ಭಾನುವಾರ, ನವೆಂಬರ್ 17, 2019
29 °C

ವಿಶೇಷ ಮಕ್ಕಳ ಸಂಜೀವಿನಿ

Published:
Updated:

`ನಮ್ಮ ಸಲೀಂನನ್ನ ನೋಡ್ರಿ, ಗೋಲ್ಡ್‌ಮೆಡಲ್ ತೊಗೊಂಡು ಬಂದಾನ...~

ರಾಘವೇಂದ್ರ ಓಕಡೆಯವರ ಧ್ವನಿ ಗದ್ಗದಿತವಾಗಿತ್ತು. ಕಂಗಳಲ್ಲಿ ಹೆಮ್ಮೆಯ ಹನಿಗಳಿದ್ದವು. ಎದುರಿಗೆ ನಿಂತಿದ್ದ ಸಲೀಂ ಅಂತರರಾಷ್ಟ್ರೀಯ ವಿಶೇಷ ಮಕ್ಕಳ ಈಜು ಸ್ಪರ್ಧೆಯಲ್ಲಿ ಗೆದ್ದುಬಂದಿದ್ದ ಪದಕಗಳನ್ನು ಕೊರಳಿಗೆ ಹಾಕಿಕೊಂಡು ನಿಂತಿದ್ದ.ಬುದ್ಧಿಮಾಂದ್ಯನೆಂದು `ಉಷಸ್ ಶಾಲೆ~ಗೆ ಸೇರಿಸಲಾಗಿದ್ದ ಸಲೀಂ `ವಿಶೇಷ~ ವ್ಯಕ್ತಿಯಾಗಿದ್ದ. ಆತನನ್ನು ವಿಶೇಷ ಮಾಡಿದ್ದು ರಘು ಮತ್ತು ರೂಪಾ ಓಕಡೆ ದಂಪತಿ.ಸಲೀಂನಂತಹ ಹಲವು ಹುಡುಗರ, ಮಕ್ಕಳ ಬಾಳಿಗೆ ಬೆಳಕಾಗಿದ್ದ ರಘು ಓಕಡೆ, ಕಳೆದ ಮೇ 30ರಂದು ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಜಗದ ವ್ಯವಸ್ಥೆಯನ್ನು ಹೆಜ್ಜೆಹೆಜ್ಜೆಗೂ ಪ್ರಶ್ನಿಸುತ್ತಲೇ, ಪ್ರವಾಹದ ವಿರುದ್ಧ ಈಜಿದವರು ಅವರು.ವಿಶೇಷ ಮಕ್ಕಳಲ್ಲಿಯೇ ದೇವರನ್ನು ಕಂಡವರು.ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದರೂ ಹುಬ್ಬಳ್ಳಿಗನಾಗಿಬಿಟ್ಟಿದ್ದರು. ವಿಶೇಷ ಮಕ್ಕಳು ಮತ್ತು ಮನೋದೌರ್ಬಲ್ಯವಿರುವ ಮಕ್ಕಳ ಪಾಲಿಗಂತೂ ಸಂಜೀವಿನಿಯಾಗಿದ್ದರು. ಮನಸ್ಸು ಮಾಡಿದ್ದರೆ ವಿದೇಶದಲ್ಲಿ ಉನ್ನತ ಹುದ್ದೆಯಲ್ಲಿ ಆರಾಮವಾಗಿ ಇದ್ದುಬಿಡಬಹುದಿತ್ತು.

 

ಆದರೆ ಬೇರೆಯವರಿಗೆ ಮಾದರಿಯಾಗುವಂತಹ ಹೆಜ್ಜೆಗುರುತುಗಳನ್ನು ಬಿಟ್ಟುಹೋಗಬೇಕು ಎನ್ನುವ ತುಡಿತಕ್ಕೆ ಜೀವನವನ್ನು ಮೀಸಲಾಗಿಟ್ಟರು. ಅವರು ಕಟ್ಟಿ ಬೆಳೆಸಿದ `ಉಷಸ್ ವಿಶೇಷ ಮಕ್ಕಳ ಶಾಲೆ~ ಹುಬ್ಬಳ್ಳಿಯ ಗೋಕುಲ ರಸ್ತೆಯ ವಿನಾಯಕನಗರದಲ್ಲಿ ತಲೆ ಎತ್ತಿ ನಿಂತಿದೆ. ಪ್ರೀತಿ, ವಾತ್ಸಲ್ಯ, ತ್ಯಾಗ, ಮಮತೆ, ಸೃಜನಶೀಲತೆಗಳ ಅಡಿಪಾಯದ ಮೇಲೆ ಈ ಶಾಲೆ ನಿರ್ಮಾಣವಾಗಿದೆ. ಎರಡು ದಶಕಗಳಲ್ಲಿ ದೊಡ್ಡ ಸಾಧನೆ ಮಾಡಿದೆ.ಬುದ್ಧಿಮಾಂದ್ಯತೆಯ ಹಣೆಪಟ್ಟಿಯೊಂದಿಗೆ ಪರಾವಲಂಬನೆಯ ದುಸ್ತರ ಬದುಕಿನ ಮಕ್ಕಳು, ಹೆತ್ತವರು ಮತ್ತು ಒಡಹುಟ್ಟಿದವರಿಗೆ ಸವಾಲಾಗುವುದೇ ಹೆಚ್ಚು. ಆದರೆ ಆ ಸವಾಲನ್ನು ತಮ್ಮ ಮೇಲೆ ಎಳೆದುಕೊಂಡ ರಘು ಮತ್ತು ರೂಪಾ ಮಕ್ಕಳ ಬದುಕನ್ನು ಹಸನಾಗಿಸಿದರು.ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಿ ಬಾಳುವ ಅವಕಾಶ ಈ ಮಕ್ಕಳಿಗೂ ಇದೆ ಎಂದು ವಾದಿಸುತ್ತ- ಟೀಕೆ ಟಿಪ್ಪಣಿಗಳನ್ನು ಎದುರಿಸುತ್ತಲೇ ಹೊಸದನ್ನು ಮಾಡುವತ್ತಲೇ ದುಡಿದರು. ಅದರ ಫಲವೇ `ವಿಶೇಷ ಮಕ್ಕಳ ಉದ್ಯೋಗ ಪರ್ವ~.ದೈನಂದಿನ ಬದುಕಿನ ಕೌಶಲಗಳನ್ನು ಕಲಿಸಿ ಹೊರ ಕಳಿಸುವ ಬಹಳಷ್ಟು ಶಾಲೆಗಳಿವೆ.ಆದರೆ, ಹದಿನೆಂಟರ ನಂತರದ ಜೀವನವೇ ಮಹತ್ವದ್ದು. ಈ ಹಂತದಲ್ಲಿಯೇ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎನ್ನುವ ರಘು ಅವರ ತುಡಿತ ಪ್ರಸ್ತುತ ಹನ್ನೆರಡು ಮಕ್ಕಳ ಸುಂದರ ಬದುಕಿಗೆ ಹಾದಿ ಮಾಡಿಕೊಟ್ಟಿದೆ.ಪ್ರಾಣಿಜನ್ಯ ಕೊಬ್ಬು ಅಥವಾ ಮತ್ತಿತರ ರಾಸಾಯನಿಕಗಳಿಲ್ಲದ ಹರ್ಬಲ್ ಸಾಬೂನುಗಳು ಮತ್ತು ಪರಿಸರ ಸ್ನೇಹಿ ಚೀಲಗಳನ್ನು ತಯಾರಿಸುವ ಪುಟ್ಟ ಫ್ಯಾಕ್ಟರಿ ಈಗ ಉಷಸ್‌ನಲ್ಲಿ ಕ್ರಿಯಾಶೀಲವಾಗಿದೆ. ಬುದ್ಧಿಮಾಂದ್ಯದ ಸಮಸ್ಯೆಯ ಜೊತೆಗೆ ಅಂಗವೈಕಲ್ಯವಿರುವ ಮಕ್ಕಳೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ.

 

ಸಲೀಂ, ಸುಷ್ಮಾ, ನಿತಿನ್ ಪೈ, ವೀರೇಂದ್ರ, ಅಭಿಷೇಕ್, ಸಂಕೇತ್, ಅರ್ಪಿತಾ, ಸಂಕೇತ್, ಸುದರ್ಶನ, ಸತೀಶ, ನೋಯೆಲ್- ಇವರೆಲ್ಲ ಈ ಕಾರ್ಖಾನೆಯ ಮಾಲೀಕರು, ಕಾರ್ಮಿಕರು ಎಲ್ಲವೂ. ವಯಸ್ಸು ದೊಡ್ಡದಿದ್ದರೂ, ಎಳೆಯಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನು ಇವರು ಮೀರಿಲ್ಲ. ಆದರೆ, ಇವರೂ ಸ್ವಾವಲಂಬಿಗಳು.ಹೋದ ವರ್ಷ ಏಪ್ರಿಲ್‌ನಲ್ಲಿಯೇ ಈ ಮಕ್ಕಳು ತಮ್ಮ ಮೊದಲ ಪಗಾರ ಪಡೆದು ಸಂಭ್ರಮಿಸಿದ್ದಾರೆ. ವರ್ಷಕ್ಕೊಂದು ಬಾರಿ ಲಾಭಾಂಶವನ್ನು ಮಕ್ಕಳಿಗೆ ಹಂಚುವ ಉದ್ದೇಶ ರಘು ಓಕಡೆಯವರಿಗಿತ್ತು. ಇರುವುದೆಲ್ಲವ ಬಿಟ್ಟು...


ಎಂಬಿಎ ಸ್ನಾತಕೋತ್ತರ ಪದವೀಧರರಾಗಿದ್ದ ರಘು ಅತ್ಯುತ್ತಮ ವಾಗ್ಮಿ. ನೊಂದವರಿಗೆ ಸಾಂತ್ವನ ಹೇಳುವ, ಯುವಜನತೆಯ ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ನೀಡಿ, ಮನಸ್ಸಿಗೆ ಚಿಕಿತ್ಸೆ ನೀಡಬಲ್ಲ ಶಕ್ತಿ ಅವರಲ್ಲಿತ್ತು.ವ್ಯಕ್ತಿತ್ವ ವಿಕಸನದ ಅತ್ಯುತ್ತಮ ಗುರು ಆಗಿದ್ದ ಅವರಿಗೆ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳಿಂದ ಅಪಾರ ಬೇಡಿಕೆ ಇತ್ತು. ಆದರೆ `ನಾನು ಒಂದು ದೂರದೃಷ್ಟಿಯ ಸಾಧನೆಗೆ ದುಡಿಯುವ ವ್ಯಕ್ತಿ. ಕೇವಲ ದುಡ್ಡು ಅಥವಾ ಕೆಲಸಕ್ಕಾಗಿ ದುಡಿಯುವವನಲ್ಲ~ ಎಂಬ ತತ್ವ ಅವರದಾಗಿತ್ತು.ಯಾರ ಮುಂದೆಯೂ ಕೈಚಾಚಿದವರಲ್ಲ ರಘು. ಶಾಂತಿಲಾಲ್, ಸಂಕಲ್ಪ ಸೆಮಿಕಂಡಕ್ಟರ್‌ನ ವಿವೇಕ್ ಪವಾರ್ ಅವರಂತಹ ಸಮಾನಮನಸ್ಕ ಸ್ನೇಹಿತರ ನೆರವು ಅವರಲ್ಲಿ ಹೊಸ ಕನಸುಗಳನ್ನು ಹುಟ್ಟುಹಾಕುತ್ತಿದ್ದವು. ಆ ಕನಸುಗಳೆಲ್ಲ `ಉಷಸ್~ನ ಮಕ್ಕಳಿಗಾಗಿಯೇ ಮೀಸಲು.

 

ಹಲವು ಬಾರಿ ವಿದೇಶ ಪ್ರಯಾಣ ಮಾಡಿರುವ ರಘು ಅಲ್ಲಿನ ಅನುಭವಗಳನ್ನು ಇಲ್ಲಿಯ ಮಕ್ಕಳ ಮೇಲೆ ಪ್ರಯೋಗಿಸುತ್ತಿದ್ದರು. ವಿಶೇಷ ಮಕ್ಕಳ ಚಿಕಿತ್ಸೆಗಾಗಿ ಹತ್ತಾರು ನಮೂನೆಯ ಥೆರಪಿಗಳನ್ನು ಉಷಸ್‌ನಲ್ಲಿ ಆರಂಭಿಸಿದ್ದರು. ವಾಕಿಂಟ್ ಟ್ಯೂಟರ್, ವಾಟರ್ ಥೆರಪಿ, ಅರೋಮಾ ಥೆರಪಿ, ಈಜು ಮತ್ತು ಕುದುರೆ ಸವಾರಿ (ಹಿಪ್ಪೊಥೆರಪಿ), ಕಲರ್ ಥೆರಪಿಯಂತಹ ಅಸಾಧಾರಣ ಚಿಕಿತ್ಸೆಗಳನ್ನು ತಂದರು.ಅಷ್ಟಾವಕ್ರನ ಮಾದರಿಯಲ್ಲಿ ಶಾಲೆ ಕಟ್ಟಿದ ಅವರು, ಅದರ ಆವರಣದಲ್ಲಿ ಈ ಎಲ್ಲ ಥೆರಪಿಗಳನ್ನೂ ಆರಂಭಿಸಿದರು. ಹಿಪ್ಪೊಥೆರಪಿಗಾಗಿ ಕುದುರೆಯನ್ನೇ ಖರೀದಿಸಿ ತಂದರು.ಮಕ್ಕಳಿಗಾಗಿ ಏನು ಮಾಡಲೂ ಸಿದ್ಧರಾಗಿರುತ್ತಿದ್ದ ರಘು ಐವತ್ತೈದನೇ ವಯಸ್ಸಿನಲ್ಲಿ ಕಣ್ಣು ಮುಚ್ಚಿದ್ದಾರೆ. ಸವಿನೆನಪುಗಳ ಜೊತೆಗೆ ಹಲವಾರು ಕನಸುಗಳನ್ನು ಬಿಟ್ಟು ಹೋಗಿದ್ದಾರೆ.

ಪ್ರತಿಕ್ರಿಯಿಸಿ (+)