ವಿಶ್ವಕನ್ನಡ ಸಮ್ಮೇಳನಕ್ಕೆ ಕುಂದಾನಗರಿ ಸಜ್ಜು

7

ವಿಶ್ವಕನ್ನಡ ಸಮ್ಮೇಳನಕ್ಕೆ ಕುಂದಾನಗರಿ ಸಜ್ಜು

Published:
Updated:

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನಕ್ಕೆ ಕುಂದಾನಗರಿಯನ್ನು ಅಣಿಗೊಳಿಸುವ ಕಾರ್ಯ ಚುರುಕು ಪಡೆದುಕೊಂಡಿದೆ. ರಸ್ತೆ ಡಾಂಬರೀಕರಣ, ಕಟ್ಟಡಗಳ ಸುಣ್ಣ, ಬಣ್ಣ ಬಳಿಯುವುದು ಸೇರಿದಂತೆ ವಿವಿಧ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ.ಮಾ. 11ರಿಂದ ನಡೆಯಲಿರುವ ಸಮ್ಮೇಳನಕ್ಕಾಗಿ ನಗರದ ಪ್ರಮುಖ ರಸ್ತೆಗಳು ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳತೊಡಗಿವೆ. ಪ್ರಮುಖ ವೃತ್ತಗಳಲ್ಲಿ ನಾಡಿನ ಇತಿಹಾಸ, ಪ್ರವಾಸಿ ತಾಣಗಳ ಚಿತ್ರ ಬಿಡಿಸುವ ಕಾರ್ಯವೂ ಆರಂಭಗೊಂಡಿದೆ.ಲೋಕೋಪಯೋಗಿ ಇಲಾಖೆಯು ರೂ. 4.9 ಕೋಟಿ ವೆಚ್ಚದಲ್ಲಿ ನಗರ ಸಂಪರ್ಕಿಸುವ ಹಾಗೂ ಮೆರವಣಿಗೆ ಸಾಗುವ ರಸ್ತೆ ಡಾಂಬರೀಕರಣದ ಕಾರ್ಯವನ್ನು ಆರಂಭಿಸಿದೆ. ಪ್ರಮುಖ ರಸ್ತೆಗಳ ಡಾಂಬರೀಕರಣ ಭರದಿಂದ ಸಾಗಿದೆ.ಪ್ರಮುಖ ಕಟ್ಟಡಗಳ ದುರಸ್ತಿ ಹಾಗೂ ಸುಣ್ಣ, ಬಣ್ಣವನ್ನು ರೂ. 50 ಲಕ್ಷ, ಪ್ರವಾಸಿ ಮಂದಿರ ಆಧುನೀಕರಣ ಹಾಗೂ ಪೀಠೋಪಕರಣಗಳ ಖರೀದಿಗೆ ರೂ. 25 ಲಕ್ಷ ವೆಚ್ಚ ಮಾಡುವ ಮೂಲಕ ಆಧುನಿಕ ರೂಪ ನೀಡಲಾಗುತ್ತಿದೆ.ಸಮ್ಮೇಳನದ ಪ್ರಮುಖ ವೇದಿಕೆಯಾಗಲಿರುವ ಜಿಲ್ಲಾ ಕ್ರೀಡಾಂಗಣದ ದುರಸ್ತಿ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕಾರ್ಯವನ್ನೂ ರೂ. 90 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮಾಡುತ್ತಿದೆ.ಸಮ್ಮೇಳನ ಪ್ರತಿನಿಧಿಗಳು ಇಳಿದುಕೊಳ್ಳುವ ಶಾಲೆಗಳಲ್ಲಿ ಸಾವಿರಾರು ಶೌಚಾಲಯ ಹಾಗೂ ಸ್ನಾನಗೃಹ ನಿರ್ಮಿಸುವ ಕಾರ್ಯವನ್ನು ಜಿಲ್ಲಾ ಪಂಚಾಯಿತಿಯು ರೂ. 1.20 ಕೋಟಿ ವೆಚ್ಚದಲ್ಲಿ ಆರಂಭಿಸಿದೆ.ಸಮಾಜ ಕಲ್ಯಾಣ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿ ಪ್ರತಿನಿಧಿಗಳನ್ನು ಇಳಿಸಲು ಯೋಜಿಸಲಾಗಿದೆ. ಅದಕ್ಕಾಗಿ ರೂ. 2 ಕೋಟಿ ವೆಚ್ಚದಲ್ಲಿ ನಿಲಯಗಳ ಆಧುನೀಕರಣ, ಶೌಚಾಲಯ ಹಾಗೂ  ಸ್ನಾನಗೃಹ ನಿರ್ಮಾಣ ಮತ್ತು ವಸತಿ ವ್ಯವಸ್ಥೆ ಮಾಡಲಾಗುತ್ತಿದೆ.ತೋಟಗಾರಿಕೆ ಇಲಾಖೆಯು ರೂ. 25 ಲಕ್ಷ ವೆಚ್ಚದಲ್ಲಿ ಬೆಂಗಳೂರಿನಲ್ಲಿ ನಡೆಸುವ ಫಲಪುಷ್ಪ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನ ಆಯೋಜನೆ ಕಾರ್ಯಕ್ಕೆ ಚಾಲನೆ ನೀಡಿದೆ.ಅತಿಥಿಗಳು ಹಾಗೂ ಗಣ್ಯರ ಓಡಾಟಕ್ಕಾಗಿ ಜಿಲ್ಲಾಡಳಿತವು ಪ್ರಾದೇಶಿಕ ಸಾರಿಗೆ ಇಲಾಖೆಗೆ ಒಂದು ಸಾವಿರ ಕಾರು, 250 ಮಿನಿ ಬಸ್ ಒದಗಿಸುವಂತೆ ಕೋರಿದೆ. ಇದಕ್ಕಾಗಿ ರೂ. 91 ಲಕ್ಷ ಖರ್ಚಾಗಲಿದ್ದು, ಸಾರಿಗೆ ಇಲಾಖೆ ಆ ನಿಟ್ಟಿನಲ್ಲಿ ಸಿದ್ಧತೆ ಆರಂಭಿಸಿದೆ.ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯ 15 ರಸ್ತೆಗಳ ದುರಸ್ತಿಯನ್ನು ರೂ. 4.48 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ. ಫುಟ್‌ಪಾತ್ ಸುಧಾರಣೆ, ವೃತ್ತ ಅಂದಗೊಳಿಸುವ ಕಾರ್ಯಕ್ಕೂ ಚಾಲನೆ ನೀಡಲಾಗಿದೆ. ಈ ಎಲ್ಲ ಕಾಮಗಾರಿಗಳನ್ನು ಆಯಾ ಇಲಾಖೆಯ ಅನುದಾನದಲ್ಲಿಯೇ ಕೈಗೊಳ್ಳಲು ಸೂಚಿಸಲಾಗಿದೆ. ಒಂದೆಡೆ ನಗರವನ್ನು ಸುಂದರಗೊಳಿಸುವ ಕಾರ್ಯಗಳು ಭರದಿಂದ ನಡೆದಿದ್ದರೆ, ಇನ್ನೊಂದೆಡೆ ವಿವಿಧ ಸಮಿತಿಗಳು ತಮಗೆ ವಹಿಸಿರುವ ಜವಾಬ್ದಾರಿ ಕೆಲಸಕ್ಕೆ ಚಾಲನೆ ನೀಡಿವೆ.ಈಗಾಗಲೇ ಸಮ್ಮೇಳನಕ್ಕೆ ಆಗಮಿಸುವ ಪ್ರತಿನಿಧಿಗಳ ನೋಂದಣಿ ಕಾರ್ಯ ಆರಂಭಗೊಂಡಿದೆ. ಊಟೋಪಚಾರ ಸಮಿತಿಯವರು ನಗರದ ಏಳು ಕಡೆಗೆ ಊಟದ ಸ್ಥಳಗಳನ್ನು ಗುರುತಿಸಿ, ‘ಮೆನು’ವನ್ನೂ ಸಹ ತಯಾರಿಸಿದ್ದಾರೆ.ಮೆರವಣಿಗೆ ಸಮಿತಿಯು ವಿವಿಧ ಜಿಲ್ಲೆಗಳಿಂದ ಮೆರವಣಿಗೆಯಲ್ಲಿ ಭಾಗವಹಿಸಲು ಸ್ತಬ್ಧ ಚಿತ್ರಗಳನ್ನು ಕಳುಹಿಸಲು ಕೋರಿದ್ದು, ಆನೆ, ಓಂಟೆಗಳನ್ನು ಕರೆಯಿಸಲು ಪತ್ರ ವ್ಯವಹಾರ ಮಾಡಿದೆ. ಒಟ್ಟಿನಲ್ಲಿ ಸಮ್ಮೇಳನ ತಯಾರಿ ಕಾಮಗಾರಿಗಳು ಆರಂಭವಾಗಿವೆ. ಅದಕ್ಕೊಂದು ರೂಪ ಕೊಡುವ ಕೆಲಸಕ್ಕೆ ಚಾಲನೆ ಸಿಕ್ಕಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry