ಮಂಗಳವಾರ, ಜನವರಿ 21, 2020
29 °C

ವಿಶೇಷ ಮಕ್ಕಳಿಗೆ ‘ಸ್ವಸ್ಥ’ ಆರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಂಟಿಕೊಪ್ಪ: ಅಂಗವಿಕಲರಲ್ಲಿ ನ್ಯೂನ್ಯತೆಯನ್ನು ಮರೆಮಾಚಿ ಎಲ್ಲರಂತೆ ನಾವು ಸಮಾನರು ಎಂಬ ಭಾವನೆಯೊಂದಿಗೆ ಏನು ಬೇಕಾದರೂ ಸಾಧಿಸಬಲ್ಲೆವು ಎಂಬ ಮನಸ್ಥೈರ್ಯ ಬೆಳೆಸುವ ನಿಟ್ಟಿನಲ್ಲಿ ಆರಂಭವಾದ ಸಂಸ್ಥೆಯೇ ಸುಂಟಿಕೊಪ್ಪದ ‘ಸ್ವಸ್ಥ’.

ಕೂರ್ಗ್‌ ಫೌಂಡೇಶನ್‌ ಹಾಗೂ ಟಾಟಾ ಕಾಫಿ ಸಂಸ್ಥೆಯ ಆಶ್ರಯದಲ್ಲಿ 2003ರ ಆಗಸ್ಟ್‌ 23ರಂದು ಆರಂಭಗೊಂಡ ಸಂಸ್ಥೆ ಇಂದು 100ಕ್ಕೂ ಅಧಿಕ ಅಂಗವಿಕಲ ಮಕ್ಕಳಿಗೆ ವಿದ್ಯಾಭ್ಯಾಸ ಹಾಗೂ ವಸತಿ ಸೌಕರ್ಯವನ್ನು ನೀಡುತ್ತಿದೆ.‘ಅಂಗವಿಕಲ ಮಕ್ಕಳ ಪುನಶ್ಚೇತನದ ಉದ್ದೇಶದಿಂದ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಮಾಜದಲ್ಲಿ ತಿರಸ್ಕೃತಗೊಂಡ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸಲಾಗುತ್ತಿದೆ’ ಎಂದು ಸ್ವಸ್ಥ ಸಂಸ್ಥೆಯ ಪ್ರಾಂಶುಪಾಲ ಗಂಗಾ ಚೆಂಗಪ್ಪ ಹೇಳಿದರು.ಶಾಲೆಯ ಮಕ್ಕಳು ರಾಷ್ಟ ಹಾಗೂ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ.ಸುಂಟಿಕೊಪ್ಪದಲ್ಲಿ ಸ್ವಾಸ್ಥ ಶಾಲೆಯಲ್ಲಿ 3ರಿಂದ 18 ವರ್ಷ ದೊಳಗಿನ ಮಕ್ಕಳಿಗೆ ದೈನಂದಿನ ಕಾರ್ಯಚಟುವಟಿಕೆ ಬಗ್ಗೆ ತಿಳಿಸುವ ಜೊತೆಗೆ ವಿಶೇಷ ಶಿಕ್ಷಣ ನೀಡಲಾಗುತ್ತದೆ.18 ವರ್ಷ ತುಂಬಿದವರನ್ನು ಪುನಶ್ಚೇತನ ಕೇಂದ್ರಗಳಲ್ಲಿ ಆರ್ಥಿಕವಾಗಿ ಸ್ವಾವಲಂಬಿಯಾಗಲು ಕರಕುಶಲ ತರಬೇತಿ ನೀಡಲಾಗುತ್ತದೆ ಎಂದರು.ಸಂಸ್ಥೆ ಪಾಲಿಬೆಟ್ಟದಲ್ಲಿ ಮತ್ತೊಂದು ಶಾಖೆಯನ್ನು ಆರಂಭಿಸಲಾಗಿದ್ದು, ಅಲ್ಲಿ 18 ವರ್ಷ ಪೂರೈಸಿದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.ಅಂಗವಿಕಲರಿಗೆ ಪ್ರಥಮ ಹಂತವಾಗಿ ಅಗತ್ಯ ವಿಷಯಗಳ ಬಗ್ಗೆ ಮಾದರಿ ರೂಪದಲ್ಲಿ ಕಲಿಸಲಾಗುವುದು. ಬಳಿಕ ಮಕ್ಕಳ ವಯಸ್ಸಿಗನುಗುಣವಾಗಿ ಪ್ರತ್ಯೇಕವಾಗಿ ಕಲಿಕಾ ವ್ಯವಸ್ಥೆ ರೂಪಿಸಲಾಗಿದೆ. ಪಠ್ಯ ವಿಷಯದ ಜೊತೆಗೆ ಯೋಗ, ನೃತ್ಯ, ಚಿತ್ರಕಲೆ, ಸೇರಿದಂತೆ ಇನ್ನಿತರ  ಪಠ್ಯೇತರ ಚಟುವಟಿಕೆಗೂ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.ಪುನರ್ವಸತಿ ಕೇಂದ್ರಗಳಲ್ಲಿ ಮಕ್ಕಳು ಇಷ್ಟ ಪಡುವ ವಿಷಯದ ಕುರಿತು ತಜ್ಞರು ಈ ಬಗ್ಗೆ ತರಬೇತಿ ನೀಡುವರು. ಹೊಲಿಗೆ, ಪ್ಯಾಷನ್‌ ಡಿಸೈನರ್‌, ಸ್ಕ್ರೀನ್‌ ಪ್ರಿಂಟಿಂಗ್‌, ಫೈಲ್‌ ತಯಾರಿಕೆ ಸೇರಿದಂತೆ ಮತ್ತಿತರರ ತರಬೇತಿ ನಿಡಲಾಗುವುದು ಎಂದು ಹೇಳಿದರು.ಅಂಗವಿಕಲರಿಗೆ ಶಾಲೆಯಲ್ಲಿ ಉಚಿತ ಪ್ರವೇಶ, ಸಮವಸ್ತ್ರ, ಶಿಕ್ಷಣ, ಸಾರಿಗೆ ವೆಚ್ಚ, ವೈದ್ಯಕೀಯ ತಪಾಸಣಾ ವೆಚ್ಚ ಸೇರಿದಂತೆ ಸಾಕಷ್ಟು ಸೌಲಭ್ಯ ನೀಡಲಾಗಿದೆ.ಯೋಜನೆಗಳ ಜಾರಿ; ಅಧಿಕಾರಿಗಳ ಅಸಹಕಾರ (ಮಡಿಕೇರಿ ವರದಿ): ‘ಅಂಗವಿಕಲರನ್ನು ಸಶಕ್ತಗೊಳಿಸಲು ಸರ್ಕಾರ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆದರೆ, ಅಧಿಕಾರಿಗಳ ‘ಲಂಚ’ದ ಪ್ರಭಾವದಿಂದಾಗಿ ಅಂಗವಿಕಲರಿಗೆ ಸಲ್ಲಬೇಕಾದ ಪ್ರಯೋಜನಗಳು ದಕ್ಕುತ್ತಿಲ್ಲ’ ಎಂದು ಪೋಷಕರು ದೂರಿದರು.ಅಂಗವೈಕಲ್ಯತೆಯ ಪ್ರಮಾಣವನ್ನು ಗುರುತಿಸಬೇಕಾದ ಸರ್ಕಾರಿ ವೈದ್ಯರಿಂದ ಹಿಡಿದು ಮಾಸಾಶನ ಮಂಜೂರು ಮಾಡಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳವರೆಗೆ ಎಲ್ಲರೂ ‘ಲಂಚ’ಕ್ಕೆ ಕೈಯೊಡ್ಡುತ್ತಿದ್ದಾರೆ. ಕಣ್ಣು ಮುಂದೆ ನಿಂತಿರುವ ಅಂಗವಿಕಲನನ್ನು ನೋಡಿ ದೃಢೀಕರಿಸಲು ಲಂಚ ಕೊಡಬೇಕೆ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.  ಸರ್ಕಾರದ ನಿಯಮಾವಳಿ ಪ್ರಕಾರ ದಾಖಲೆಗಳನ್ನು ಹಾಗೂ ವಿವರಣೆಗಳನ್ನು ಪಡೆದುಕೊಳ್ಳಲಿ. ಆದರೆ, ಎಲ್ಲ ದಾಖಲೆಗಳನ್ನು ನೀಡಿದ ನಂತರವೂ ಏಕೆ ಅಧಿಕಾರಿಗಳು ಓಡಾಡಿಸುತ್ತಾರೆ ಎಂದು ಅಳಲು ತೋಡಿಕೊಂಡರು.ಶೇ 75ಕ್ಕಿಂತ ಹೆಚ್ಚಿನ ಅಂಗವೈಕಲ್ಯ ಹೊಂದಿದವರಿಗೆ ಮಾಸಿಕ ₨ 1,200 ಮಾಸಾಶನ ನೀಡಲಾಗುತ್ತಿದೆ. ಬಸ್‌ ಪ್ರಯಾಣ ದರದಲ್ಲಿ ರಿಯಾಯಿತಿ, ಸರ್ಕಾರಿ ನೇಮಕಾತಿಯಲ್ಲಿ ಮೀಸಲಾತಿ ಇತರ ಸೌಲಭ್ಯಗಳನ್ನು ಸರ್ಕಾರ ಮಾಡಿಕೊಟ್ಟಿದೆ. ಆದರೆ, ಇವುಗಳನ್ನು ಜಾರಿಗೊಳಿಸುವ ಅಧಿಕಾರಿಗಳಲ್ಲಿ ಆ ಬದ್ಧತೆ ಕಾಣುತ್ತಿಲ್ಲ ಎಂದರು.‌

ಪ್ರತಿಕ್ರಿಯಿಸಿ (+)