`ವಿಶೇಷ ಸ್ಥಾನಮಾನ ನೀಡಿ; ಇಲ್ಲವೇ ವಿಲೀನಗೊಳಿಸಿ'

ಸೋಮವಾರ, ಜೂಲೈ 15, 2019
25 °C
ಹರಪನಹಳ್ಳಿ: `ಹೈ-ಕ' 371ಜೆ ಕಲಂ ಸೇರ್ಪಡೆಗೆ ಒತ್ತಾಯ

`ವಿಶೇಷ ಸ್ಥಾನಮಾನ ನೀಡಿ; ಇಲ್ಲವೇ ವಿಲೀನಗೊಳಿಸಿ'

Published:
Updated:

ಹರಪನಹಳ್ಳಿ: ತಾಲ್ಲೂಕನ್ನು ಹೈದರಾಬಾದ್-ಕರ್ನಾಟಕ ಪ್ರಾಂತ್ಯದ ವಿಶೇಷ ಸ್ಥಾನಮಾನದ ವ್ಯಾಪ್ತಿಗೆ ಪರಿಗಣಿಸಬೇಕು, ಇಲ್ಲವೇ ತಾಲ್ಲೂಕನ್ನು ಈ ಮೊದಲಿನಂತೆ ಬಳ್ಳಾರಿ ಜಿಲ್ಲೆಯಲ್ಲಿ ವಿಲೀನಗೊಳಿಸಿ ಎಂದು ಹೈ-ಕ 371ಜೆ ಕಲಂ ಸೇರ್ಪಡೆ ಹೋರಾಟ ಸಮಿತಿ ಮುಖಂಡರ ನಿಯೋಗದವರು ಶಾಸಕ ಎಂ.ಪಿ.ರವೀಂದ್ರ ಅವರಿಗೆ ಮನವಿ ಮಾಡಿದರು.ಹೋರಾಟ ಸಮಿತಿ ಹಾಗೂ ಮಠಾಧೀಶರ ಧರ್ಮ ಪರಿಷತ್ ಸಂಚಾಲಕ ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಭಾನುವಾರ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಶಾಸಕರನ್ನು ಭೇಟಿ ಮಾಡಿದ ನಿಯೋಗ ವಿಸ್ತೃತ ಚರ್ಚೆ ನಡೆಸಿತು.ಶಾಸಕ ಎಂ.ಪಿ. ರವೀಂದ್ರ ಮಾತನಾಡಿ, ತಮಗೂ ಕ್ಷೇತ್ರದ ಜನರ ಹಿತರಕ್ಷಣೆ ಬಗ್ಗೆ ಕಳಕಳಿ ಇದೆ. ಆದರೆ, ಈಗ ನಡೆಯುತ್ತಿರುವ ಚಳವಳಿ, ಎರಡು ಮೂರು ವರ್ಷಗಳ ಹಿಂದೆ ಆರಂಭವಾಗಿದ್ದರೆ, ಈ ಮಟ್ಟದ ಹೋರಾಟದ ಅಗತ್ಯವೇ ಇರಲಿಲ್ಲ. ಆದರೆ, ಸಂವಿಧಾನಕ್ಕೆ ತಿದ್ದುಪಡಿ ಸಂಬಂಧ ಈಗಾಗಲೇ ಸಂಸತ್‌ನ ಉಭಯ ಸದನಗಳಲ್ಲೂ ಮಸೂದೆ ಅಂಗೀಕಾರವಾಗಿ ರಾಷ್ಟ್ರಪತಿ ಅಂಕಿತವೂ ದೊರೆತಿದೆ. ನೀವು ಈಗ ಹೋರಾಟಕ್ಕೆ ಅಣಿಯಾಗಿದ್ದೀರಿ. ಆದರೂ ನಾನು ಕಾನೂನು ರೀತಿಯ ಎಲ್ಲಾ ಹೋರಾಟವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಭರವಸೆ ನೀಡಿದರು.ವಿಶೇಷ ಸ್ಥಾನಮಾನಕ್ಕೆ ಪೂರಕವಾಗಿ ಸಮಗ್ರವಾದ ನಿಯಮಾವಳಿ ರೂಪಿಸುವ ಹಿನ್ನೆಲೆಯಲ್ಲಿ ರಚಿಸಲಾದ ಪಂಚಾಯತ್‌ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಗೂ ಈ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ವಿಶೇಷ ಸ್ಥಾನಮಾನಕ್ಕೆ ಅವಿಭಜಿತ ಬಳ್ಳಾರಿ ಜಿಲ್ಲೆಯ ತಾಲ್ಲೂಕನ್ನು ಪರಿಗಣಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಉಪಸಮಿತಿಯೂ ಈ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ರಾಜ್ಯ ಅಟಾರ್ನಿ ಜನರಲ್ ಪ್ರೊ.ರವಿವರ್ಮ ಕುಮಾರ್ ಅವರನ್ನು ಭೇಟಿಯಾಗಿ ಕಾನೂನಾತ್ಮಕ ಅಂಶಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದರು.ನಿಯೋಗದಲ್ಲಿ ಅಡವಿಹಳ್ಳಿ ಹಾಲಸ್ವಾಮಿ ಮಠದ ವೀರಗಂಗಾಧರ ಸ್ವಾಮೀಜಿ, ಹೋರಾಟ ಸಮಿತಿ ಸಂಚಾಲಕ ಕಣವಿಹಳ್ಳಿ ಮಂಜುನಾಥ, ಬಿ.ವೈ.ವೆಂಕಟೇಶ್ ಇತರರು ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ಹಾಲೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಟಿ.ಬಸವನಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಎಸ್.ಮಂಜುನಾಥ, ಮುಖಂಡ ಮತ್ತಿಹಳ್ಳಿ ಅಜ್ಜಣ್ಣ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry