ಭಾನುವಾರ, ಜನವರಿ 19, 2020
27 °C
ಬಿಕೋ ಎಂದ ಪ್ರತಿಭಟನಾ ಸ್ಥಳ; ನಿರುಮ್ಮಳವಾದ ಹಲಗಾ ಗ್ರಾಮಸ್ಥರು

ವಿಶ್ರಾಂತಿಗೆ ವಾಲಿದ ಪೊಲೀಸರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕಳೆದ 11 ದಿನಗಳಿಂದ ಸರ್ಕಾರದ ವಿರುದ್ಧ ಘೋಷಣೆ ಮೊಳಗುತ್ತಿದ್ದ ಸುವರ್ಣ ವಿಧಾನಸೌಧದ ಸಮೀಪದ ಪ್ರತಿಭಟನಾ ಸ್ಥಳವು ಶುಕ್ರವಾರ ಬಿಕೋ ಎನ್ನುತ್ತಿದ್ದವು. ಯಾವುದೇ ಪ್ರತಿಭಟನೆಗಳು ನಡೆಯದೇ ಇರುವುದರಿಂದ ಭದ್ರತೆ ಒದಗಿಸಬೇಕು ಎಂಬ ಚಿಂತೆಯಿಂದ ಮುಕ್ತರಾದ ಪೊಲೀಸರು ನಿರುಮ್ಮಳರಾಗಿ ವಿಶ್ರಾಂತಿ ಪಡೆದರು.ಅಧಿವೇಶನದ ದಿನದಿಂದಲೇ ಪ್ರತಿಭಟನೆಗಳು ಸಾಲು ಸಾಲಾಗಿ ನಡೆದವು. ಸಮಸ್ಯೆಗಳ ಹೊರೆಯನ್ನೇ ಹೊತ್ತುಕೊಂಡು ಬಂದಿದ್ದ ಸಾವಿರಾರು ಹೋರಾಟಗಾರರಿಗೆ ಸರ್ಕಾರದ ಪ್ರತಿನಿಧಿಗಳಿಂದ ಭರವಸೆಗಳ ಮಹಾಪೂರವೇ ಹರಿಯಿತು.ಆದರೆ, ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಗಲಿಲ್ಲ. ಮುಂದಿನ ವರ್ಷದ ಅಧಿವೇಶನದ ಸಂದರ್ಭದಲ್ಲೂ ಇದೇ ಸಮಸ್ಯೆಗಳಿಗಾಗಿ ಹೋರಾಟ ನಡೆಯಲಿದೆಯೋ? ಅಥವಾ ಅಷ್ಟರೊಳಗೆ ಸರ್ಕಾರ ಅವುಗಳನ್ನು ಬಗೆಹರಿಸಲಿದೆಯೋ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.ಹತ್ತಾರು ಸಂಘಟನೆಗಳು ಏಕಕಾಲಕ್ಕೆ ಪ್ರತಿಭಟನೆ ನಡೆಸಿ, ನಾಯಕರು ಮೈಕ್‌ನಲ್ಲಿ ಭಾಷಣಗಳ ಮಳೆಯನ್ನೇ ಸುರಿಸುತ್ತಿದ್ದರು. ಮೂರ್ನಾಲ್ಕು ಸಾವಿರದಷ್ಟು ಜನರು ನೆರೆದಿರುತ್ತಿದ್ದರು. ಅವರ ಹಸಿವನ್ನು ತಣಿಸಲು ಹತ್ತಾರು ಅಂಗಡಿಗಳು ತಲೆ ಎತ್ತಿದ್ದವು. ಪುಟ್ಟ ಜಾತ್ರೆಯಂತೆ ಕಂಡು ಬರುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಹಗಲಾ ಗ್ರಾಮದ ಈ ಸ್ಥಳದಲ್ಲಿ ಅಧಿವೇಶನದ ಕೊನೆಯ ದಿನ ನೀರವ ವಾತಾವರಣ ನೆಲೆಸಿದೆ. ಪ್ರತಿಭಟನಾಕಾರರಿಗಾಗಿ ಜಿಲ್ಲಾಡಳಿತ ಹಾಕಿದ್ದ ಟೆಂಟ್‌ಗಳನ್ನು ಬಿಚ್ಚಲಾಗಿದೆ.ದಿನಾ ಬಿಸಿಲಿನಲ್ಲಿ ನಿಂತು ಭದ್ರತೆ ಒದಗಿಸಿ ಬಸವಳಿದಿದ್ದ ಪೊಲೀಸರು, ಯಾವುದೇ ಪ್ರತಿಭಟನಾಕಾರರ ಕಿರಿ ಕಿರಿ ಇಲ್ಲದೇ ನೆಮ್ಮದಿಯಿಂದ ಇದ್ದರು. ಪ್ರತಿಭಟನಾ ಸ್ಥಳದಲ್ಲಿ ಮರದ ಕೆಳಗಿನ ನೆರಳಿನಲ್ಲಿ ಕೆಲವರು ಮಲಗಿ ವಿಶ್ರಾಂತಿ ಪಡೆದರೆ, ಹಲವು ಕುಳಿತು ಹರಟೆ ಹೊಡೆಯುತ್ತಿರುವುದು ಕಂಡು ಬಂತು.ಕಸದ ರಾಶಿ: ಅಹೋರಾತ್ರಿ ಧರಣಿ ನಡೆಸಿದ್ದ ಪ್ರತಿಭಟನಾಕಾರರು ಬಳಸಿದ್ದ ಊಟದ ಪ್ಲಾಸ್ಟಿಕ್‌ ತಟ್ಟೆ, ಪ್ಲೇಟ್‌ಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಕೆಲವೆಡೆ ರಾಶಿ ಮಾಡಿ ಇಡಲಾಗಿದೆ. 10 ದಿನಗಳಿಂದ ಅಲ್ಲಲ್ಲಿ ಬಿದ್ದಿದ್ದ ತ್ಯಾಜ್ಯ, ಆಹಾರ ಪದಾರ್ಥಗಳು ದುರ್ವಾಸನೆ ಬೀರುತ್ತಿವೆ. ಇಲ್ಲಿ ಜನಜಂಗುಳಿ, ವಾಹನಗಳ ಓಡಾಟದಿಂದ ಬೇಸತ್ತಿದ್ದ ಹಗಲಾ ಗ್ರಾಮಸ್ಥರು ಶುಕ್ರವಾರದಿಂದ ನೆಮ್ಮದಿಯ ಉಸಿರು ಬಿಡುವಂತಾಗಿದೆ.

ಪ್ರತಿಕ್ರಿಯಿಸಿ (+)