ವಿಶೇಷ ಒಲಿಂಪಿಕ್ಸ್‌ಗೆ ಹುಬ್ಬಳ್ಳಿಯ ಗುರು

ಬುಧವಾರ, ಜೂಲೈ 24, 2019
24 °C

ವಿಶೇಷ ಒಲಿಂಪಿಕ್ಸ್‌ಗೆ ಹುಬ್ಬಳ್ಳಿಯ ಗುರು

Published:
Updated:

ಹುಬ್ಬಳ್ಳಿ: ಉತ್ತರ ಕರ್ನಾಟಕದ ಅಂಗವಿಕಲ ಹಾಗೂ ಬುದ್ದಿಮಾಂದ್ಯ ಸಮಸ್ಯೆ ಇರುವ ಕ್ರೀಡಾಪಟುಗಳ ಪಾಲಿನ ಪ್ರತಿಭಾ ಶೋಧಕಿ, ಭಾರತಿ ಕೊಠಾರಿ ಅವರಿಗೆ ಎರಡನೇ ಬಾರಿ `ವಿಶೇಷ~ ಒಲಿಂಪಿಕ್ ಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ.  ಈ ಬಾರಿ ಅವರು ಸ್ಪರ್ಧಾಳುವಾಗಿ ಹೋಗುತ್ತಿಲ್ಲ, ಕ್ರೀಡಾಪಟುಗಳ ಪ್ರೇರಕಿಯಾಗಿ ಭಾರತ ತಂಡದೊಂದಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಜೂನ್ 25ರಿಂದ ಜುಲೈ 5ರ ವರೆಗೆ ಗ್ರೀಸ್‌ನ    ಅಥೆನ್ಸ್‌ನಲ್ಲಿ ನಡೆಯಲಿರುವ ವಿಶೇಷ ಒಲಿಂಪಿಕ್ ಕೂಟದಲ್ಲಿ ಭಾಗವಹಿಸುವ ಭಾರತ ತಂಡದ ಆರು ಮಂದಿ ಈಜುಪಟುಗಳ ತರಬೇತುದಾರರಾಗಿ ಆಯ್ಕೆಯಾಗಿರುವ ಕೊಠಾರಿ, ಹೊಸದಿಲ್ಲಿಯಲ್ಲಿ ನಡೆಯಲಿರುವ ಅಂತಿಮ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಲು ಜೂನ್ 7ರಂದು ಬೆಂಗಳೂರಿನಿಂದ ಪ್ರಯಾಣ ಬೆಳೆಸಲಿದ್ದಾರೆ.ಹುಬ್ಬಳ್ಳಿಯ ದೇಶಪಾಂಡೆ ನಗರದ ನಿವಾಸಿಯಾದ ಭಾರತಿ ಕೊಠಾರಿ ಈ ಹಿಂದೆ ನಗರಪಾಲಿಕೆಯ ಈಜುಕೊಳದಲ್ಲಿ ತರಬೇತಿ ನೀಡುತ್ತಿದ್ದರು. ಈಗ ರೈಲ್ವೆಯಲ್ಲಿ ಅಧಿಕಾರಿಗಳಿಗೆ ತರಬೇತಿ ನಡೆಸುತ್ತಿದ್ದಾರೆ.`ಸ್ಪೆಷಲ್ ಒಲಿಂಪಿಕ್ ಭಾರತ-ಕರ್ನಾಟಕ~ದ ಕ್ರೀಡಾ ನಿರ್ದೇಶಕರೂ ಆಗಿರುವ ಕೊಠಾರಿ ವಿಶೇಷ ಒಲಿಂಪಿಕ್‌ಗೆ ಸಂಬಂಧಿಸಿದ ರಾಷ್ಟ್ರೀಯ ತರಬೇತುದಾರರೂ ಆಗಿದ್ದಾರೆ. ಈಗಾಗಲೇ ಒಟ್ಟು ಏಳು ರಾಜ್ಯಗಳಲ್ಲಿ ತರಬೇತಿ ನೀಡಿರುವ ಅವರು ಜೂನ್ 9ರಂದು ನವದೆಹಲಿಯಲ್ಲಿ ಆರಂಭವಾಗಲಿರುವ ಅಂತಿಮ ಪೂರ್ವಸಿದ್ಧತಾ ಶಿಬಿರದಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಅಂತಿಮ `ಟಿಪ್ಸ್~ ನೀಡಲಿದ್ದಾರೆ. ಮೂವರು ಕೋಚ್ (ಇನ್ನಿಬ್ಬರು ಸುಂದರೇಶ ಹಾಗೂ ರತ್ನಾ) ಹಾಗೂ ಹನ್ನೆರಡು ಮಂದಿ ಅಥ್ಲೀಟ್‌ಗಳನ್ನೊಳಗೊಂಡ ಕರ್ನಾಟಕ ತಂಡ ಸೋಮವಾರ ಬೆಂಗಳೂರಿನಿಂದ ಹೊರಡಲಿದೆ. ಭಾರತದ ಒಟ್ಟು ಆರು ಮಂದಿ ಈಜುಪಟುಗಳಲ್ಲಿ ಕರ್ನಾಟಕದ ಏಕೈಕ ಈಜುಪಟು ಬೆಳಗಾವಿಯ ಆತೀಶ್ ಅಮಿತ್ ಜಾಧವ್ ಕೂಡ ಇದ್ದಾರೆ. ಭಾರತ ತಂಡ ಜೂನ್ 20ರಂದು   ಅಥೆನ್ಸ್‌ಗೆ ಪ್ರಯಾಣ ಬೆಳೆಸಲಿದೆ.2007ರಲ್ಲಿ ಚೀನಾದ ಶಾಂಘೈನಲ್ಲಿ ನಡೆದ ವಿಶೇಷ ಒಲಿಂಪಿಕ್ ಕೂಟದಲ್ಲೂ ಭಾರತ ತಂಡದೊಂದಿಗೆ ತೆರಳಿದ್ದ ಕೊಠಾರಿ, ಅಂದು ಹುಬ್ಬಳ್ಳಿ ಹುಡುಗ ರಾಜಕಿರಣ ಜನುಮಾಲ, 25 ಮೀ. ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನ ಬಾಚಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿಯೂ ಉತ್ತರ ಕರ್ನಾಟಕದ ಪ್ರತಿಭೆಯನ್ನು ಕರೆದೊಯ್ಯುತ್ತಿದ್ದು ಫ್ರೀಸ್ಟೈಲ್ ಹಾಗೂ ಬಟರ್‌ಫ್ಲೈ ವಿಭಾಗದಲ್ಲಿ ಸ್ಪರ್ಧಿಸುವ ಆತೀಶ್ ಜಾಧವ ಮೇಲೆ ಭರವಸೆ ಇರಿಸಿದ್ದಾರೆ. ವಿಶೇಷ ಒಲಿಂಪಿಕ್ ಕೋಚ್ ಆಗಿ ಹೋಗುತ್ತಿರುವ ಉತ್ತರ ಕರ್ನಾಟಕದ ಏಕೈಕ ವ್ಯಕ್ತಿ ಕೂಡ ಆಗಿದ್ದಾರೆ ಕೊಠಾರಿ. `ಎಲ್ಲ ಸ್ಪರ್ಧಾಳುಗಳು ಕೂಡ ವಿಜೇತರು~ ಎಂಬ ವಿಶಾಲ ಆಶಯದೊಂದಿಗೆ ನಡೆಯುವ ವಿಶ್ವದ ಏಕೈಕ ಕ್ರೀಡಾಕೂಟವಾದ ವಿಶೇಷ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಕೊಠಾರಿ ವಿಶೇಷ ಕ್ರೀಡಾಪಟುಗಳ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದಾರೆ.ಬೆಂಗಳೂರಿಗೆ ತೆರಳುವ ಸಿದ್ಧತೆಯ ನಡುವೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕೊಠಾರಿ, ಅಂಗವಿಕಲರು ಹಾಗೂ ಮಾನಸಿಕ ಸಮಸ್ಯೆಯುಳ್ಳ  ಕ್ರೀಡಾಪಟುಗಳು ಖಾಲಿ ಕಾಗದವಿದ್ದಂತೆ. ಅವರಿಗೆ ಉತ್ತಮ ತರಬೇತಿ ನೀಡಿದರೆ ಉತ್ತಮ ಫಲಿತಾಂಶ ಖಚಿತ ಎಂದು ಹೇಳಿದರು.`ಕ್ರೀಡೆಯಿಂದ ಅನೇಕ ಸಮಸ್ಯೆ ಪರಿಹರಿಸಲು ಸಾಧ್ಯ. ವೈದ್ಯರು ಕೈಬಿಟ್ಟವರನ್ನೂ ಕ್ರೀಡಾ ತರಬೇತಿ  ಮೂಲಕ ಸಹಜ ಸ್ಥಿತಿಗೆ ತಂದಿದ್ದೇನೆ. ಇದನ್ನು ಕಂಡು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ವ್ಯಕ್ತಿಯನ್ನು ಜೀವನದ ಮುಖ್ಯಧಾರೆಗೆ ಕರೆತರಲು ಕ್ರೀಡೆ ಸಹಕಾರಿಯಾಗುತ್ತದೆ~ ಎನ್ನುತ್ತಾರೆ ಭಾರತಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry