ಮಂಗಳವಾರ, ಮೇ 24, 2022
27 °C

ವಿಶ್ವಕಪ್‌ನಲ್ಲಿ ಪ್ರತಿಯೊಂದು ಪಂದ್ಯವೂ ಮಹತ್ವದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಕಪ್‌ನಂಥ ದೊಡ್ಡ ಟೂರ್ನಿಯಲ್ಲಿ ಪ್ರತಿಯೊಂದು ಪಂದ್ಯವೂ ಮಹತ್ವದ್ದಾಗಿರುತ್ತದೆ. ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆಯುವ ಹಣಾಹಣಿಗೂ ಅಷ್ಟೇ ಮಹತ್ವವಿದೆ ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಸ್ಪಷ್ಟಪಡಿಸಿದ್ದಾರೆ.ಶನಿವಾರ ಇಲ್ಲಿ ‘ಮಹಿ’ ಸುದ್ದಿಗಾರರೊಂದಿಗೆ ಮಾತನಾಡಿದ ‘ಪಂದ್ಯದ ಮಹತ್ವವನ್ನು ಇಂಥದೊಂದು ಘಟ್ಟದಲ್ಲಿ ತೂಗಲು ಸಾಧ್ಯವಿಲ್ಲ. ಎದುರಾಳಿ ಇಂಗ್ಲೆಂಡ್ ಆಗಿರಲಿ ಇಲ್ಲವೆ ಬಾಂಗ್ಲಾದೇಶ ಆಗಿರಲಿ ಎಲ್ಲದಕ್ಕೂ ಅಷ್ಟೇ ಪ್ರಾಮುಖ್ಯತೆ ಇರುತ್ತದೆ. ಯಾವುದೋ ಒಂದು ಪಂದ್ಯವು ದೊಡ್ಡದೆಂದು ಹೇಳುವುದು ಖಂಡಿತ ಸರಿಯಲ್ಲ. ವಿಶ್ವಕಪ್‌ನಲ್ಲಿ ಆಡುವಾಗ ಪ್ರತಿಯೊಂದು ಪಂದ್ಯಕ್ಕಾಗಿ ಸಿದ್ಧತೆಯು ಸಮನಾಗಿಯೇ ಇರಬೇಕು’ ಎಂದು ಹೇಳಿದರು.‘ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಎದುರು ಹೋರಾಡಬೇಕು. ಇದೇ ಪಂದ್ಯದ ಫಲಿತಾಂಶವು ಮುಂದೆ ನಿರ್ಣಾಯಕ ಪಾತ್ರವನ್ನು ವಹಿಸಬಹುದು’ ಎಂದ ಅವರು ‘ಎಲ್ಲ ಪಂದ್ಯಗಳಂತೆ ಇದಕ್ಕಾಗಿಯೂ ಸಿದ್ಧತೆಯ ಮಟ್ಟ ಉನ್ನತವಾದದ್ದು’ ಎಂದರು.ಆ್ಯಂಡ್ರ್ಯೂ ಸ್ಟ್ರಾಸ್ ನೇತೃತ್ವದ ಪಡೆಯ ವಿರುದ್ಧ ಭಾರತವು ಗೆಲ್ಲುವ ನೆಚ್ಚಿನ ತಂಡವಾಗಿದೆ ಎನ್ನುವ ಅಭಿಪ್ರಾಯ ಬಲವಾಗಿರುವ ಕಡೆಗೆ ಗಮನ ಸೆಳೆದಾಗ ‘ನೆಚ್ಚಿನ ತಂಡ ಯಾವುದೂ ಇರುವುದಿಲ್ಲ. ಅಂಗಳದಲ್ಲಿ ಉಭಯ ತಂಡಗಳು ಹೋರಾಟದ ಮೂಲಕ ಜಯ ಪಡೆಯುವತ್ತ ನುಗ್ಗಬೇಕು. ಹಿಂದೆ ಯಶಸ್ಸು ಪಡೆದಿದ್ದರೂ ಹೊಸದೊಂದು ಪಂದ್ಯದಲ್ಲಿ ಹೊಸದಾಗಿಯೇ ಆಟ ಎನ್ನುವುದನ್ನು ಮರೆಯಬಾರದು. ಆದರೆ ಹಿಂದೆ ತೋರಿದ ಪ್ರದರ್ಶನವನ್ನು ಮೀರಿ ನಿಲ್ಲುವಂಥ ಆಟವಾಡಲು ಪ್ರಯತ್ನ ಮಾಡುವುದು ಮುಖ್ಯ’ ಎಂದು ನುಡಿದರು.ತಂಡದಲ್ಲಿ ಗಾಯಾಳುಗಳ ಸಮಸ್ಯೆ ಇದೆಯೇ ಎಂದು ಕೇಳಿದ ಪ್ರಶ್ನೆಗೆ ‘ಆಶಿಶ್ ನೆಹ್ರಾ ಹೊರತು ಎಲ್ಲರೂ ಆಡಲು ದೈಹಿಕವಾಗಿ ಸಮರ್ಥರಾಗಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.