ವಿಶ್ವಕಪ್ ಗೆಲ್ಲಲು ಆಡಿ; ಸಚಿನ್‌ಗಾಗಿ ಅಲ್ಲ- ಸ್ವೀವ್ ವಾ

7

ವಿಶ್ವಕಪ್ ಗೆಲ್ಲಲು ಆಡಿ; ಸಚಿನ್‌ಗಾಗಿ ಅಲ್ಲ- ಸ್ವೀವ್ ವಾ

Published:
Updated:

ನವದೆಹಲಿ (ಪಿಟಿಐ): ಸಚಿನ್ ತೆಂಡೂಲ್ಕರ್ ಐದು ಬಾರಿ ವಿಶ್ವಕಪ್ ಆಡಿದ್ದರೂ, ಟ್ರೋಫಿಯನ್ನು ತಮ್ಮದೆಂದು ಮುಟ್ಟಲು ಸಾಧ್ಯವಾಗಿಲ್ಲ. ಆದ್ದರಿಂದ ಆರನೇ ಬಾರಿಯಾದರೂ ಅವರಿಗಾಗಿ ಭಾರತ ತಂಡದ ಎಲ್ಲ ಆಟಗಾರರು ಬಲ ಒಗ್ಗೂಡಿಸಿ ಹೋರಾಡಿ ಚಾಂಪಿಯನ್ ಪಟ್ಟವನ್ನು ಪಡೆಯಬೇಕು ಎನ್ನುವ ಅಭಿಪ್ರಾಯಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಸಚಿನ್‌ಗಾಗಿ ಆಡಬೇಕಾಗಿಲ್ಲ; ವಿಶ್ವಕಪ್ ಗೆಲ್ಲುವುದಕ್ಕಾಗಿ ಆಡಬೇಕು. ಕಪ್ ಪಡೆಯಬೇಕು ಎನ್ನುವುದೇ ಗುರಿ ಹಾಗೂ ಪ್ರೇರಣೆ ಆಗಿರಬೇಕು ಎಂದು ಈಗಾಗಲೇ ಅನೇಕ ಹಿರಿಯ ಕ್ರಿಕೆಟಿಗರು ಹೇಳಿದ್ದಾರೆ. 1983ರಲ್ಲಿ ವಿಶ್ವಕಪ್ ಗೆದ್ದ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದ ಸಯ್ಯದ್ ಕಿರ್ಮಾನಿ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಈ ಮಾತಿಗೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಅವರೂ ಶುಕ್ರವಾರ ಬಲ ನೀಡಿದ್ದಾರೆ.

‘ವಿಶ್ವಕಪ್ ಗೆಲ್ಲಲು ಆಡಿ; ಸಚಿನ್‌ಗಾಗಿ ಅಲ್ಲ’ ಎಂದು ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ತಂಡಕ್ಕೆ ಸ್ಪಷ್ಟವಾಗಿ ಹೇಳಿರುವ ವಾ ಅವರು ‘ತೆಂಡೂಲ್ಕರ್‌ಗಾಗಿ ಟ್ರೋಫಿ ಗೆಲ್ಲುತ್ತೇವೆಂದು ಯೋಚಿಸಿ ಆಡುವುದು ಸರಿಯಾದ ಮನೋಧರ್ಮವಲ್ಲ. ಅದು ದೊಡ್ಡ ಪ್ರೇರಣೆಯೂ ಆಗುವುದಿಲ್ಲ. ಅದರ ಬದಲು ದೇಶಕ್ಕಾಗಿ ವಿಶ್ವಕಪ್ ಜಯಿಸುತ್ತೇವೆ ಎಂದು ಯೋಚಿಸಿದರೆ ಅದು ಮಹಾ ಪ್ರೇರಣೆ ಆಗುತ್ತದೆ’ ಎಂದು ಹೇಳಿದರು.

‘ಭಾರತ ತಂಡದ ಕೆಲವು ಆಟಗಾರರ ಯೋಚನೆ ಹಾಗೂ ವ್ಯಕ್ತಪಡಿಸಿದ ಭಾವನೆಯು ಸರಿಯಾದದ್ದು ಎಂದು ನನಗೆ ಅನಿಸುವುದಿಲ್ಲ. ಒಬ್ಬ ಹಿರಿಯ ಕ್ರಿಕೆಟಿಗನಿಗಾಗಿ ಟ್ರೋಫಿ ಗೆಲ್ಲುತ್ತೇವೆ ಎನ್ನುವ ಮಾತೇ ವಿಚಿತ್ರ ಎನಿಸುತ್ತದೆ. ಹಾಗೆ ಆಗುವುದು ಸಾಧ್ಯವೇ ಇಲ್ಲ. ಅಂಥದೊಂದು ಅಂಶವು ಬಲವಾದ ಪ್ರೇರಣೆ ನೀಡುವುದೂ ಇಲ್ಲ’ ಎಂದ ವಾ ‘ಸಚಿನ್ ದೊಡ್ಡ ಆಟಗಾರ ಎನ್ನುವುದರಲ್ಲಿ ನನಗೂ ಅನುಮಾನವಿಲ್ಲ. ಆದರೆ ಆ ವ್ಯಕ್ತಿಗಿಂತ ದೊಡ್ಡದಾಗಿದ್ದನ್ನು ಸಾಧಿಸುವ ಪ್ರಯತ್ನದಲ್ಲಿ ಅಷ್ಟೇ ಬೃಹತ್ತಾದ ಪ್ರೇರಣೆಯ ಮೂಲ ಇರಬೇಕು. ತಂಡಕ್ಕಾಗಿ ಹಾಗೂ ದೇಶಕ್ಕಾಗಿ ಗೆಲ್ಲುತ್ತೇವೆ ಎನ್ನುವುದೇ ಆ ಮಟ್ಟದ ಪ್ರೇರಣೆ. ಒಂದು ವೇಳೆ ಭಾರತ ವಿಶ್ವಕಪ್ ಗೆದ್ದರೆ, ಆಗ ಅದು ತೆಂಡೂಲ್ಕರ್ ಕ್ರಿಕೆಟ್ ಜೀವನದ ಉನ್ನತ ಸಾಧನೆಗಳಲ್ಲಿ ಒಂದಾಗುತ್ತದೆ. ಅಲ್ಲಿಯವರೆಗೆ ತಂಡ ಹಾಗೂ ದೇಶವೇ ಮುಖ್ಯವಾಗಬೇಕು’ ಎಂದು ವಿವರಿಸಿದರು.

ಲಿಟಲ್ ಚಾಂಪಿಯನ್ ಖ್ಯಾತಿಯ ಸಚಿನ್ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ತಂಡದಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎನ್ನುವುದನ್ನು ಒಪ್ಪಿಕೊಂಡರೂ ‘ಅವರೇ ಟೂರ್ನಿಯ ಸ್ಟಾರ್ ಅಲ್ಲ’ ಎಂದು ವಾ ಸ್ಪಷ್ಟವಾಗಿ ಹೇಳಿದರು. ‘ಭಾರತಕ್ಕೆ ಬಲ ನೀಡುವ ಆಟಗಾರ. ಎದುರಾಳಿ ಬೌಲರ್‌ಗಳನ್ನು ನಿಯಂತ್ರಿಸಬಲ್ಲರು. ಇಂಥ ಒಬ್ಬ ಕ್ರಿಕೆಟಿಗನು ತಂಡದಲ್ಲಿ ಇರುವುದು ಸಾಕಷ್ಟು ಪ್ರಯೋಜನಕಾರಿ’ ಎಂದು ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry