ಗುರುವಾರ , ಜೂನ್ 17, 2021
29 °C
ಅಕಾಲಿಕ ಮಳೆಗೆ ₨700 ಕೋಟಿ ಹಾನಿ: ಸಿ.ಎಂ.

ವಿಶೇಷ ಪ್ಯಾಕೇಜ್‌ಗೆ ಕೇಂದ್ರಕ್ಕೆ ಮೊರೆ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ/ಬೆಳಗಾವಿ: ‘ರಾಜ್ಯದ 13 ಜಿಲ್ಲೆಗಳಲ್ಲಿ ಸುರಿದ ಅಕಾಲಿಕ ಮಳೆಯಿಂದ ₨ 700 ಕೋಟಿ ಮೌಲ್ಯದ ಬೆಳೆ ಹಾನಿ­ಯಾಗಿದ್ದು, ಪರಿಹಾರದ ವಿಶೇಷ ಕೊಡುಗೆ (ಪ್ಯಾಕೇಜ್‌) ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸ­ಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಅಕಾಲಿಕ ಮಳೆಯಿಂದ ಬೆಳೆ ಹಾನಿಯಾದ ಬೆಳಗಾವಿ ಮತ್ತು ವಿಜಾಪುರ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿ, ಹಾನಿ ಪರಿಶೀಲಿಸಿದ ನಂತರ ಅವರು ಈ ಮಾಹಿತಿ ನೀಡಿದರು.‘ರಾಜ್ಯ ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಬೇಕು ಎಂಬ ರೈತರ ಬೇಡಿಕೆ ಕುರಿತು ಚುನಾವಣಾ ಆಯೋಗ­ದೊಂದಿಗೆ ಚರ್ಚಿಸಲಾ­ಗುವುದು’ ಎಂದು ಹೇಳಿದರು.‘ರೈತರ ಸಾಲ ಮನ್ನಾ ಮಾಡಬೇಕು ಎಂಬ ಬೇಡಿಕೆ ಇದೆ. ಹಾನಿಯ ಸಮಗ್ರ ವರದಿ ಬರಲಿ. ಚುನಾವಣೆಯ ನಂತರ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.‘ಮಳೆಯಿಂದ ರಾಜ್ಯದಲ್ಲಿ 1.68 ಲಕ್ಷ ಹೆಕ್ಟೇರ್‌ ಕೃಷಿ ಬೆಳೆ ಹಾಗೂ 15 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನಂತೆ ₨ 700 ಕೋಟಿ ಹಾನಿಯಾಗಿದ್ದು, ವಿಜಾಪುರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಆರು ಜನ ಸೇರಿದಂತೆ 23 ಜನರು ಮಳೆಗೆ ಬಲಿಯಾಗಿದ್ದಾರೆ’ ಎಂದರು.‘ಬೆಳೆ ಹಾನಿಗೆ ಈಗಿರುವ ನಿಯಮಾವಳಿಯಂತೆ ಹೆಕ್ಟೇರ್‌ಗೆ ₨12,000 ಮಾತ್ರ ಪರಿಹಾರ ನೀಡಲು ಅವಕಾಶ ಇದ್ದು, ಕೇಂದ್ರ ಸರ್ಕಾರದಿಂದ ನಮಗೆ ಕೇವಲ ₨ 109 ಕೋಟಿ ಅನುದಾನ ಸಿಗಲಿದೆ. ಇದು ಯಾವುದಕ್ಕೂ ಸಾಲದು. ಬೆಳೆ ಹಾನಿ ಪರಿಹಾರ ಮೊತ್ತ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಂಗಳವಾರ (ಇದೇ 11ರಂದು) ಪ್ರಸ್ತಾವ ಸಲ್ಲಿಸಿದ್ದು, ಶೀಘ್ರವೇ ಕೇಂದ್ರದಿಂದ ಅಧ್ಯಯನ ತಂಡ ಬರುವ ನಿರೀಕ್ಷೆ ಇದೆ. ಜನ–ಜಾನುವಾರುಗಳ ಪ್ರಾಣ ಹಾನಿ, ಮನೆಗಳ ಹಾನಿಗೆ ಪರಿಹಾರ ನೀಡಿದ್ದೇವೆ’ ಎಂದು ಹೇಳಿದರು.‘ಚುನಾವಣೆ ಪ್ರಕ್ರಿಯೆ ನಡೆಯು­ತ್ತಿದ್ದರೂ ಹಾನಿ ಸಮೀಕ್ಷೆ ಹಾಗೂ ಪರಿಹಾರ ನೀಡಿಕೆಯಲ್ಲಿ ಯಾವುದೇ ವಿಳಂಬ ಆಗುವುದಿಲ್ಲ’ ಎಂದು ಮುಖ್ಯಮಂತ್ರಿಗಳು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.