ವಿಶ್ವಕರ್ಮ ಅಭಿವೃದ್ಧಿ ನಿಗಮ ರಚನೆಗೆ ಒತ್ತಾಯ

ಬುಧವಾರ, ಜೂಲೈ 17, 2019
30 °C

ವಿಶ್ವಕರ್ಮ ಅಭಿವೃದ್ಧಿ ನಿಗಮ ರಚನೆಗೆ ಒತ್ತಾಯ

Published:
Updated:

ಹುಬ್ಬಳ್ಳಿ: ವಿಶ್ವಕರ್ಮ ಅಭಿವೃದ್ಧಿ ನಿಗಮ ರಚಿಸುವ ಮೂಲಕ ಸರ್ಕಾರ ಸಮುದಾಯಕ್ಕೆ ಹಿಡಿದಿರುವ ಗ್ರಹಣ ನಿವಾರಣೆಗೆ ಮುಂದಾಗುವಂತೆ ಸಮಾಜದ ರಾಜ್ಯ ಸಮಿತಿ ಅಧ್ಯಕ್ಷ ಕೆ.ಪಿ.ನಂಜುಂಡಿ ಆಗ್ರಹಿಸಿದರು.ಬೆಂಗಳೂರಿನಲ್ಲಿ ಸೆಪ್ಟಂಬರ್ 17ರಂದು ನಡೆಯಲಿರುವ ರಾಜ್ಯಮಟ್ಟದ ಐದನೇ ವಿಶ್ವಕರ್ಮ ಪೂಜಾ ಮಹೋತ್ಸವದ ಅಂಗವಾಗಿ ಇಲ್ಲಿನ ಮುನ್ಸಿಪಲ್ ಎಂಪ್ಲಾಯಿಸ್ ಅಸೋಸಿಯೇಶನ್ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ವಿಶ್ವಕರ್ಮ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡಲಿ ಹಾಗೂ ಅಂದು ಸಾರ್ವತ್ರಿಕ ರಜೆ ಘೋಷಿಸಲಿ ಎಂದು ಒತ್ತಾಯಿಸಿದ ನಂಜುಂಡಿ, ಸಮುದಾಯದ ಹಿರಿಯರಿಗೆ ಮಾಶಾಸನ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲು ಆಗ್ರಹಿಸಿದರು.ರಾಜ್ಯದಲ್ಲಿ ವಿಶ್ವಕರ್ಮ ಸಮುದಾಯದ 35 ಲಕ್ಷ ಮಂದಿ ಇದ್ದಾರೆ. ರಾಜಕೀಯ ಜಾಗೃತಿ ಇಲ್ಲದ ಪರಿಣಾಮ ಸಮುದಾಯ ಮೊದಲಿನಿಂದಲೂ ಶೋಷಣೆಗೊಳಗಾಗುತ್ತಾ ಬಂದಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ವಿಶ್ವಕರ್ಮ ಅಭಿವೃದ್ಧಿ ನಿಗಮ ರಚಿಸುವುದಾಗಿ ಭರವಸೆ ನೀಡಿತ್ತು. ಅದನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು.ವಿಶ್ವಕರ್ಮರಿಗೆ ಸಂವಿಧಾನಬದ್ಧ ಹಕ್ಕುಗಳನ್ನು ನಿರಾಕರಿಸಲಾಗಿದೆ. ಪರಿಶಿಷ್ಟರಿಗೆ ನೀಡುವ ಸವಲತ್ತುಗಳಲ್ಲಿ ಶೇ 0.1ರಷ್ಟು ಸಮುದಾಯಕ್ಕೆ ದೊರೆತಿಲ್ಲ. ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಲ್ಲಿ ಮಾತ್ರ ಸಮಾಜಕ್ಕೆ ಭವಿಷ್ಯ ಇದೆ. ನಮ್ಮ ಮುಂದಿನ ಪೀಳಿಗೆಯ ಹಿತಾಸಕ್ತಿ ರಕ್ಷಣೆಯ ನಿಟ್ಟಿನಲ್ಲಿ ಸಮಾಜ ಕಟ್ಟುವವರು ಮಾತ್ರ ನಮ್ಮಟ್ಟಿಗೆ ಬನ್ನಿ ಎಂದು ನಂಜುಂಡಿ ಸಲಹೆ ನೀಡಿದರು.ವಿಶ್ವಕರ್ಮ ಎಂಬುದು ಜಾತಿಸೂಚಕವಲ್ಲ ಬದಲಿಗೆ ಅದೊಂದು ಸಂಸ್ಕೃತಿ. ಚಿನ್ನ-ಬೆಳ್ಳಿ ಕೆಲಸಗಾರರು, ಮರದ ಕೆಲಸಗಾರರು, ಕಬ್ಬಿಣದ ಕೆಲಸ ಮಾಡುವವರು ಸೇರಿದಂತೆ ಐವರು ವಿವಿಧ ವೃತ್ತಿಗಳಲ್ಲಿ ತೊಡಗಿರುವವರು ಇದರಲ್ಲಿ ಬರುತ್ತಾರೆ ಎಂದು ಹೇಳಿದರು.ಮಹಾನಗರ ಪಾಲಿಕೆ ಸದಸ್ಯ ರಾಮಣ್ಣ ಬಡಿಗೇರ ಮಾತನಾಡಿ, ಮನುಷ್ಯ ಹುಟ್ಟಿದಾಗ ತೊಟ್ಟಿಲು ಮಾಡಲು, ಸತ್ತಾಗ ಚಟ್ಟ ಕಟ್ಟಲು ವಿಶ್ವಕರ್ಮರು ಬೇಕಿದೆ. ಆದರೆ ಸಮುದಾಯಕ್ಕೆ ಸೌಲಭ್ಯಗಳಿಂದ ವಂಚನೆಯಾಗಿ ಈಗಿರುವ ಶಾಪ ವಿಮೋಚನೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.ವಿಶ್ವಕರ್ಮ ಸಮುದಾಯ ಇಂದು ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಅಡಿಯಲ್ಲಿ ಬರುತ್ತಿದೆ. ಸಾವಿರಾರು ಜಾತಿಗಳ ನಡುವೆ ನಮ್ಮ ದನಿಗೆ ಅಲ್ಲಿ ಬೆಲೆ ಇಲ್ಲದಂತಾಗಿದೆ. ವಿಶ್ವಕರ್ಮರಿಗೆ ಪ್ರತ್ಯೇಕ ಅಭಿವೃದ್ಧಿ ನಿಮಗ ನಿರ್ಮಿಸಿದಲ್ಲಿ ಮಾತ್ರ ನ್ಯಾಯ ದೊರೆಯಲಿದೆ ಎಂದು ಹೇಳಿದರು.ಸಭೆಯಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಣ್ಣ ಬಡಿಗೇರ, ಧಾರವಾಡ ಜಿಲ್ಲಾ ಸಮಿತಿ ಅಧ್ಯಕ್ಷ ಮನೋಹರ ಲಕ್ಕುಂಡಿ, ಬೆಳಗಾವಿ ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಆರ್.ಬಡಿಗೇರ, ಮುಖಂಡರಾದ ಬಿ.ಕೆ.ಪತ್ತಾರ, ಎನ್.ಬಿ.ಬಡಿಗೇರ ಮತ್ತಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry