುತ್ತಿಲ್ಲ. ಭಕ್ತರು ಹರಕೆ ಒಪ್ಪಿಸಿದ ಕುರಿ, ಕೋಳಿಯ ಅಡುಗೆ ಮಾಡಿ ದೇವರಿಗೆ ಒಪ್ಪಿಸುವ ಸಾಂಪ್ರದಾಯ ಇರುವುದರಿಂದಾಗಿ ಕಸ ಹೆಚ್ಚಾಗಲು ಕಾರಣವಾಗಿದೆ.ಭಕ್ತರ ಸಂಖ್ಯೆಗೆ ಅನುಗುಣವಾಗಿ ಶೌಚಾಲಯದ ಸೌಲಭ್ಯವಿಲ್ಲ. ಭಕ್ತರು ಒಂದು ದಿನ ತಂಗಿ ಪೂಜೆ ಸಲ್ಲಿಸುವುದರಿಂದ ವಸತಿಸೌಕರ್ಯ ಕೊರತೆ ಇದೆ. ಸಮರ್ಪಕ ಕುಡಿಯುವ ನೀರಿನ ಸೌಲಭ್ಯವಿಲ್ಲ. ಬಯಲನ್ನು ಶೌಚಕಾರ್ಯಕ್ಕೆ ಬಳಸುವುದರಿಂದ ಯಾವ ಸಂದರ್ಭದಲ್ಲೂ ರೋಗಗಳು ಹರಡುವ ಸಾಧ್ಯತೆಗಳಿವೆ.ಕಸಕಡ್ಡಿಗಳಿಂದ ಮುಚ್ಚಿಹೋದ ಕೆರೆ

ಧಾರ್ಮಿಕ ಕೇಂದ್ರದ ಪಕ್ಕದಲ್ಲಿಯೇ ಇರುವ ಕೆರೆ ಕಸದ ತೊಟ್ಟಿಯಂತಾಗಿದೆ. ಕೆರೆಗೆ ಹರಿದು ಬರುವ ನಾಯಿಮಟ್ಟುದ ಹಳ್ಳದ ನೀರು ಇಲ್ಲಿ ಶೇಖರಣೆಗೊಳ್ಳುತ್ತಿಲ್ಲ. ಕೆರೆಯ ಹೋಳೆತ್ತಿಸಿ ಏರಿ ನಿರ್ಮಿಸಿ ಶುಚಿಗೊಳಿಸಿದರೆ ಹಣಗೆರೆಯ ಅಂದ ಹೆಚ್ಚಾಗುತ್ತಿತ್ತು. ಆದರೆ, ಅಂಥ ಕೆಲಸಗಳಿಗೆ ಇಲ್ಲಿಯವರೆಗೂ ಕೈಹಾಕಿಲ್ಲ ಎಂಬ ಕೊರಗು ಸ್ಥಳೀಯರನ್ನು ಕಾಡುತ್ತಿದೆ.ಮುಜರಾಯಿ ಇಲಾಖೆಗೆ ಸೇರಿರುವ ಕಾರಣ ಹಣಗೆರೆ ಗ್ರಾಮ ಪಂಚಾಯ್ತಿ ಆಡಳಿತ ಇಲ್ಲಿನ ಅಗತ್ಯಗಳ ಕುರಿತ ಹೆಚ್ಚಿನ ಗಮನಹರಿಸಿಲ್ಲ ಎಂಬ ಆರೋಪಗಳಿವೆ. ವರ್ಷಕ್ಕೆ ಒಮ್ಮೆ ವಿಜೃಂಭಣೆಯಿಂದ ನಡೆಯುವ ಉರುಸ್‌ನಲ್ಲಿ ಸ್ಥಳೀಯರು ಭಾಗಿಯಾಗುತ್ತಾರೆ. ಅರಬ್ಬಿ ಶ್ಲೋಕಗಳ ಪಠಣದೊಂದಿಗೆ ಜನರಿಗೆ ಒಳ್ಳೆಯದಾಗಲಿ ಎಂದು ಮುಜಾವರ್ ಪ್ರತಿ ನಿತ್ಯ ಪ್ರಾರ್ಥಿಸುವ ಈ ಧಾರ್ಮಿಕ ಸೌಹಾರ್ದ ಕೇಂದ್ರಕ್ಕೆ ಹೆಚ್ಚು ಹಣ ಭಕ್ತರಿಂದ ಸಂಗ್ರಹವಾಗುತ್ತಿದೆ. ಇಲ್ಲಿನ ಸಮಗ್ರ ಅಭಿವೃದ್ಧಿಗೆ ತಾಲ್ಲೂಕು ಆಡಳಿತ ನೆರವಾಗಬೇಕು ಎಂಬುದು ಸ್ಥಳೀಯರು ಒತ್ತಾಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.