ವಿಶೇಷ ಸ್ಥಾನಮಾನ: ಸಂಭ್ರಮ

7

ವಿಶೇಷ ಸ್ಥಾನಮಾನ: ಸಂಭ್ರಮ

Published:
Updated:

ಬೀದರ್: ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಸೂದೆಯನ್ನು ಲೋಕಸಭೆ ಅಂಗೀಕರಿಸಿರುವ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ವಿಜಯೋತ್ಸವ ಆಚರಿಸಿದರು.ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಜಿಲ್ಲಾ ಸಮಗ್ರ ಅಭಿವದ್ಧಿ ಹೋರಾಟ ಸಮಿತಿ, ಜಯ ಕರ್ನಾಟಕ ಸಂಘಟನೆಗಳ ಕಾರ್ಯಕರ್ತರು ಸಂಜೆ ಅಂಬೇಡ್ಕರ್ ವತ್ತದ ಬಳಿ ಜಮಾಯಿಸಿ ಸಂಭ್ರಮ ಆಚರಿಸಿದರು.ಪರಸ್ಪರರ ಮೇಲೆ ಗುಲಾಲು ಎರಚಿಸಿದರು. ಕೇಕ್, ಸಿಹಿ ತಿನ್ನಿಸಿದರು. ಕಿವಿಗಡಚಿಕ್ಕುವಂತೆ ಪಟಾಕಿ ಸಿಡಿಸಿದರು. ಬ್ಯಾಂಡ್ ಬಾಜಾ ಮೇಲೆ ಕುಣಿದು ಕುಪ್ಪಳಿಸಿದರು. ಶಾಸಕ ರಹೀಮ್‌ಖಾನ್ ಮತ್ತಿತರರು ಕೂಡ ಹೆಜ್ಜೆ ಹಾಕುವ ಮೂಲಕ ವಿಜಯೋತ್ಸವದ ಸಂಭ್ರಮ ಹೆಚ್ಚಿಸಿದರು.ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ವಿಭಾಗೀಯ ಪ್ರಧಾನ ಕಾರ್ಯದರ್ಶಿ ಅನೀಲ್‌ಕುಮಾರ್, ಜಿಲ್ಲಾ ಪ್ರಮುಖರಾದ ಪಂಡಿತರಾವ್ ಚಿದ್ರಿ, ಪ್ರೊ. ದೇವೇಂದ್ರ ಕಮಲ್, ಶಂಕರರಾವ್ ಹೊನ್ನಾ, ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ, ಪ್ರಮುಖರಾದ ಚಂದ್ರಕಾಂತ್ ಹಿಪ್ಪಳಗಾಂವ್, ಫರ್ನಾಂಡಿಸ್ ಹಿಪ್ಪಳಗಾಂವ್, ರಾಜು ಕಡ್ಯಾಳ್, ದತ್ತಾತ್ರಿ ಎಚ್. ಮೂಲಗೆ, ಜಗದೀಶ್ ಬಿರಾದಾರ್, ಆನಂದ ಚಾರ್ಲಿಸ್, ರಮೇಶ್ ಪಾಟೀಲ್ ಸೋಲಪುರ ಮತ್ತಿತರರು ಪಾಲ್ಗೊಂಡಿದ್ದರು.ಖಂಡ್ರೆ ಸಂತಸ: ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ 371ನೇ ಕಲಂ ತಿದ್ದುಪಡಿ ಮಸೂದೆಗೆ ಲೋಕಸಭೆ ಅಂಗೀಕಾರ ದೊರೆತಿರುವುದಕ್ಕೆ ಶಾಸಕ ಈಶ್ವರ ಖಂಡ್ರೆ ಸಂತಸ ವ್ಯಕ್ತಪಡಿಸಿದ್ದು, ಈ ಭಾಗದ ಜನರ ಹೋರಾಟಕ್ಕೆ ಜಯ ಲಭಿಸಿತು ಎಂದಿದ್ದಾರೆ.`ಪೂರಕವಾಗಿ ರಾಜ್ಯ ಸರ್ಕಾರ ಆದಷ್ಟು ಶೀಘ್ರ ತಿದ್ದುಪಡಿ ಕಾಯ್ದೆಗೆ ಅನುಗುಣವಾಗಿ ಈ ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ರೂಪುರೇಷೆ ನಿರ್ಧರಿಸುವ, ಅನುದಾನ ಹಂಚಿಕೆ ಕುರಿತಂತೆ ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry