ಶುಕ್ರವಾರ, ನವೆಂಬರ್ 15, 2019
23 °C

ವಿಶ್ವಕಪ್ ಶೂಟಿಂಗ್: ರಾಹಿಗೆ ಸ್ವರ್ಣ

Published:
Updated:

ನವದೆಹಲಿ (ಪಿಟಿಐ): ಭಾರತದ ಮಹಿಳಾ ಶೂಟರ್ ರಾಹಿ ಸರ್ನೋಬತ್, `ಐಎಸ್‌ಎಸ್‌ಎಫ್ ವಿಶ್ವಕಪ್'ನ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್ ವಿಭಾಗದಲ್ಲಿ ಬಂಗಾರದ ಪದಕ ಜಯಿಸಿದರು.



ಕೊರಿಯಾದ ಚಾಂಗ್ವನ್‌ನಲ್ಲಿ ಶುಕ್ರವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಅವರು, 8-6ರಿಂದ ಅದೇ ದೇಶದ ಕಿಯೋಂಗ್‌ಯಿ ಕಿಮ್ ವಿರುದ್ಧ ಗೆದ್ದರು. ಈ ವಿಭಾಗದಲ್ಲಿ ಬಂಗಾರದ ಪದಕ ಜಯಿಸಿದ ಮೊದಲ ಭಾರತೀಯ ಸ್ಪರ್ಧಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ರಾಹಿ, ಈ ಗೆಲುವಿನೊಂದಿಗೆ ಐಎಸ್‌ಎಸ್‌ಎಫ್ ರೈಫಲ್ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಂಜಲಿ ಭಾಗ್ವತ್, ಗಗನ್ ನಾರಂಗ್, ಸಂಜೀವ್ ರಜ್‌ಪೂತ್, ರಾಜ್ಯವರ್ಧನ್ ಸಿಂಗ್ ರಾಥೋಡ್, ರೊಂಜನ್ ಸೋಧಿ ಮತ್ತು ಮಾನವ್‌ಜಿತ್ ಸಿಂಗ್ ಸಂಧು ಅವರ ಸಾಲಿಗೆ ಸೇರಿದರು.



ಪದಕ ಜಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹಿ, `ನಾನು ಕಂಡ ಕನಸು ನನಸಾಗಿದೆ. ತರಬೇತುದಾರ ಅನತೋಲಿ ಪುದ್ದುಬ್ನಿ ಅವರ ನೆರವಿನೊಂದಿಗೆ ಕಳೆದ ಕೆಲವು ತಿಂಗಳುಗಳಿಂದ ನಾನು ಕಠಿಣ ಅಭ್ಯಾಸ ನಡೆಸುತ್ತಿದ್ದೆ' ಎಂದರು.



ಉಳಿದಂತೆ, ಭಾರತೀಯ ಮಹಿಳಾ ಶೂಟರ್‌ಗಳಿಗೆ ನಿರಾಸೆ ಕಾದಿತ್ತು. ಅನಿಸಾ ಸಯ್ಯದ್ 21ನೇ, ಸುಷ್ಮಾ ಸಿಂಗ್  26ನೇ ಸ್ಥಾನ ಪಡೆದರು. 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಅಪೂರ್ವಿ ಚಂಡೇಲಾ, ಪೂಜಾ ಘಾಟ್ಕರ್ ಮತ್ತು ಎಲಿಜಬೆತ್ ಸುಸಾನ್ ಕೋಶಿ ಫೈನಲ್ ತಲುಪುವಲ್ಲಿ ವಿಫಲರಾದರು.

ಪ್ರತಿಕ್ರಿಯಿಸಿ (+)