ಗುರುವಾರ , ಮಾರ್ಚ್ 4, 2021
20 °C
ಆಲಿಕಲ್ಲು ಮಳೆಯಿಂದ ಬೆಳೆ ನಷ್ಟ; ರೈತರ ಎಚ್ಚರಿಕೆ

ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹ

ಗಾಣಧಾಳು ಶ್ರೀಕಂಠ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶೇಷ ಪ್ಯಾಕೇಜ್ ಘೋಷಿಸಲು ಆಗ್ರಹ

ಚಿತ್ರದುರ್ಗ: ಬಿರುಗಾಳಿ, ಆಲಿಕಲ್ಲು ಮಳೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಳೆದುಕೊಂಡಿರುವ ರೈತರು, ಬೆಳೆ ನಷ್ಟ ಪರಿಹಾರಕ್ಕಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ  ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.ಆಲಿಕಲ್ಲು ಮಳೆಗೆ ಬೆಳೆ ಕಳೆದುಕೊಂಡಿರುವ ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ತೋಟಗಾರಿಕಾ ಬೆಳೆಗಾರರು ಸೋಮವಾರ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಅವರನ್ನು ಭೇಟಿಯಾಗಿ ತಮ್ಮ ಹೋಬಳಿಯಲ್ಲಿ ಆಗಿರುವ ಬೆಳೆ ನಷ್ಟದ ವಿವರಣೆ ನೀಡಿ, ವಿಶೇಷ ಕೊಡುಗೆ (ಪ್ಯಾಕೇಜ್) ನೀಡಬೇಕೆಂದು ಒತ್ತಾಯಿಸಿದ್ದಾರೆ.ಮನವಿ ನೀಡಿದ ನಂತರ ಪತ್ರಿಕೆ ಜತೆ ಮಾತನಾಡಿದ ಹರಿಯಬ್ಬೆ ರೈತ ಸಿದ್ದೇಶ್, ‘ಸರ್ಕಾರ ಬೆಳೆ ನಷ್ಟಕ್ಕಾಗಿ ನೀಡುತ್ತಿರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಕೇವಲ ಫಸಲು ಹಾಳಾಗಿದ್ದಕ್ಕೆ ಬೆಲೆ ಕಟ್ಟುತ್ತಿರುವ ಸರ್ಕಾರದ ಕ್ರಮ ಸರಿಯಲ್ಲ. ಒಬ್ಬೊಬ್ಬ ರೈತರು ನಾಲ್ಕರಿಂದ ಐದು ಲಕ್ಷ ರೂಪಾಯಿ ಮೊತ್ತದ ಪಪ್ಪಾಯಿ ಬೆಳೆಯನ್ನು ಕಳೆದುಕೊಂಡಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಎಕರೆಗೆ ಐದು– ಹತ್ತು ಸಾವಿರ ಪರಿಹಾರ ನೀಡಿದರೆ, ಬೆಳೆಗಾರರು ವಿಷ ಕುಡಿಯ­ಬೇಕಾಗುತ್ತದೆ’ ಎಂದು ನೋವು ತೋಡಿಕೊಂಡರು.‘ನಮಗೆ ರಾಷ್ಟ್ರೀಯ ವಿಕೋಪ ಪರಿಹಾರ ನೀಡುತ್ತಿರುವ ಬೆಳೆ ಹಾನಿ ಪರಿಹಾರ ಬೇಡ. ವಿದರ್ಭ ಮಾದರಿಯಂತಹ ವಿಶೇಷ ಪ್ಯಾಕೇಜ್ ಬೇಕು. ಏಕೆಂದರೆ, ಬೆಳೆ ಕಳೆದುಕೊಂಡು ನೋವಿನಲ್ಲಿರುವಾಗಲೇ ಬ್ಯಾಂಕ್ ಅಧಿಕಾರಿಗಳು ನಮ್ಮ ಮನೆ ಬಾಗಿಲು ಸಾಲ ಕಟ್ಟುವಂತೆ ಮನೆಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಸರ್ಕಾರ ಕೂಡಲೇ ಪ್ಯಾಕೇಜ್ ಘೋಷಿಸಬೇಕು. ಇಲ್ಲದಿದ್ದರೆ ನಾವು ಯಾರೂ ಚುನಾವಣೆಯಲ್ಲಿ ಮತ ಹಾಕುವುದಿಲ್ಲ ಎಂದು ಜಿಲ್ಲಾಧಿಕಾರಿಗೆ ತಿಳಿಸಿದ್ದಾಗ ಅವರು ಹೇಳಿದರು.ಲೆಕ್ಕಾಚಾರ ಬೇಡ

ಪತ್ರಿಕೆ ಜೊತೆ ಮಾತನಾಡಿದ ಮತ್ತೊಬ್ಬ ರೈತ ಮುಂಗುಸುವಳ್ಳಿಯ ತಿಮ್ಮರಾಜು, ‘ಫಸಲಿಗೆ ಬಂದಿದ್ದ ಪಪ್ಪಾಯಿ ಗಿಡಗಳು ಹಣ್ಣು, ಎಲೆ, ಗಿಡದ ಸುಳಿ ಸಮೇತ ಆಲಿಕಲ್ಲು ಮಳೆಗೆ ನಾಶವಾಗಿವೆ. ಏಳೆಂಟು ತಿಂಗಳ ಹಿಂದೆ, ಪ್ರತಿ ಸಸಿಗೆ ₨ ೧೫ ನೀಡಿ ಪಪ್ಪಾಯ ಗಿಡ ಖರೀದಿಸಿದ್ದೆ.  ಗೊಬ್ಬರ, ಔಷಧಿ, ಕೂಲಿ, ಕಳೆ, ನೀರು ಎಂದು ಕಳೆದ ಏಳೆಂಟು ತಿಂಗಳಿಂದ ಪ್ರತಿ ಪಪ್ಪಾಯಿ ಗಿಡದ ಮೇಲೆ ₨ ೨೦೦ ಹಣ ಖರ್ಚು ಮಾಡಿದೆ. ಪ್ರತಿ ಗಿಡದಿಂದ ನಮಗೆ ಕನಿಷ್ಠ ಎಂದರೂ ಒಂದುವರೆ ಸಾವಿರ ರೂಪಾಯಿ ಹಣ ಬರುತ್ತಿತ್ತು. ಈಗ ಇದೇ ಲೆಕ್ಕಾಚಾರದಲ್ಲಿ ಪರಿಹಾರದ ಹಣ ನೀಡಬೇಕು. ನಮಗೆ ಸರ್ಕಾರದ ಪರಿಹಾರ ಬೇಡ’ ಎಂದಿದ್ದಾರೆ. ನೀತಿ ಸಂಹಿತೆ ನೆಪ ಏಕೆ 

ತೋಟಗಾರಿಕಾ ಅಧಿಕಾರಿಗಳು ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಸರ್ಕಾರಕ್ಕ ವರದಿ ಸಲ್ಲಿಸಿದ್ದಾರೆ. ಆದರೆ ಸರ್ಕಾರ ಈಗ ಚುನಾವಣಾ ನೀತಿ ಸಂಹಿತೆ ನೆಪ ಹೇಳುತ್ತಿದೆ. ಪ್ರಕೃತಿ ವಿಕೋಪ ಪರಿಹಾರ, ಬರ ನಿರ್ವಹಣೆಯಂತಹ ತುರ್ತು ಕಾರ್ಯಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎನ್ನುವ ನಿಯಮಗಳಿವೆ. ನಮಗೆ ಇದು ಅನ್ನದ ಪ್ರಶ್ನೆ. ಹಾಗಾಗಿ ಯಾವ ಚುನಾವಣೆ­ಯೂ ನಮಗೆ ಬೇಡ. ಮೊದಲು ಮುಖ್ಯಮಂತ್ರಿ ಅವರು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.2000 ಪಪ್ಪಾಯಿ ಗಿಡಗಳು ನಾಶ

ಆಲಿಕಲ್ಲು ಮಳೆಗೆ 2000 ಅಡಿಕೆ, 2000 ಪಪ್ಪಾಯಿ ಗಿಡಗಳು ನಾಶವಾಗಿದೆ. ಎಲ್ಲವೂ ಫಸಲು ತುಂಬಿದ್ದ ಮರಗಳು. ಸರ್ಕಾರ ಈಗ ಫಸಲಿಗಷ್ಟೇ ಹಣ ನೀಡುತ್ತಿದೆ. ನಾವು ಇಡೀ ಗಿಡಕ್ಕೆ ಪರಿಹಾರ ಕೇಳುತ್ತಿದ್ದೇವೆ. ಧರ್ಮಪುರ, ಮುಂಗಸವಳ್ಳಿ, ಕಣಜನಹಳ್ಳಿ, ಶ್ರವಣಗೆರೆ ಸುತ್ತ ನೂರಾರು ಎಕರೆ ತೋಟಗಾರಿಕಾ ಬೆಳೆ ನಾಶವಾಗಿತ್ತದೆ. ಸರ್ಕಾರವೇ ಅಂದಾಜಿಸಿರುವಂತೆ ಬೆಳೆ ನಷ್ಟದ ಮೊತ್ತ ಚಿತ್ರದುರ್ಗ ಜಿಲ್ಲೆಯದ್ದು ಅಂದಾಜು ₨ 20 ಕೋಟಿ. ಹಾಗಾಗಿ ನಮಗೆ ತುರ್ತಾಗಿ ಪ್ಯಾಕೇಜ್ ಘೋಷಣೆಯಾಗಬೇಕು. ಇಲ್ಲದಿದ್ದರೆ ಖಂಡಿತಾ ಬೆಳೆ ಕಳೆದುಕೊಂಡಿರುವವರೆಲ್ಲ ಚುನಾವಣೆ ಬಹಿಷ್ಕರಿಸುತ್ತೇವೆ. ಅಷ್ಟೇ ಅಲ್ಲ, ಚುನಾವಣಾ ಪ್ರಚಾರಕ್ಕೆ ಬರುವವರಿಗೂ ಘೇರಾವ್ ಹಾಕುತ್ತೇವೆ.


– ಕೆ.ಎಸ್. ಸಿದ್ದೇಶ್ವರ ಕೋಟಿ, ಹರಿಯಬ್ಬೆ,    ತಿಮ್ಮರಾಜು, ಮುಂಗುಸವಳ್ಳಿ, ಹಿರಿಯೂರು ತಾಲ್ಲೂಕು


 


ಆಯೋಗದ ಅನುಮತಿ ಪಡೆಯಬೇಕು


ಪ್ರಕೃತಿ ವಿಕೋಪದಿಂದ ಸತ್ತವರಿಗೆ, ಮನೆ ಕಳೆದುಕೊಂಡವರಿಗೆ, ಮೇವು, ನೀರು ಬರ ಪರಿಹಾರಕ್ಕೆ ನೀತಿ ಸಂಹಿತಿ ಅಡ್ಡಿಯಾಗುವುದಿಲ್ಲ. ಆದರೆ ಬೆಳೆ ನಷ್ಟ ಪರಿಹಾರಕ್ಕೆ ಮಾತ್ರ ಚುನಾವಣಾ ಆಯೋಗದ ಅನುಮತಿ ಬೇಕು. ಆಯೋಗ ಅನುಮತಿ ನೀಡಿ, ಸರ್ಕಾರ ಹಣ ಬಿಡುಗಡೆ ಮಾಡಿದರೆ, ರೈತರಿಗೆ ವಿತರಿಸುತ್ತೇವೆ. 


– ವಿ.ಪಿ.ಇಕ್ಕೇರಿ, ಜಿಲ್ಲಾಧಿಕಾರಿ, ಚಿತ್ರದುರ್ಗ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.