ವಿಶ್ವಕಪ್ ಸಂಭ್ರಮ:ಚಿನ್ನಸ್ವಾಮಿಗೆ ಸಿಂಗಾರ

7

ವಿಶ್ವಕಪ್ ಸಂಭ್ರಮ:ಚಿನ್ನಸ್ವಾಮಿಗೆ ಸಿಂಗಾರ

Published:
Updated:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗ ‘ಮದುವೆ ಮನೆ’ ಸಂಭ್ರಮ. ಅಲ್ಲಿನ ನೌಕರರಿಗೆ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವುದೇ ನಿತ್ಯ ಕೆಲಸ. ಮುಂದಿನ 43 ದಿನಗಳ ಕಾಲ ಬೇರಾವ ಕೆಲಸ ಮಾಡಲು ಪುರಸೊತ್ತಿಲ್ಲ.ಬೆಂಗಳೂರಿಗೆ ಬಂದಿಳಿಯುವ ‘ಅತಿಥಿ’ಗಳನ್ನು ಸ್ವಾಗತಿಸಲು ಇಲ್ಲಿನ ನೌಕರರು ಮತ್ತು ಉದ್ಯಾನನಗರಿಯ ಕ್ರೀಡಾಪ್ರೇಮಿಗಳು ಸಜ್ಜಾಗುತ್ತಿದ್ದಾರೆ. ಕುತೂಹಲ, ವಿಸ್ಮಯ, ಕೌತುಕಗಳೊಂದಿಗೆ ಕ್ರೀಡಾಂಗಣವೆಂಬ ಮದುವೆ ಮಂಟಪಕ್ಕೆ ಆಗಮಿಸಿ ಸಂಭ್ರಮವನ್ನು,  ರೋಮಾಂಚನವನ್ನು ಸವಿಯುವ, ಐತಿಹಾಸಿಕ ಕ್ಷಣಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗುವ ತುಡಿತ ಹೊಂದಿದ್ದಾರೆ ಕ್ರೀಡಾಭಿಮಾನಿಗಳು. ಕ್ರಿಕೆಟ್ ‘ಜ್ವರ’ ಜಗತ್ತಿನ ವಿವಿಧ ಭಾಗಗಳ ಅಭಿಮಾನಿಗಳನ್ನು ಸೆಳೆಯುತ್ತಿದೆ. ಮದುವೆ ಮನೆಯನ್ನು ಅಲಂಕಾರಗೊಳಿಸುವಂತೆ ‘ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ’ ಯನ್ನು ವಿವಿಧ ಬಣ್ಣಗಳಿಂದ ಶೃಂಗಾರಗೊಳಿಸಲಾಗಿದೆ. ವಿಶ್ವಕಪ್ ಕ್ರಿಕೆಟ್ ಮುಗಿಯವ ತನಕ ಪ್ರತಿ ದಿನ ಇದೇ ಅಂದ,ಚೆಂದವನ್ನು ಉಳಿಸಿಕೊಂಡು ಬಂದ ಅತಿಥಿಗಳಿಂದ ಬೇಷ್! ಎನ್ನಿಸಿಕೊಳ್ಳಲು ಕ್ರೀಡಾಂಗಣದ ಸಿಬ್ಬಂದಿ ಕಾರ್ಯ ಪ್ರವೃತ್ತರಾಗಿರುತ್ತಾರೆ.ವಿಶ್ವಕಪ್ ಕ್ರಿಕೆಟ್ ಆರಂಭಕ್ಕೆ ಇನ್ನು ಎರಡು ದಿನವಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಿಲಯನ್ಸ್, ಹೀರೋ ಹೊಂಡ, ಯಾಹೂ ಇತ್ಯಾದಿ  ವಿವಿಧ ಕಂಪೆನಿಗಳ ಜಾಹೀರಾತುಗಳು ರಾರಾಜಿಸುತ್ತಿವೆ. ನಲವತ್ತಮೂರು ದಿನಗಳ ಕಾಲ ನಡೆಯುವ ‘ಕ್ರಿಕೆಟ್ ಹಬ್ಬ’ಕ್ಕೆ ಆಗಮಿಸುವ ಹತ್ತು ದೇಶಗಳ ಆಟಗಾರರನ್ನು ಸ್ವಾಗತಿಸಲು ಕ್ರೀಡಾಂಗಣ ಸಜ್ಜಾಗಿದೆ. ವಿಶ್ವಕಪ್‌ನ ಐದು ಪಂದ್ಯಗಳು ಇಲ್ಲಿ ನಡೆಯಲಿದ್ದು 2.5 ಲಕ್ಷ ಕ್ರೀಡಾಭಿಮಾನಿಗಳು ಪಂದ್ಯದ ಸವಿ ಸವಿಯಬಹುದಾಗಿದೆ.ಕ್ರೀಡಾಂಗಣದಲ್ಲಿ ವಿಶ್ವಕಪ್ ಕ್ರಿಕೆಟ್‌ನ ಇತಿಹಾಸದ ಕುರಿತು ತಿಳಿಯಬಯಸುವ ಆಸಕ್ತರಿಗೂ ಅವಕಾಶ ಕಲ್ಪಿಸಲಾಗಿದೆ. 1975ರಲ್ಲಿ ನಡೆದ ಮೊದಲ ವಿಶ್ವಕಪ್‌ನಿಂದ ಹಿಡಿದು ಕೊನೆಯ ವಿಶ್ವಕಪ್ (2007ರ ವರೆಗೂ) ಯಾವ ತಂಡ ಚಾಂಪಿಯನ್ ಆಗಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.ನಿತ್ಯ ಟ್ರಾಫಿಕ್ ಜಾಮ್‌ನ ಒತ್ತಡದಿಂದ ಬೇಸತ್ತೋ, ಕೆಲಸದ ಒತ್ತಡದಿಂದ ಮುಕ್ತರಾಗಿ ನೆಮ್ಮದಿ ಬಯಸುವ ಮನಸ್ಸುಗಳು ನಿರುಮ್ಮಳವಾಗಲು ಈ ಕ್ರೀಡಾಂಗಣ ವೇದಿಕೆ ಒದಗಿಸಲಿದೆ. ಆಟದ ಕ್ರೇಜು, ಟಿಕೆಟ್ ಪಡೆಯುವ ಗೋಜು, ಸಂಭ್ರಮಿಸುವ ಮೋಜು ಎಲ್ಲವೂ ಕ್ರಿಕೆಟ್ ಪ್ರೇಮಿಗಳಿಗೆ ಬಿಟ್ಟಿದ್ದು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಅಂತರರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯ ನಡೆದಿದ್ದು ನವೆಂಬರ್ 1974ರಲ್ಲಿ. ಅದು ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವಣ ಪಂದ್ಯ. ಆದರೆ ಫಲಿತಾಂಶ ಮಾತ್ರ ನಿರಾಸೆ ಮೂಡಿಸಿತ್ತು. ಈ ಪಂದ್ಯದಲ್ಲಿ ಭಾರತ 267 ರನ್‌ಗಳ ಹೀನಾಯ ಸೋಲು ಅನುಭವಿಸಿತ್ತು. ಇಲ್ಲಿ ಮೊದಲ ಏಕದಿನ ಪಂದ್ಯ ಭಾರತ ಮತ್ತು ಶ್ರೀಲಂಕಾ ನಡುವೆ ನಡೆದಿತ್ತು. ಅದು 1982ರ ಸೆಪ್ಟಂಬರ್ 26ರಂದು.ಈ ಕ್ರೀಡಾಂಗಣದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಭಾರತ ಭರ್ಜರಿಆರು ವಿಕೆಟ್‌ಗಳ ಗೆಲುವು ಪಡೆದಿತ್ತು. ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಈಗಾಗಲೇ ಎರಡು ಅಭ್ಯಾಸ ಪಂದ್ಯಗಳು ಸಹ ಚಿನ್ನಸ್ವಾಮಿಯ ಅಂಗಳದಲ್ಲಿ ನಡೆದಿವೆ. ಭಾರತದ ಪಾಲಿಗಂತೂ ಸಕಾರಾತ್ಮಕ ಫಲಿತಾಂಶವೇ ಬಂದಿದೆ.ಭಾರತ-ಇಂಗ್ಲೆಂಡ್ (ಫೆ. 27), ಇಂಗ್ಲೆಂಡ್- ಐರ್ಲೆಂಡ್ (ಮಾರ್ಚ್ 2), ಭಾರತ-ಐರ್ಲೆಂಡ್ (ಮಾರ್ಚ್ 6), ಕೀನ್ಯಾ-ಆಸ್ಟ್ರೇಲಿಯಾ (ಮಾರ್ಚ್ 13) ಹಾಗೂ ಕೆನಡಾ-ಆಸ್ಟ್ರೇಲಿಯಾ (ಮಾರ್ಚ್ 16) ರಂದು ಒಟ್ಟು ಐದು ಪಂದ್ಯಗಳಿಗೆ ಚಿನ್ನಸ್ವಾಮಿ ಅಂಗಳ ಸಾಕ್ಷಿಯಾಗಲಿದೆ. ಬಣ್ಣಬಣ್ಣದ ಚಿತ್ತಾರ, ಹೊಳೆಯುವ ಕುರ್ಚಿಗಳು, ಕಣ್ಮನ ಸೆಳೆಯುವ ಜಾಹೀರಾತು ಫಲಕಗಳು, ವಿಶ್ವಕಪ್ ಇತಿಹಾಸದ ಮಾಹಿತಿ ಒಳಗೊಂಡಂತೆ ಮದುವೆ ಮನೆಯಂತೂ ಸಿದ್ಧವಾಗಿದೆ ಬೀಗರು ಬರುವುದಷ್ಟೇ ಬಾಕಿ!. 

                                 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry