ಗುರುವಾರ , ಮೇ 13, 2021
24 °C

ವಿಶ್ವಕಪ್ ಟಿಕೆಟ್: ಕರಡು ನಿಯಮ ಪ್ರಕಟಿಸಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಕಪ್ ಕ್ರಿಕೆಟ್ ಚಾಂಪಿಯನ್‌ಷಿಪ್‌ನ ಭಾರತ- ಇಂಗ್ಲೆಂಡ್ ನಡುವಿನ ಪಂದ್ಯದ (ಫೆ.27) ಟಿಕೆಟ್ ಮಾರಾಟ ಸಂದರ್ಭದಲ್ಲಿ ಉಂಟಾದ ಗೊಂದಲ ಮತ್ತೆ ಮರುಕಳಿಸದಂತೆ ನಿಗಾ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಟಿಕೆಟ್ ಮಾರಾಟದ ಮೇಲೆ ನಿಯಂತ್ರಣ ಹೇರುವ ಕರಡು ನಿಯಮಗಳನ್ನೂ ಪ್ರಕಟಿಸಿದೆ.ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘದ (ಕೆಎಸ್‌ಸಿಎ) ಅಧ್ಯಕ್ಷ ಅನಿಲ್ ಕುಂಬ್ಳೆ ಅವರು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ್ ಅವರನ್ನು ಶುಕ್ರವಾರ ಭೇಟಿಯಾಗಿ ಚರ್ಚೆ ನಡೆಸಿದರು.ವಿಶ್ವಕಪ್ ಕ್ರಿಕೆಟ್ ಸಂದರ್ಭದಲ್ಲಿ ಟಿಕೆಟ್ ಸಿಗದ ಕಾರಣಕ್ಕೆ ಸಾರ್ವಜನಿಕರು ರೊಚ್ಚಿಗೆದ್ದು ಪ್ರತಿಭಟನೆ ನಡೆಸ್ದ್ದಿದರು. ಆ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ತೀವ್ರ ಟೀಕೆಗೆ ಗುರಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಅಂದಿನ ಪೊಲೀಸ್ ಕಮಿಷನರ್ ಶಂಕರ ಬಿದರಿ ಅವರು ಸರ್ಕಾರಕ್ಕೆ ಪತ್ರ ಬರೆದು ಟಿಕೆಟ್ ಮಾರಾಟದ ಮೇಲೆ ನಿಯಂತ್ರಣ ಹೇರಿ ಎನ್ನುವ ಸಲಹೆ ನೀಡಿದ್ದರು.`ಸಾರ್ವಜನಿಕ ಮನರಂಜನಾ ಸ್ಥಳಗಳ ಟಿಕೆಟ್ ಮಾರಾಟ ಹಾಗೂ ಪಾಸ್ ವಿತರಣೆ ನಿಯಂತ್ರಣ ನಿಯಮ- 2011~ ಅನ್ನು ಜಾರಿಗೊಳಿಸಬೇಕೆಂದೂ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಕರಡು ನಿಯಮ ರೂಪಿಸಿದ್ದು, ಅದಕ್ಕೆ ಕೆಎಸ್‌ಸಿಎ ಆಕ್ಷೇಪ ಸಲ್ಲಿಸಿದೆ. ಮೂರನೇ ಒಂದರಷ್ಟು ಟಿಕೆಟ್‌ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಇದೆ. ಉಳಿದ ಟಿಕೆಟ್‌ಗಳನ್ನು ಕೆಎಸ್‌ಸಿಎ ಸದಸ್ಯರು ಸೇರಿದಂತೆ ಇತರ ಹಲವು ಕ್ಲಬ್‌ಗಳಿಗೆ ನೀಡಬೇಕಾಗಿದೆ. ಇದರ ಜತೆಗೆ ಕೆಲ ಸಂದರ್ಭಗಳಲ್ಲಿ ಐಸಿಸಿಗೂ ಟಿಕೆಟ್ ನೀಡಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ನಿಯಂತ್ರಣ ಬೇಡ ಎನ್ನುವ ಮನವಿ ಮಾಡಿದರು ಎನ್ನಲಾಗಿದೆ.ನಿಯಮ ಏನು?: ಕಾರ್ಯಕ್ರಮ ಅಥವಾ ಕ್ರೀಡೆಯ ಸಂಘಟಕರು ಟಿಕೆಟ್ ಮಾರಾಟದ ದಿನಾಂಕ, ಸ್ಥಳವನ್ನು ಮೊದಲೇ ಪೊಲೀಸರಿಗೆ ತಿಳಿಸಬೇಕು. ಶೇ 50ರಷ್ಟು ಟಿಕೆಟ್‌ಗಳನ್ನು ಕೌಂಟರ್‌ಗಳ ಮೂಲಕ ಮಾರಾಟ ಮಾಡಬೇಕು. ಅಧಿಕೃತ ಪ್ರತಿನಿಧಿಗಳ ಮೂಲಕವೇ ಟಿಕೆಟ್ ಮಾರಬೇಕು ಮತ್ತು ಅದರ ವಿವರಗಳನ್ನೂ ಒದಗಿಸಬೇಕು. ಮಾಧ್ಯಮಗಳಲ್ಲಿಯೂ ಈ ಬಗ್ಗೆ ಎರಡು ದಿನ ಮುಂಚಿತವಾಗಿ ಜಾಹೀರಾತು ನೀಡಬೇಕು.. ಇತ್ಯಾದಿ ಅಂಶಗಳು ಈ ನಿಯಮದಲ್ಲಿ ಸೇರಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.